ಪುದುಚೇರಿ ಮಾಜಿ ಸಚಿವನ ಹತ್ಯೆ
ಕಾರೈಕಲ್, ಜ.3: ಪುದುಚೇರಿಯ ಮಾಜಿ ಕೃಷಿ ಸಚಿವ ವಿಎಂಸಿ ಶಿವಕುಮಾರ್ ಅವರನ್ನು ಅಪರಿಚಿತ ತಂಡವೊಂದು ಕೊಚ್ಚಿ ಕೊಲೆಗೈದು ಪರಾರಿಯಾದ ಘಟನೆ ಕಾರೈಕಲ್‌ನಲ್ಲಿ ನಡೆದಿದೆ.
ಪ್ರದೇಶದಲ್ಲಿ ನಡೆಯುತ್ತಿದ್ದ ನಿರ್ಮಾಣ ಕಾಮಗಾರಿಯನ್ನು ವೀಕ್ಷಿಸಲು ತೆರಳುತ್ತಿದ್ದ ಶಿವಕುಮಾರ್ ಅವರಿದ್ದ ಕಾರನ್ನು ತಮಿಳುನಾಡಿನ ನಾಗಪಟ್ಟಿಣಂ ಜಿಲ್ಲೆಯ ನೆರವಿ-ಟಿ.ಆರ್. ಪಟ್ಟಿಣಂ ಎಂಬಲ್ಲಿ ತಡೆದು ನಿಲ್ಲಿಸಿದ ದುಷ್ಕರ್ಮಿಗಳ ತಂಡ, ಮಚ್ಚಿನಿಂದ ಅವರ ಮೇಲೆ ಹಲ್ಲೆ ನಡೆಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ತೀವ್ರ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯುವ ಸಂದರ್ಭ ಮೃತಪಟ್ಟರು. 67 ವರ್ಷದ ಶಿವಕುಮಾರ್ ಪತ್ನಿ, ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ನೆರವಿ-ಟಿ.ಆರ್.ಪಟ್ಟಿಣಂ ಕ್ಷೇತ್ರದಿಂದ ನಾಲ್ಕು ಬಾರಿ ಡಿಎಂಕೆ ಪಕ್ಷದಿಂದ ಮತ್ತು ಒಮ್ಮೆ ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದು ಬಂದಿದ್ದು, 1996ರಿಂದ 2000ದವರೆಗೆ ಪಾಂಡಿಚೇರಿ ವಿಧಾನಸಭೆಯ ಸ್ಪೀಕರ್ ಆಗಿ ಕಾರ್ಯ ನಿರ್ವಹಿಸಿದ್ದರು. ಪ್ರಸ್ತುತ ಅವರು ಎಐಎಡಿಎಂಕೆ ಜೊತೆ ಗುರುತಿಸಿಕೊಂಡಿದ್ದರು.
--------------------------------------





