ಅಖಿಲ ಭಾರತ ವಿ.ವಿ ಬಾಲ್ ಬ್ಯಾಡ್ಮಿಂಟನ್ : ಮಂಗಳೂರು ವಿ.ವಿ ಗೆ ಹ್ಯಾಟ್ರಿಕ್ ಪ್ರಶಸ್ತಿ

ಮೂಡುಬಿದಿರೆ, ಜ.3 : ಚೆನ್ನೈನ ಎಸ್.ಆರ್.ಎಮ್ ವಿಶ್ವ ವಿದ್ಯಾನಿಲಯದ ಆಶ್ರಯದಲ್ಲಿ ಡಿ. 31ರಿಂದ ಜ. 2ರವರೆಗೆ ನಡೆದ ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಅಮೋಘ ಸಾಧನೆಯನ್ನು ತೋರಿದ ಮಂಗಳೂರು ವಿ.ವಿ ವನಿತೆಯರು ಹ್ಯಾಟ್ರಿಕ್ ಪ್ರಶಸ್ತಿಯನ್ನು ಗಳಿಸುವಲ್ಲಿ ಸಫಲರಾಗಿದ್ದಾರೆ.
ದಾಖಲೆಯ ಸತತ 13 ನೇ ಭಾರಿ ಅಖಿಲ ಭಾರತ ವಿ.ವಿ ಚಾಂಪಿಯನ್‌ಶಿಪ್‌ನಲ್ಲಿ ಲೀಗ್‌ಗೆ ಅರ್ಹತೆಯನ್ನು ಗಳಿಸಿದ ಮಂಗಳೂರು ವಿ.ವಿಯು ಲೀಗ್ ಹಂತದ ಪಂದ್ಯಗಳಲ್ಲಿ ತಮಿಳುನಾಡಿನ ಬಿ. ಎಸ್.ಎ.ಆರ್ ವಿ.ವಿ ಯನ್ನು ಹಾಗೂ ಮದ್ರಾಸ್ ವಿ.ವಿ ತಂಡಗಳನ್ನು ನೇರ ಸೆಟ್‌ಗಳಿಂದ ಸೋಲಿಸಿ ಅಂತಿಮ ಹಣಾಹಣಿಯಲ್ಲಿ ಅತಿಥೇಯ ಎಸ್. ಆರ್. ಎಮ್ ವಿ.ವಿ ಯನ್ನು 35-23 ಹಾಗೂ 35-28 ನೇರ ಸೆಟ್‌ಗಳಿಂದ ಸೋಲಿಸಿ ಸತತ 3 ನೇ ಭಾರಿ ಪ್ರಶಸ್ತಿಗಳಿಸಿದ ಸಾಧನೆ ಮಾಡಿದೆ.
ಪುರುಷರಿಗೆ ರನ್ನರಪ್ ಪ್ರಶಸ್ತಿ
ಇದೇ ಟೂರ್ನಿಯ ಪುರುಷರ ವಿಭಾಗದಲ್ಲಿ ಕಳೆದ ಬಾರಿ ಚಾಂಪಿಯನ್ ಆಗಿದ್ದ ಮಂಗಳೂರು ವಿ.ವಿ ಲೀಗ್ ಹಂತದಲ್ಲಿ ಉತ್ತಮ ಸಾಧನೆ ತೋರಿದರೂ ನಿರ್ಣಾಯಕ ಪಂದ್ಯದಲ್ಲಿ ಅತಿಥೆಯ ಎಸ್.ಆರ್.ಎಮ್ ವಿ.ವಿ ವಿರುದ್ಧ 35-28 , 28-35 ಹಾಗೂ 31-35ರ ಪ್ರಬಲ ಹೋರಾಟದಲ್ಲಿ ಪರಾಭವಗೊಂಡು ರನ್ನರಪ್ ಪ್ರಶಸ್ತಿಗೆ ತೃಪ್ತಿಗೊಂಡಿತು.
ಮಂಗಳೂರು ವಿ.ವಿ ಯನ್ನು ಪ್ರತಿನಿಧಿಸಿದ ಪುರುಷರ ಹಾಗೂ ಮಹಿಳೆಯರ ವಿಭಾಗದ ಎಲ್ಲಾ ಆಟಗಾರರು ಮೂಡಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು. ಮಂಗಳೂರು ವಿ.ವಿ ಬಾಲ್‌ಬ್ಯಾಡ್ಮಿಂಟನ್ ತಂಡದ ಅಮೋಘ ಸಾಧನೆಗಾಗಿ ವಿ.ವಿ ಕುಲಪತಿಗಳಾದ ಪ್ರೊ. ಬೈರಪ್ಪ, ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾಎಮ್ .ಮೋಹನ ಆಳ್ವ ಹಾಗೂ ವಿ.ವಿ ದೈಹಿಕ ಶಿಕ್ಷಣ ನಿರ್ದೇಶಕ ಡಾ ಕಿಶೋರ್ ಕುಮಾರ್ ಅಭಿನಂದನೆ ವ್ಯಕ್ತಪಡಿಸಿದ್ದಾರೆ.







