ಅಪರಿಚಿತ ಬಂದೂಕುದಾರಿಗಳಿಂದ ಪತ್ರಕರ್ತನ ಹತ್ಯೆ

ಪಾಟ್ನಾ, ಜ.4: ಬಿಹಾರದ ಸಮಸ್ತಿಪುರ ಜಿಲ್ಲೆಯ ಸಲ್ಖಾನಿ ಗ್ರಾಮದಲ್ಲಿ ಬಂದೂಕು ಹಿಡಿದ ಅಪರಿಚಿತ ವ್ಯಕ್ತಿಗಳು ಪತ್ರಕರ್ತನನ್ನು ಗುಂಡಿಕ್ಕಿ ಕೊಂದಿರುವ ಘಟನೆ ವರದಿಯಾಗಿದೆ.
5-6 ಅಪರಿಚಿತ ವ್ಯಕ್ತಿಗಳು ಪತ್ರಕರ್ತ ಬ್ರಜ್ ಕುಮಾರ್ ಸಿಂಗ್ ಮೇಲೆ ಗುಂಡಿನ ದಾಳಿ ನಡೆಸಿ ಸ್ಥಳದಲ್ಲೇ ಕೊಲೆ ಮಾಡಿದ್ದಾರೆ ಎಂದು ಸಮಸ್ತಿಪುರದ ಎಸ್ಪಿ ನವಲ್ ಕಿಶೋರ್ ಪ್ರಸಾದ್ ಸಿಂಗ್ ಹೇಳಿದ್ದಾರೆ.
ಸಿಂಗ್ ಅವರು ಪ್ರಮುಖ ಹಿಂದಿ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದರು. ಬಂದೂಕುದಾರಿಗಳು ಹಿಂಬಾಲಿಸುತ್ತಿದ್ದಾಗ ಆತ ಇಟ್ಟಿಗೆ ಕಾರ್ಖಾನೆಯೊಂದ ಒಳಗೆ ಓಡಿದ್ದ. ಅಲ್ಲೇ ಆತನ ಮೇಲೆ ಗುಂಡು ಹಾರಿಸಲಾಗಿದೆ. ಕೊಲೆಗೆ ಕಾರಣ ಇನ್ನೂ ಪತ್ತೆಯಾಗದೆ ಇದ್ದರೂ, ಹಳೇ ಧ್ವೇಷ ಕೊಲೆಗೆ ಕಾರಣ ಎಂದು ಶಂಕಿಸಲಾಗಿದೆ. ಸಲ್ಖಾನಿ ಗ್ರಾಮವು ಸಮಸ್ತಿಪುರ ಜಿಲ್ಲಾ ಕೇಂದ್ರದಿಂದ 40ಕಿ.ಮೀ.ಗಳ ದೂರದ ಭಿಭೂತಿಪುರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುತ್ತದೆ.
ಈ ಹಿಂದೆ 2016 ನವೆಂಬರ್ ನಲ್ಲಿ ರೋಟಸ್ ನಲ್ಲಿ ಖ್ಯಾತ ಪ್ರಾದೇಶಿಕ ಪತ್ರಿಕೆಯ ಪತ್ರಕರ್ತ ಧರ್ಮೇಂದ್ರ ಸಿಂಗ್ ರನ್ನು ಅವರು ಬರೆದ ಅಕ್ರಮ ಕಲ್ಲು ಸಾಗಾಣೆ ವಿಚಾರವಾಗಿ ಕೊಲೆ ಮಾಡಲಾಗಿತ್ತು. ಹಿಂದಿ ದಿನಪತ್ರಿಕೆ ಹಿಂದೂಸ್ತಾನ್ ಸಿವನ್ ಬ್ಯೂರೋ ಮುಖ್ಯಸ್ಥ ರಾಜೇಡೋ ರಂಜನ್ ಸಿವಾನ್ ಜಿಲ್ಲೆಯಲ್ಲಿ 2016 ಮೇನಲ್ಲಿ ಕೊಲೆಯಾಗಿದ್ದರು.





