ಡಿಎಂಕೆ ಕಾರ್ಯಕಾರಿ ಅಧ್ಯಕ್ಷರಾಗಿ ಸ್ಟಾಲಿನ್ ಆಯ್ಕೆ

ಚೆನ್ನೈ, ಜ.4: ಡಿಎಂಕೆ ಸಾಮಾನ್ಯ ಕೌನ್ಸಿಲ್ ಸಭೆಯಲ್ಲಿ ಪಕ್ಷದ ಖಜಾಂಚಿ ಹಾಗೂ ತಮಿಳುನಾಡಿನ ವಿಪಕ್ಷ ನಾಯಕ ಸ್ಟಾಲಿನ್ ಅವರನ್ನು ಪಕ್ಷದ ಕಾರ್ಯಕಾರಿ ಅಧ್ಯಕ್ಷರಾಗಿ ಬುಧವಾರ ಆಯ್ಕೆ ಮಾಡಲಾದೆ.
ಸ್ಟಾಲಿನ್ ತಂದೆ ಹಾಗೂ ಮಾಜಿ ಮುಖ್ಯಮಂತ್ರಿ ಕರುಣಾನಿಧಿ(93 ವರ್ಷ) ಅನಾರೋಗ್ಯದಿಂದ ಬಳಲುತ್ತಿರುವ ಕಾರಣ ಸ್ಟಾಲಿನ್‌ಗೆ ಭಡ್ತಿ ನೀಡಲಾಗಿದೆ. ಸುಮಾರು 50 ವರ್ಷಗಳ ಬಳಿಕ ಇದೇ ಮೊದಲ ಬಾರಿ ಕರುಣಾನಿಧಿ ಅನುಪಸ್ಥಿತಿಯಲ್ಲಿ ಪಕ್ಷದ ಕೌನ್ಸಿಲ್ ಸಭೆ ನಡೆಯಿತು.
ಸುಮಾರು 3000 ಸದಸ್ಯರನ್ನು ಒಳಗೊಂಡ ಪಕ್ಷದ ಸಾಮಾನ್ಯ ಕೌನ್ಸಿಲ್ ಸಭೆ ಪಕ್ಷದ ಮುಖ್ಯಕಚೇರಿಯಲ್ಲಿ ಬುಧವಾರ ನಡೆಯಿತು.
ಇಂದು ಬೆಳಗ್ಗೆ ಗೋಪಾಲಪುರಂ ನಿವಾಸದಲ್ಲಿರುವ ಕರುಣಾನಿಧಿಯ ಆರೋಗ್ಯ ತಪಾಸಣೆ ನಡೆಸಿದ ವೈದ್ಯರು ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದರು.
ಡಿಎಂಕೆ ಜನರಲ್ ಕೌನ್ಸಿಲ್ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ, ಮಾಜಿ ಕ್ಯೂಬಾ ಅಧ್ಯಕ್ಷ ಫಿಡೆಲ್ ಕ್ಯಾಸ್ಟ್ರೊ , ಮಾಜಿ ಡಿಎಂಕೆ ಸಚಿವರ ಕೋ. ಸಿ. ಮಣಿ ಹಾಗೂ ಮಾಜಿ ‘ತುಘಲಕ್’ ಸಂಪಾದಕ ಚೋ. ಎಸ್. ರಾಮಸ್ವಾಮಿಗೆ ಶ್ರದ್ದಾಂಜಲಿ ಅರ್ಪಿಸಲಾಯಿತು.
ಸಭೆಯಲ್ಲಿ ಕೇಂದ್ರ ಸರಕಾರದ ನೋಟು ಅಮಾನ್ಯ ಕ್ರಮವನ್ನು ಖಂಡಿಸಲಾಯಿತು. 63ರ ಪ್ರಾಯದ ಸ್ಟಾಲಿನ್‌ರನ್ನು ಕಾರ್ಯಕಾರಿ ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದು ಸೇರಿದಂತೆ ಹಲವು ನಿರ್ಧಾರಗಳನ್ನು ಕೈಗೊಳ್ಳಲಾಯಿತು.
ಸ್ಟಾಲಿನ್‌ಗೆ ಭಡ್ತಿ ನೀಡುವ ಮೂಲಕ ತಮಿಳುನಾಡಿನ ಮತ್ತೊಂದು ಮುಖ್ಯ ರಾಜಕೀಯ ಪಕ್ಷದಲ್ಲಿ ಅಧಿಕಾರದ ಹಸ್ತಾಂತರವಾಗಿದೆ. ಕರುಣಾನಿಧಿಯವರ ಹಿರಿಯ ಮಗ ಎಂ..ೆ ಅಳಗಿರಿಯವರನ್ನು 2014ರ ಮಾರ್ಚ್‌ನಲ್ಲಿ ಪಕ್ಷದಿಂದ ಉಚ್ಚಾಟಿಸಲಾಗಿತ್ತು. ಈ ಹಿಂದೆ ಡಿಎಂಕೆ ಅಧಿಕಾರದಲ್ಲಿದ್ದಾಗ ಅಳಗಿರಿ ಉಪ ಮುಖ್ಯಮಂತ್ರಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಸ್ಟಾಲಿನ್ ಪಕ್ಷದಲ್ಲಿ ಭಡ್ತಿ ಪಡೆದಿದ್ದಾರೆ.
‘‘ಇದೊಂದು ಮಹತ್ತರ ಜವಾಬ್ದಾರಿ. ಪಕ್ಷದ ಕಾರ್ಯಕಾರಿ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳಲು ಸಂತೋಷವಾಗುತ್ತದೆ’’ ಎಂದು ಸ್ಟಾಲಿನ್ ಹೇಳಿದ್ದಾರೆ.







