ಜಗತ್ತಿನ ಹಸಿವು ನಿವಾರಿಸಲು ಆಹಾರ ಬ್ಯಾಂಕ್ ತೆರೆದ ಯುಎಇ

ದುಬೈ,ಜ.4: ಆಹಾರ ಬ್ಯಾಂಕ್ ಮೂಲಕ ಹೆಚ್ಚುವರಿ ಆಹಾರವನ್ನು ಸಂಗ್ರಹಿಸಿ ಅಗತ್ಯವಿರುವವರಿಗೆ ತಲುಪಿಸುವ ಯೋಜನೆಯೊಂದಕ್ಕೆ ಯುಎಇಯಲ್ಲಿ ಚಾಲನೆ ನೀಡಲಾಗಿದೆ. ಗಲ್ಫ್ ವಲಯದಲ್ಲೇ ಆಹಾರದ ಒಂದು ತುಣುಕು ಕೂಡಾ ಹಾಳಾಗದಂತಿರುವ ಮೊದಲ ನಗರವಾಗಲು ದುಬೈ ಸಿದ್ಧವಾಗಿದೆ. ಯುಎಇ ಅಧ್ಯಕ್ಷ ಶೇಖ್ ಖಲೀಫ ಬಿನ್ ಝಾಯಿದ್ ಅಲ್ ನಹ್ಯಾನ್ ಘೋಷಿಸಿದ "ದಾನ ವರ್ಷ"ದ ಪ್ರಯುಕ್ತ ಯುಎಇ ಉಪಾಧ್ಯಕ್ಷ ಪ್ರಧಾನಿ ಹಾಗೂ ದುಬೈ ಆಡಳಿತಗಾರ ಶೇಖ್ ಮುಹಮ್ಮದ್ ಬಿನ್ ರಾಶಿದ್ ಅಲ್ ಮಕ್ತೂಂ ಎಮಿರೇಟ್ಸ್ ಫುಡ್ ಬ್ಯಾಂಕ್‌ಗೆ ಚಾಲನೆ ನೀಡಿದ್ದಾರೆ. ಶೇಖ್ ಮುಹಮ್ಮದ್ ದುಬೈ ಆಡಳಿತಾಧಿಕಾರಿಯಾಗಿ ಹನ್ನೊಂದು ವರ್ಷ ಪೂರ್ತಿಯಾಗುವ ಈ ವೇಳೆಯಲ್ಲಿ ಸ್ವಯಂ ಸೇವಾ ಸಂಘಟನೆಗಳ ಒಕ್ಕೂಟ ಮುಹಮ್ಮದ್ ಬಿನ್ ರಾಶಿದ್ ಅಲ್ ಮಕ್ತೂಂ ಗ್ಲೋಬಲ್ ಇನಿಶ್ಯೇಟಿವ್ ಯೋಜನೆ ಜಾರಿಗೆ ತರಲಿದೆ.
ಜಗತ್ತಿನಾದ್ಯಂತ ಹಸಿದ ಜನರಿಗೆ ವಿತರಿಸಲು ಒಕ್ಕೂಟ ಹೊಟೇಲ್‌ಗಳು, ಆಹಾರ ಫ್ಯಾಕ್ಟರಿಗಳು, ತೋಟಗಳು, ಸೂಪರ್ ಮಾರ್ಕೆಟ್‌ಗಳು, ಆಹಾರ ವಿತರಣಾ ಕಂಪೆನಿಗಳಿಂದ ಆಹಾರವನ್ನು ಸಂಗ್ರಹಿಸಲಿದೆ. ಆಹಾರದ ಶುಚಿತ್ವ ಕಾಪಾಡಿ ಉನ್ನತ ಗುಣಮಟ್ಟವನ್ನು ಪಾಲಿಸಿ ಪ್ಯಾಕ್ ಮಾಡಿ ದೇಶ, ವಿದೇಶಗಳಲ್ಲಿರುವ ಹಸಿವು ಪೀಡಿತ ಜನರಿಗೆ ತಲುಪಿಸಲಾಗುವುದು ಎಂದು ಪ್ರಕಟನೆ ತಿಳಿಸಿದೆ. ಬೃಹತ್ ಹೋಟೆಲ್ ಗ್ರೂಪ್‌ಗಳು, ಹಣ್ಣು, ತರಕಾರಿ ತೋಟಗಳು, ಸೂಪರ್ ಮಾರ್ಕೆಟ್‌ಗಳನ್ನು ಸಾಮಾಜಿಕ ಹೊಣೆಗಾರಿಕೆಯ ಚಟುವಟಿಗಳ ಯೋಜನೆಗಳೊಂದಿಗೆ ಏಕೀಕೃತಗೊಳಿಸಲಾಗಿದೆ ಎಂದು ವರದಿ ತಿಳಿಸಿದೆ.







