ಯಡಿಯೂರಪ್ಪ ವಸ್ತುಸ್ಥಿತಿ ಅರಿತು ಮಾತನಾಡಲಿ: ಮೇಯರ್ ಹರಿನಾಥ್
ತುಂಬೆ ಡ್ಯಾಮ್

ಮಂಗಳೂರು,ಜ.4: ತುಂಬೆ ಡ್ಯಾಮ್ ಬಗ್ಗೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ವಸ್ತುಸ್ಥಿತಿ ಅರಿತುಕೊಂಡು ಮಾತನಾಡಲಿ ಎಂದು ಮಂಗಳೂರು ಮನಪಾ ಮೇಯರ್ ಹರಿನಾಥ್ ಹೇಳಿದ್ದಾರೆ.
ತನ್ನ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಅನುಭವಿ ರಾಜಕಾರಣಿಯಾದ ಯಡಿಯೂರಪ್ಪ ತುಂಬೆ ಡ್ಯಾಮ್ ಬಗ್ಗೆ ಯಾರದೋ ಮಾತು ಕೇಳಿ ರಾಜಕೀಯ ಹೇಳಿಕೆ ನೀಡಬಾರದಿತ್ತು. ಡ್ಯಾಮ್ ನಿರ್ಮಾಣದಿಂದ ಹಲವು ರೈತರಿಗೆ ಸಮಸ್ಯೆಯಾಗಲಿದೆ. ಭೂಮಿಯ ಮುಳುಗಡೆಯಾಗುವ ರೈತರಿಗೆ ಪರಿಹಾರ ನೀಡುವ ಪ್ರಕ್ರಿಯೆ ನಡೆಯುತ್ತಿದೆ. ವಸ್ತುಸ್ಥಿತಿ ಹೀಗಿದ್ದರೂ ರೈತರ ಪರ ಹೋರಾಟ ಮಾಡುವುದಾಗಿ ಯಡಿಯೂರಪ್ಪ ನೀಡಿದ ಹೇಳಿಕೆ ಅಸಂಬದ್ಧ. ಡ್ಯಾಮ್ ನಿರ್ಮಾಣಕ್ಕೆ ಸಂಬಂಧಿಸಿದ 2007ರ ಪ್ರಸ್ತಾವನೆಯಲ್ಲಿ ಅವರು ರೈತರಿಗೆ ಪರಿಹಾರ ನೀಡುವ ಬಗ್ಗೆ ಉಲ್ಲೇಖಿಸಿರಲಿಲ್ಲ. ಆದರೆ, ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಮುಖ್ಯಮಂತ್ರಿ ಸಿದ್ದರಾಮಯ್ಯರ ಬಳಿ ಒತ್ತಡ ಹೇಳಿ ಪರಿಹಾರದ ಬಗ್ಗೆ ಕ್ರಮ ಜರಗಿಸಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕವಿತಾ ಸನಿಲ್, ಲ್ಯಾನ್ಸಿಲಾಟ್ ಪಿಂಟೋ, ಶಶಿಧರ ಹೆಗ್ಡೆ, ಅಪ್ಪಿ, ಬಶೀರ್ ಅಹ್ಮದ್ ಉಪಸ್ಥಿತರಿದ್ದರು.





