ಕೊನೆಗೂ ಇಂಗ್ಲಿಷ್ ಗೆ ಎಸ್ ಎಂದ ಕ್ಯೂಬಾ

ಹವಾನ, ಜ.4: ಕ್ಯೂಬಾ ದೇಶ ನಿಧಾನವಾಗಿ ಇಂಗ್ಲಿಷ್ ಭಾಷೆಯ ಮಹತ್ವವನ್ನು ಅರಿಯಲಾರಂಭಿಸಿದೆ. ಇದೀಗ ಹೆಚ್ಚೆಚ್ಚು ಕ್ಯೂಬನ್ನರು ಇಂಗ್ಲಿಷ್ ಕಲಿಯಲು ಆರಂಭಿಸಿದ್ದಾರೆ. ಎಲ್ಲಾ ಪ್ರೌಢಶಾಲೆ ಹಾಗೂ ವಿಶ್ವವಿದ್ಯಾನಿಲಯ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಭಾಷೆಯಲ್ಲಿ ಪಾರಮ್ಯ ಅಗತ್ಯವೆಂದು ಕ್ಯೂಬಾ ಸರಕಾರ ಈಗಾಗಲೇ ಹೇಳಿದೆ.
ಒಂದೊಮ್ಮೆ ಕ್ಯೂಬಾದ ನೆಚ್ಚಿನ ವಿದೇಶಿ ಭಾಷೆ ರಷ್ಯನ್ ಆಗಿತ್ತು ಹಾಗೂ ವಿದ್ಯಾರ್ಥಿಗಳಿಗೆ ರಷ್ಯನ್ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಒಂದು ಭಾಷೆಯನ್ನು ಆಯ್ದುಕೊಳ್ಳುವ ಅಧಿಕಾರವಿತ್ತು. ಆದರೆ ಈಗ ಇಂಗ್ಲಿಷ್ ಭಾಷೆ ಕಲಿಕೆಗೆ ಹೆಚ್ಚಿನ ಆದ್ಯತೆಯಿದೆ. ಶಾಲೆಗಳು ಪರಿಣಾಮಕಾರಿ ಇಂಗ್ಲಿಷ್ ಕಲಿಕೆಗೆ ಹಲವು ಕಾರ್ಯಕ್ರಮಗಳನ್ನೂ ಹಮ್ಮಿಕೊಂಡಿವೆಯಾದರೂ ಭಾಷಾ ಕಲಿಕೆ ಸಾಂಪ್ರದಾಯಿಕ ಪದ್ಧತಿಯಂತೆಯೇ ನಡೆಯುತ್ತಿದ್ದು ಹೆಚ್ಚಾಗಿ ಪಠ್ಯ ಪುಸ್ತಕಗಳನ್ನೇ ಅವಲಂಬಿಸಿದ್ದು, ಮಕ್ಕಳಿಗೆ ಗಿಳಿಪಾಠ ಮಾಡುವುದನ್ನು ಅಭ್ಯಸಿಸಲಾಗುತ್ತದೆ ಹಾಗೂ ಇಲ್ಲಿ ಅಂತರ್ಜಾಲ ಸಂಪರ್ಕವೂ ಸೀಮಿತ.
ಅತ್ತ ಕೆಲ ಕ್ಯೂಬನ್ನರು ಯಾವುದೇ ತರಗತಿಗಳಿಗೆ ಹಾಜರಾಗದೆ ತಾವೇ ಇಂಗ್ಲಿಷ್ ಭಾಷೆ ಕಲಿಯಲು ಆರಂಭಿಸಿದ್ದಾರೆ. ಕ್ಯೂಬಾದಲ್ಲಿ ಕಳೆದ ವರ್ಷ ದಾಖಲೆ ಪ್ರವಾಸಿಗರು ಆಗಮಿಸಿದ್ದು ಪ್ರವಾಸಿಗರೊಂದಿಗೆ ವ್ಯವಹರಿಸಲು ಇಂಗ್ಲಿಷ್ ಭಾಷಾ ಜ್ಞಾನ ಸಹಕಾರಿ ಇದು ತಮ್ಮ ವ್ಯವಹಾರಕ್ಕೂ ಉತ್ತಮ ಎಂದು ಹಲವು ಕ್ಯೂಬನ್ನರ ಅಭಿಪ್ರಾಯವಾಗಿದೆ.
ಕ್ಯೂಬಾದಲ್ಲಿರುವ ಏಕೈಕ ಇಂಗ್ಲಿಷ್ ಪುಸ್ತಕ ಮಳಿಗೆ ಕ್ಯೂಬಾ ಲಿಬ್ರೋದಲ್ಲಿದೆ. ಇದು ಹವಾನ ನಿವಾಸಿ ಹಾಗೂ ಅಮೆರಿಕಾ ಮೂಲದ ಪತ್ರಕರ್ತೆ ಕಾನ್ನರ್ ಗೊರ್ರಿಯವರ ಪ್ರಯತ್ನದ ಫಲವಾಗಿದೆ. ಆರಂಭದಲ್ಲಿ ಅಷ್ಟೊಂದು ಉತ್ತೇಜನ ದೊರೆಯದಿದ್ದರೂ ಇದೀಗ ಕ್ಯೂಬನ್ನರು ಈ ಪುಸ್ತಕ ಮಳಿಗೆಯಿಂದ ಸಂತುಷ್ಟರಾಗಿದ್ದಾರೆ.
ಪ್ರವಾಸೋದ್ಯಮ ಹಾಗೂ ಉದ್ಯಮ ಸಂಬಂಧ ಸ್ಥಾಪಿಸಲಾಗುವ ಅಂತಾರಾಷ್ಟ್ರೀಯ ಸಂಪರ್ಕಗಳಿಂದಾಗಿಯೇ ಕ್ಯೂಬಾದ ಜನರು ಇಂಗ್ಲಿಷ್ ಕಲಿಯಲು ವಹಿಸುತ್ತಿದ್ದಾರೆ.







