ಕ್ಯಾರೆಟ್.....ಆಹಾ,ಏನಚ್ಚರಿ !
ದಿನಕ್ಕೊಂದು ತರಕಾರಿ
ನೈಸರ್ಗಿಕವಾಗಿ ಸಿಹಿಯನ್ನು ಹೊಂದಿರುವ, ರುಚಿರುಚಿಯಾದ ಗಜ್ಜರಿ ಅಥವಾ ಕ್ಯಾರೆಟ್ ನಿಮ್ಮ ಆಹಾರದ ತರಕಾರಿಗಳ ಪಟ್ಟಿಗೆ ಆರೋಗ್ಯಕರ ಸೇರ್ಪಡೆಯಾಗುತ್ತದೆ. ನಿಜಕ್ಕೂ ಈ ಬೇರು ಸ್ವರೂಪದ ತರಕಾರಿಯು ಬಿಟಾ-ಕ್ಯಾರೊಟಿನ್, ಫಾಲ್ಕರಿನಾಲ್, ವಿಟಾಮಿನ್ ಎ, ಖನಿಜಗಳು ಮತ್ತು ಆ್ಯಂಟಿ ಆಕ್ಸಿಡಂಟ್‌ಗಳಂತಹ ಆರೋಗ್ಯಕ್ಕೆ ಲಾಭದಾಯಕವಾದ ಸಂಯುಕ್ತಗಳನ್ನು ಸಮೃದ್ಧವಾಗಿ ಹೊಂದಿದೆ.
ಸಸ್ಯಶಾಸ್ತ್ರೀಯವಾಗಿ ಅಪಿಯಾಕೆ ಅಥವಾ ಡಾಕಸ್ ಕುಟುಂಬಕ್ಕೆ ಸೇರಿರುವ ಗಜ್ಜರಿಯ ವೈಜ್ಞಾನಿಕ ಹೆಸರು ಡಾಕಸ್ ಕ್ಯಾರೋಟಾ. ವಿಶ್ವಾದ್ಯಂತ ಬೆಳೆಯಲಾಗುವ ಗಜ್ಜರಿಯು ದ್ವೈವಾರ್ಷಿಕ ಬೆಳೆಯಾಗಿದ್ದು, ತನ್ನ ಜೀವಿತಾವಧಿಯ ಎರಡನೇ ವರ್ಷದಲ್ಲಿ ಹೂವು ಬಿಡಲು ಆರಂಭಿಸುತ್ತದೆ.
ಆದರೆ ಸಾಮಾನ್ಯವಾಗಿ ಗಜ್ಜರಿಯನ್ನು ಪೂರ್ಣವಾಗಿ ಬೆಳೆಯುವ ಮೊದಲೇ ಅದರ ಗೆಡ್ಡೆಯು ಸುಮಾರು ಒಂದು ಇಂಚು ವ್ಯಾಸ ಹೊಂದಿದಾಗಲೇ ಕೊಯ್ಲು ಮಾಡಲಾಗುತ್ತದೆ. ಗಜ್ಜರಿಯನ್ನು ವಿವಿಧ ಬಣ್ಣಗಳಲ್ಲಿ ಮತ್ತು ಆಕಾರಗಳಲ್ಲಿ ಬೆಳೆಯಲಾಗುತ್ತದೆ. ಏಷ್ಯಾದ ಹಲವಾರು ಪ್ರದೇಶಗಳಲ್ಲಿ ಇದು ಚಳಿಗಾಲದ ಬೆಳೆಯಾಗಿದೆ.
ಗಜ್ಜರಿ ಹೇಗೆ ಆರೋಗ್ಯದಾಯಕ..?
ಸಿಹಿಯಾದ ಮತ್ತು ಗರಿಗರಿಯಾದ ಗಜ್ಜರಿಯಲ್ಲಿ ಆ್ಯಂಟಿಆಕ್ಸಿಡಂಟ್‌ಗಳು, ವಿಟಾಮಿನ್‌ಗಳು ಮತ್ತು ನಾರಿನಂಶ ಹೇರಳವಾಗಿವೆ. ಪ್ರತಿ 100 ಗ್ರಾಂ ಗಜ್ಜರಿಯು ಕೇವಲ 41 ಕ್ಯಾಲೊರಿಗಳನ್ನು ಒಳಗೊಂಡಿರುತ್ತದೆ. ಕೊಲೆಸ್ಟರಾಲ್ ಎನ್ನುವುದು ಈ ತರಕಾರಿಯಲ್ಲಿ ಇಲ್ಲವೇ ಇಲ್ಲ.
ಗಜ್ಜರಿ ವಿಟಾಮಿನ್-ಎ ಮತ್ತು ಕ್ಯಾರೊಟಿನ್‌ಗಳ ಗಣಿಯಾಗಿದೆ. ಅದರಲ್ಲಿರುವ ಫ್ಲಾವೊನಾಯ್ಡಾ ಸಂಯುಕ್ತಗಳು ಚರ್ಮ,ಶ್ವಾಸಕೋಶ ಮತ್ತು ಬಾಯಿ ಕ್ಯಾನ್ಸರ್‌ಗಳ ವಿರುದ್ಧ ರಕ್ಷಣೆಯನ್ನು ನೀಡಬಹುದು ಎನ್ನುವುದು ಅಧ್ಯಯನಗಳಿಂದ ಬೆಳಕಿಗೆ ಬಂದಿದೆ.
ಯಕೃತ್ತಿನ ಜೀವಕೋಶಗಳಲ್ಲಿ ಕ್ಯಾರೊಟಿನ್‌ಗಳು ವಿಟಾಮಿನ್ ಎ ಆಗಿ ರೂಪಾಂತರಗೊಳ್ಳುತ್ತವೆ. ಬೀಟಾ ಕ್ಯಾರೊಟಿನ್ ಈ ಬೇರುಗಡ್ಡೆಗಳಲ್ಲಿರುವ ಪ್ರಮುಖ ಕ್ಯಾರೊಟಿನ್ ಆಗಿದೆ. ಶಕ್ತಿಶಾಲಿ ನೈಸರ್ಗಿಕ ಆ್ಯಂಟಿಆಕ್ಸಿಡಂಟ್‌ಗಳಲ್ಲಿ ಒಂದಾಗಿರುವ ಇದು ಹಾನಿಕಾರಕವಾದ ಆಕ್ಸಿಜನ್ ಫ್ರೀ ರ್ಯಾಡಿಕಲ್‌ಗಳ ವಿರುದ್ಧ ನಮ್ಮ ಶರೀರಕ್ಕೆ ರಕ್ಷಣೆಯನ್ನು ನೀಡುತ್ತದೆ.
ಜೊತೆಗೆ ಕಣ್ಣಿನ ಆರೋಗ್ಯವನ್ನು ಉತ್ತಮವಾಗಿ ಕಾಯ್ದುಕೊಳ್ಳುವ, ವೀರ್ಯ ಉತ್ಪಾದನೆಯನ್ನು ಹೆಚ್ಚಿಸುವಂತಹ ವಿಟಾಮಿನ್-ಎ ಮಾಡುವ ಎಲ್ಲ ಕೆಲಸಗಳನ್ನೂ ಮಾಡುತ್ತದೆ.
ಗಜ್ಜರಿ ಪಾಲಿ ಆ್ಯಂಟಿ ಆಕ್ಸಿಡಂಟ್ ಆಗಿರುವ ಫಾಲ್ಕರಿನಾಲ್ ಅನ್ನು ಪುಷ್ಕಳವಾಗಿ ಒಳಗೊಂಡಿದೆ. ಇದು ಟ್ಯೂಮರ್‌ಗಳಲ್ಲಿಯ ಕ್ಯಾನ್ಸರ್ ಪೂರ್ವ ಜೀವಕೋಶಗಳನ್ನು ನಾಶಪಡಿಸುವ ಮೂಲಕ ಕ್ಯಾನ್ಸರ್ ವಿರುದ್ಧದ ರಕ್ಷಣೆಗೆ ನೆರವಾಗುತ್ತದೆ ಎನ್ನುವುದು ಸಂಶೋಧನೆಗಳಿಂದ ಸಾಬೀತಾಗಿದೆ.
ತಾಜಾ ಗಜ್ಜರಿಯು ವಿಟಾಮಿನ್ ಸಿ ಅನ್ನು ಉತ್ತಮ ಪ್ರಮಾಣದಲ್ಲಿ ಹೊಂದಿದ್ದು, ನಮ್ಮ ಶರೀರಕ್ಕೆ ಅಗತ್ಯವಾದ ಶೇ.9ರಷ್ಟು ವಿಟಾಮಿನ್ ಸಿ ಅನ್ನು ಒದಗಿಸುತ್ತದೆ. ನೀರಿನಲ್ಲಿ ಕರಗಬಲ್ಲ ಆ್ಯಂಟಿಆಕ್ಸಿಡಂಟ್ ಅಗಿರುವ ವಿಟಾಮಿನ್ ಸಿ ಆರೋಗ್ಯಕರ ಅಂಗಾಂಶ, ಹಲ್ಲು ಮತ್ತು ಒಸಡು ಹೊಂದಿರಲು ನೆರವಾಗುತ್ತದೆ.
ಅದರ ಆ್ಯಂಟಿಆಕ್ಸಿಡಂಟ್ ಗುಣವು ಹಾನಿಕಾರಕ ಫ್ರೀ ರ್ಯಾಡಿಕಲ್‌ಗಳನ್ನು ಶರೀರದಿಂದ ತೆಗೆದುಹಾಕುವ ಮೂಲಕ ಕಾಯಿಲೆಗಳು ಮತ್ತು ಕ್ಯಾನ್ಸರ್‌ಗಳಿಂದ ರಕ್ಷಣೆಯನ್ನು ನೀಡುತ್ತದೆ.
ಜೊತೆಗೆ ಫಾಲಿಕ್ ಆ್ಯಸಿಡ್, ವಿಟಾಮಿನ್ ಬಿ-6(ಪೈರಿಡಾಕ್ಸಿನ್), ಥಿಯಾಮಿನ್, ಪ್ಯಾಂಟೊಥೆನಿಕ್ ಆ್ಯಸಿಡ್ ಇತ್ಯಾದಿಗಳಂತಹ ಬಿ-ಕಾಂಪ್ಲೆಕ್ಸ್ ಗುಂಪಿನ ಹಲವಾರು ವಿಟಾಮಿನ್‌ಗಳು ಗಜ್ಜರಿಯಲ್ಲಿ ಹೇರಳವಾಗಿವೆ. ಇವು ಶರೀರದ ಪಚನಕ್ರಿಯೆಯಲ್ಲಿ ಎಂಝೈಮ್‌ಗಳಂತೆ ಕಾರ್ಯ ನಿರ್ವಹಿಸುತ್ತವೆ.
ತಾಮ್ರ,ಕ್ಯಾಲ್ಸಿಯಂ,ಪೊಟ್ಯಾಶಿಯಂ,ಮ್ಯಾಂಗನೀಸ್ ಮತ್ತು ರಂಜಕಗಳಂತಹ ಖನಿಜಗಳೂ ಗಜ್ಜರಿಯಲ್ಲಿ ಇವೆ. ಪೊಟ್ಯಾಶಿಯಂ ಜೀವಕೋಶ ಮತ್ತು ಶರೀರದ್ರವಗಳ ಪ್ರಮುಖ ಘಟಕವಾಗಿದ್ದು, ಸೋಡಿಯಮ್‌ನ ದುಷ್ಪರಿಣಾಮವನ್ನು ನಿವಾರಿಸುವ ಮೂಲಕ ಎದೆಬಡಿತ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಮ್ಯಾಂಗನೀಸ್‌ನ್ನು ನಮ್ಮ ಶರೀರವು ಆ್ಯಂಟಿಆಕ್ಸಿಡಂಟ್ ಎಂಝೈಮ್ ಆಗಿ ಬಳಸಿಕೊಳ್ಳುತ್ತದೆ.