ಭಾರತದ ಮುಖ್ಯ ನ್ಯಾಯಾಧೀಶರಾಗಿ ಜೆ.ಎಸ್. ಖೇಹರ್ ಪ್ರಮಾಣ ವಚನ

ಹೊಸದಿಲ್ಲಿ,ಜ.4: ಭಾರತದ 44ನೇ ಮುಖ್ಯ ನ್ಯಾಯಾಧೀಶರಾಗಿ ನ್ಯಾ.ಜೆ.ಎಸ್. ಖೇಹರ್ ಅವರು ಬುಧವಾರ ಪ್ರಮಾಣ ವಚನವನ್ನು ಸ್ವೀಕರಿಸಿದರು. ನಿರ್ಗಮಿಸುತ್ತಿರುವ ಮುಖ್ಯ ನ್ಯಾಯಾಧೀಶ ಟಿ.ಎಸ್.ಠಾಕೂರ್ ಅವರು ನ್ಯಾ.ಕೆಹರ್ ನೇಮಕಕ್ಕಾಗಿ ಡಿ.6ರಂದು ಸರಕಾರಕ್ಕೆ ಶಿಫಾರಸು ಮಾಡಿದ್ದರು. ಒಂದು ವರ್ಷದ ಅಧಿಕಾರಾವಧಿಯ ಬಳಿಕ ನ್ಯಾ.ಠಾಕೂರ್ ಜ.3ರಂದು ಸೇವೆಯಿಂದ ನಿವೃತ್ತರಾಗಿದ್ದಾರೆ.
ಸರಕಾರದ ರಾಷ್ಟ್ರೀಯ ನ್ಯಾಯಾಂಗ ನೇಮಕಗಳ ಆಯೋಗ ಕಾಯ್ದೆಯನ್ನು ರದ್ದುಗೊಳಿಸಿದ್ದ ಸಂವಿಧಾನ ಪೀಠದ ನೇತೃತ್ವ ವಹಿಸಿದ್ದ ನ್ಯಾ. ಖೇಹರ್ ಅವರು ಸಿಖ್ ಸಮುದಾಯಕ್ಕೆ ಸೇರಿದ ಭಾರತದ ಮೊದಲ ಮುಖ್ಯ ನ್ಯಾಯಾಧೀಶರೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ನ್ಯಾ. ಖೇಹರ್ ಅವರು 2017,ಆ.28ರವರೆಗೆ ಅಧಿಕಾರಾವಧಿಯನ್ನು ಹೊಂದಿದ್ದಾರೆ. 2011,ಸೆ.13ರಂದು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿ ಅವರು ಅಧಿಕಾರವನ್ನು ಸ್ವೀಕರಿಸಿದ್ದರು.
2016,ಜನವರಿಯಲ್ಲಿ ಅರುಣಾಚಲ ಪ್ರದೇಶದಲ್ಲಿ ರಾಷ್ಟ್ರಪತಿ ಆಡಳಿತ ಹೇರಿಕೆಯನ್ನು ತಳ್ಳಿಹಾಕಿದ್ದ ಪೀಠದ ನೇತೃತ್ವವನ್ನೂ ನ್ಯಾ. ಖೇಹರ್ ವಹಿಸಿದ್ದರು.
ತನ್ನ ಕಂಪನಿಗಳಲ್ಲಿಯ ಹೂಡಿಕೆದಾರರಿಗೆ ಹಣವನ್ನು ವಾಪಸ್ ಮಾಡದ ಆರೋಪ ಹೊತ್ತಿರುವ ಸಹಾರಾ ಸಮೂಹದ ಅಧ್ಯಕ್ಷ ಸುಬ್ರತಾ ರಾಯ್ ಅವರನ್ನು ಜೈಲಿಗೆ ಕಳುಹಿಸಿದ ಪೀಠದ ಸದಸ್ಯರಾಗಿಯೂ ನ್ಯಾ. ಖೇಹರ್ ಕಾರ್ಯ ನಿರ್ವಹಿಸಿದ್ದರು.







