ಫೇಸ್ ಬುಕ್ ಸ್ಥಾಪಕ ಝಕರ್ ಬರ್ಗ್ 2016 ರಲ್ಲಿ ಸಾಧಿಸಿದ್ದೇನು? 2017 ರಲ್ಲಿ ಅವರ ಗುರಿಯೇನು?
ಯುವಜನತೆ ಓದಲೇಬೇಕಾದ ವಿಷಯ

ನ್ಯೂಯಾರ್ಕ್, ಜ.4: 2016 ವರ್ಷ ಈಗ ಇತಿಹಾಸಕ್ಕೆ ಸೇರಿ ಜಗತ್ತು ಹಲವು ನಿರೀಕ್ಷೆಗಳೊಂದಿಗೆ ಹೊಸ ವರ್ಷ 2017ಕ್ಕೆ ಕಾಲಿಟ್ಟಿದೆ. ಈ ಹೊಸ ವರ್ಷದಲ್ಲಿ ಯುವಜನತೆ ಓದಲೇ ಬೇಕಾದ ವಿಷಯವೊಂದಿದೆ. ಅದೇನೆಂದರೆ ಖ್ಯಾತ ಸಾಮಾಜಿಕ ಜಾಲತಾಣ ಫೇಸ್ ಬುಕ್ ಇದರ ಸ್ಥಾಪಕ ಮಾರ್ಕ್ ಝಕರ್ ಬರ್ಗ್ ಅವರು ಮಾಡಿದ ಒಂದು ಪೋಸ್ಟ್. ಕಳೆದ ವರ್ಷ ತಾವು ಏನನ್ನು ಸಾಧಿಸಿದ್ದೇವೆ ಹಾಗೂ ಹೊಸ ವರ್ಷದಲ್ಲಿ ತಮ್ಮ ಗುರಿಯೇನು ಎಂದು ಝಕರ್ ಬರ್ಗ್ ಅದರಲ್ಲಿ ವಿವರಿಸಿದ್ದಾರೆ.
ಪ್ರತಿ ವರ್ಷ ತಾವು ಹೊಸ ವಿಷಯಗಳನ್ನು ತಿಳಿದುಕೊಳ್ಳುವುದನ್ನು ಒಂದು ವೈಯಕ್ತಿಕ ಸವಾಲಾಗಿ ಸ್ವೀಕರಿಸುತ್ತಿರುವುದಾಗಿ, ಝಕರ್ ಬರ್ಗ್ ಹೇಳಿದ್ದು ತಾವು ಇತ್ತೀಚಿನ ವರ್ಷಗಳಲ್ಲಿ 36 ಮೈಲು ಓಡಿದ್ದಾಗಿ, ತಮಗೋಸ್ಕರ ಒಂದು ಸರಳ ಮನೆ ಕಟ್ಟಿರುವುದಾಗಿ ಹಾಗೂ 25 ಪುಸ್ತಕಗಳನ್ನು ಓದಿರುವುದಾಗಿಯೂ ಬರೆದಿದ್ದಾರಲ್ಲದೆ ತಾವು ಮಾಂಡರಿನ್ ಕಲಿತಿದ್ದಾಗಿಯೂ ಹೇಳಿಕೊಂಡಿದ್ದಾರೆ.
ಹೊಸ ವರ್ಷಕ್ಕೆ ತಮ್ಮಗುರಿಗಳನ್ನು ವಿವರಿಸಿದ ಝಕರ್ ಬರ್ಗ್, ತಾವು ಅಮೆರಿಕಾದ ಪ್ರತಿಯೊಂದು ರಾಜ್ಯದ ಜನರನ್ನು ವರ್ಷ ಕಳೆಯುವುದರೊಳಗಾಗಿ ಭೇಟಿಯಾಗಲು ಬಯಸಿರುವುದಾಗಿ ಹೇಳಿದ್ದಾರೆ. ‘‘ನಾನೀಗಾಗಲೇ ಹಲವು ರಾಜ್ಯಗಳಲ್ಲಿ ಬಹಳಷ್ಟು ಸಮಯ ಕಳೆದಿರುವುದರಿಂದ ಇನ್ನು ಈ ವರ್ಷ ನನಗೆ ಸುಮಾರು 30 ರಾಜ್ಯಗಳನ್ನು ಭೇಟಿಯಾಗುವುದಿದೆ,’’ ಎಂದು ಅವರು ತಿಳಿಸಿದ್ದಾರೆ.
ಹೆಚ್ಚಿನ ಜನರನ್ನು ಭೇಟಿಯಾಗಿ ಅವರು ಹೇಗೆ ಬದುಕುತ್ತಿದ್ದಾರೆ, ಏನು ಮಾಡುತ್ತಿದ್ದಾರೆ ಹಾಗೂ ಭವಿಷ್ಯದ ಬಗ್ಗೆ ಏನು ತಿಳಿದುಕೊಂಡಿದ್ದಾರೆಂದು ತಿಳಿಯುವ ಹಂಬಲವಿದೆ ಎಂದು ಝಕರ್ ಬರ್ಗ್ ತಮ್ಮ ಪೋಸ್ಟ್ ನಲ್ಲಿ ಬರೆದಿದ್ದಾರೆ.
ತಮ್ಮೆದುರಿಗಿರುವ ಸವಾಲಿನ ಬಗ್ಗೆ ಬರೆಯುತ್ತಾ ನಾವು ಇತಿಹಾಸದ ಮಹತ್ವದ ಕಾಲಘಟ್ಟದಲ್ಲಿದ್ದೇವೆ ಎಂದು ಹೇಳಿದ ಫೇಸ್ ಬುಕ್ ಸ್ಥಾಪಕ, ತಂತ್ರಜ್ಞಾನ ಹಾಗೂ ಜಾಗತೀಕರಣದಿಂದ ಹಲವು ಪ್ರಯೋಜನಗಳಾಗಿವೆ ಹಾಗೂ ಹಲವರ ಜೀವನವನ್ನು ಸವಾಲುಭರಿತವಾಗಿಸಿದೆ,ಆದರೆ ಇದು ಹೆಚ್ಚಿನ ವಿಭಜನೆಯಭಾವನೆಗೆ ಕಾರಣವಾಗಿದ್ದು ತಂತ್ರಜ್ಞಾನದಿಂದ ಎಲ್ಲರಿಗೂ ಪ್ರಯೋಜನವಾಗುವಂತೆ ಮಾಡುವಲ್ಲಿ ಶ್ರಮಿಸಬೇಕು, ಎಂದಿದ್ದಾರೆ.
‘‘ಜಗತ್ತನ್ನು ಸಂಪರ್ಕಿಸಿ ಎಲ್ಲರಿಗೂ ದನಿ ನೀಡಬೇಕೆಂಬ ನಿಟ್ಟಿನಲ್ಲಿ ನಾನು ಕೆಲಸ ಮಾಡುತ್ತಿದ್ದೇನೆ ಹಾಗೂ ಈ ದನಿಗಳನ್ನು ನಾನು ಈ ವರ್ಷ ಹೆಚ್ಚಾಗಿ ಕೇಳ ಬಯಸುತ್ತೇನೆ. ಈ ಮೂಲಕ ಜಗತ್ತಿನಲ್ಲಿ ಸಕಾರಾತ್ಮಕ ಬದಲಾವಣೆ ತರುವ ನಿಟ್ಟಿನಲ್ಲಿ ಫೇಸ್ ಬುಕ್ ಮತ್ತು ಚಾನ್ ಝುಕರ್ ಬರ್ಗ್ ಇನಿಷ್ಯೇಟಿವ್ ಮುಂದೆ ಹೆಜ್ಜೆಯಿಡಲು ಸಹಕರಿಸುವುದು ಎಂದು ನಂಬಿದ್ದೇನೆ,’’ ಎಂದಿದ್ದಾರೆ.
‘‘ಈ ವರ್ಷ ನನ್ನ ರೋಡ್ ಟ್ರಿಪ್ ಗಳು ಸಣ್ಣ ನಗರಗಳ ಹಾಗೂ ವಿಶ್ವವಿದ್ಯಾನಿಲಯಗಳನ್ನು ಭೇಟಿಯಾಗುವುದು, ಶಿಕ್ಷಕರನ್ನು ಮತ್ತು ವಿಜ್ಞಾನಿಗಳನ್ನು ಭೇಟಿಯಾಗುವುದು ದೇಶದಾದ್ಯಂತವಿರುವ ನಮ್ಮ ಕಚೇರಿಗಳನ್ನು ಸಂದರ್ಶಿಸುವುದು, ಹಾಗೂ ನೀವೆಲ್ಲಾ ಸೂಚಿಸುವ ಮನರಂಜನೆಯ ಸ್ಥಳಗಳಿಗೆ ಭೇಟಿ ನೀಡುವುದಾಗಿದೆ,’’ ಎಂದು ಝಕರ್ ಬರ್ಗ್ ಬರೆದಿದ್ದಾರೆ.







