ಜಯಲಲಿತಾ ಉಡುಗೊರೆ ನೀಡಿದ ಕಾರು ಮರಳಿಸಿ ಅಣ್ಣಾ ಡಿಎಂಕೆ ತೊರೆದ ಎನ್. ಸಂಪತ್

ಚೆನ್ನೈ,ಜ.4: ಅಣ್ಣಾಡಿಎಂಕೆ ಹಿರಿಯ ನಾಯಕ ಪ್ರಮುಖ ಭಾಷಣಕರ್ತ ಎನ್. ಸಂಪತ್ ಪಕ್ಷ ತೊರೆದಿದ್ದಾರೆ. ಜಯಲಲಿತಾ ಉಡುಗೊರೆ ನೀಡಿದ ಕಾರು ರಾಯಪೇಟೆ ಅಣ್ಣಾಡಿಎಂಕೆ ಕಚೇರಿಗೆ ಮರಳಿಸಿ ತನ್ನ ಪಕ್ಷ ತ್ಯಾಗವನ್ನು ಅವರು ಘೋಷಿಸಿದ್ದಾರೆ. ಪ್ರಚಾರ ವಿಭಾಗದ ಸಹಕಾರ್ಯದರ್ಶಿಯಾಗಿದ್ದ ಸಂಪತ್‌ರನ್ನು ಕಳೆದವರ್ಷ ಪಕ್ಷದ ಸ್ಥಾನಗಳಿಂದ ಜಯಲಲಿತಾ ಕಿತ್ತು ಹಾಕಿದ್ದರು. 2014ರ ನೆರೆಹಾವಳಿ ವೇಳೆ ಸರಕಾರವನ್ನು ಟೀಕಿಸಿದ್ದು ಜಯಲಲಿತಾರ ಕೋಪಕ್ಕೆ ಕಾರಣವಾಗಿತ್ತು.
ಕಳೆದ ಕೆಲವು ತಿಂಗಳಿಂದ ಪಕ್ಷ ಚಟುವಟಿಕೆಗಳಿಂದ ಅವರು ದೂರ ಉಳಿದಿದ್ದರು. ಈ ಹಿನ್ನೆಲೆಯಲ್ಲಿ ಪಕ್ಷವನ್ನು ತೊರೆಯುತ್ತಿದ್ದೇನೆ ಎಂದು ಅವರು ತಿಳಿಸಿದ್ದಾರೆ. ಶಶಿಕಲಾರನ್ನು ಅಣ್ಣಾ ಡಿಎಂಕೆಯ ಮುಖ್ಯಸ್ಥಾನಕ್ಕೆ ತಂದಿರುವ ಬಗ್ಗೆ ಅವರನ್ನು ಕೇಳಿದಾಗ ಈಗ ಎಲ್ಲ ಮುಗಿದಿದೆ ಎಂದು ಪ್ರತಿಕ್ರಿಯಿಸಿ ತಾನು ರಾಜಕೀಯ ಸನ್ಯಾಸ ತೆಗೆದು ಕೊಳ್ಳುವ ಸೂಚನೆ ನೀಡಿದ್ದಾರೆ. 1994ರಿಂದ ವೈಕೊ ಜೊತೆ ಎಂಡಿಎಂಕೆಯಲ್ಲಿ ಸಂಪತ್ ಕೆಲಸಮಾಡುತ್ತಿದ್ದರು. 2012ರಲ್ಲಿ ಎಐಡಿಎಂಕೆ ಸೇರಿದ್ದರು. ನಂತರ ಪಕ್ಷದ ಹಿರಿಯ ಪದಾಧಿಕಾರಿಯಾಗಿ ಅವರನ್ನು ಜಯಲಲಿತಾ ನೇಮಿಸಿದ್ದರು. ಈ ನಡುವೆ ಶಶಿಕಲಾ ಮುಖ್ಯಮಂತ್ರಿ ಆಗಬೇಕೆಂದು ಜಯಲಲಿತಾರ ಸಹೋದರ ಪುತ್ರ ದೀಪಕ್ ಜಯಕುಮಾರ್ ಆಗ್ರಹಿಸಿದ್ದಾರೆಂದು ವರದಿ ತಿಳಿಸಿದೆ.





