ಕ್ರೀಡಾ ಸಂಸ್ಥೆಗಳ ವಿರುದ್ಧ ಕೇಸ್ ದಾಖಲಿಸಿದ ಮಾಜಿ ಅಥ್ಲೀಟ್ ಶಾಂತಿ ಸೌಂದರಾಜನ್

ಹೊಸದಿಲ್ಲಿ, ಜ.4: ದೋಹಾ ಗೇಮ್ಸ್‌ನ ವೇಳೆ ‘ಲಿಂಗ ಪರೀಕ್ಷೆ’ಯಲ್ಲಿ ಅನುತ್ತೀರ್ಣರಾಗಿ ಬೆಳ್ಳಿ ಪದಕವನ್ನು ಕಳೆದುಕೊಂಡಿದ್ದ ಮಾಜಿ ಅಥ್ಲೀಟ್ ಶಾಂತಿ ಸೌಂದರಾಜನ್ 10 ವರ್ಷಗಳ ಬಳಿಕ ಕ್ರೀಡಾ ಸಂಸ್ಥೆಗಳ ವಿರುದ್ಧ ಮಾನವ ಹಕ್ಕು ಉಲ್ಲಂಘನೆ ಪ್ರಕರಣ ದಾಖಲಿಸಿದ್ದಾರೆ.
ತಮಿಳುನಾಡಿನ ಬಡ ಕುಟುಂಬದಿಂದ ಬಂದಿರುವ ಶಾಂತಿ ಮದುರೈ ಎನ್‌ಜಿಒ ನೆರವಿನಿಂದ ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ ಹಾಗೂ ಭಾರತೀಯ ಒಲಿಂಪಿಕ್ಸ್ ಸಂಸ್ಥೆಯ ವಿರುದ್ಧ ಕೇಸ್ ದಾಖಲಿಸಿದ್ದಾರೆ.
2006ರಲ್ಲಿ ಏಷ್ಯನ್ ಗೇಮ್ಸ್‌ನಲ್ಲಿ 800 ಮೀ. ಓಟದಲ್ಲಿ ಶಾಂತಿ ಗೆದ್ದುಕೊಂಡಿದ್ದ ಬೆಳ್ಳಿ ಪದಕವನ್ನು ಏಷ್ಯಾ ಒಲಿಂಪಿಕ್ಸ್ ಕೌನ್ಸಿಲ್ ಹಿಂದಕ್ಕೆ ಪಡೆದುಕೊಂಡಿತ್ತು. ಇದೀಗ ತನಗೆ ಅನ್ಯಾಯವಾಗಿದೆ ಎಂದು ಪ್ರತಿಭಟಿಸಿ ಶಾಂತಿ ಅವರು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ರಾಷ್ಟ್ರೀಯ ಆಯೋಗ ಹಾಗೂ ಮಾನವಹಕ್ಕು ಆಯೋಗ ಹಾಗೂ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ದೂರು ದಾಖಲಿಸಲು ನಿರ್ಧರಿಸಿದ್ದಾರೆ.
‘‘ಮದ್ರಾಸ್ ಹೈಕೋರ್ಟ್ ಅಥವಾ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲು ಶಾಂತಿ ಯೋಜನೆ ಹಾಕಿಕೊಂಡಿದ್ದಾರೆ. 2006ರಲ್ಲಿ ದೋಹಾದಲ್ಲಿ ಶಾಂತಿಯ ಮೇಲೆ ನಿಷೇಧ ಹೇರಿ ಪದಕ ಹಿಂಪಡೆಯಲು ಕಾರಣವಾಗಿದ್ದ ಡೋಪಿಂಗ್ ಟೆಸ್ಟ್ ವರದಿ ಸಹಿತ ಹಲವು ದಾಖಲೆ ಸಂಗ್ರಹಿಸಲು ವಿಳಂಬವಾದ ಕಾರಣ ಮಾನವ ಹಕ್ಕು ಆಯೋಗಕ್ಕೆ ದೂರು ನೀಡಲು ತಡವಾಗಿದೆ’’ ಎಂದು ಮಧುರೈನ ಎನ್‌ಜಿಒ ಮುಖ್ಯಸ್ಥ ಗೋಪಿ ಶಂಕರ್ ತಿಳಿಸಿದರು.
‘‘2006ರಲ್ಲಿ ಆಕೆಯ ವಿರುದ್ಧ ನಡೆಸಲಾದ ಡೋಪಿಂಗ್ ಪರೀಕ್ಷೆಯ ವರದಿಯನ್ನು ಇನ್ನೂ ನೀಡಿಲ್ಲ. ಆ ಪರೀಕ್ಷೆ ನಡೆದು 10 ವರ್ಷಗಳು ಕಳೆದಿವೆ. ವರದಿ ಪಡೆಯಲು ನಾನು ಹಾಗೂ ಶಾಂತಿ ಆರ್‌ಟಿಐಗೆ ಅರ್ಜಿ ಹಾಕಿದ್ದೆವು. ಯಾವ ಆಧಾರದಲ್ಲಿ ಆಕೆಗೆ ನಿಷೇಧ ಹೇರಲಾಗಿದೆ ಎಂಬ ಕುರಿತು ವರದಿ ಇನ್ನೂ ಲಭಿಸಿಲ್ಲ ಇದೀಗ ಶಾಂತಿ ಅವರು ಎಸ್‌ಸಿ ಹಾಗೂ ಎಸ್‌ಟಿ ರಾಷ್ಟ್ರೀಯ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ. ಎಎಫ್‌ಐ, ಐಒಎ, ಸಾಯ್ ಹಾಗೂ ಕ್ರೀಡಾ ಸಚಿವಾಲಯದ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಕಳೆದ ತಿಂಗಳು ಶಾಂತಿ ಮಾನವ ಹಕ್ಕು ಆಯೋಗಕ್ಕೆ ಅರ್ಜಿ ಸಲ್ಲಿಸಿದ್ದಾರೆ’’ ಎಂದು ಶಂಕರ್ ತಿಳಿಸಿದರು.
‘‘ದೋಹಾದಲ್ಲಿ ಶಾಂತಿಯನ್ನು ಅರ್ಧ ದಿವಸ ಅರೆನಗ್ನಗೊಳಿಸಲಾಗಿತ್ತು. ಯಾವ ಪರೀಕ್ಷೆಗೆ ಒಳಗಾಗುತ್ತಿದ್ದೇನೆಂದು ಆಕೆಗೆ ಗೊತ್ತಿರಲಿಲ್ಲ. ಆಕೆಗೆ ಏನೂ ಮಾಹಿತಿ ನೀಡಿರಲಿಲ್ಲ. ಪರೀಕ್ಷೆ ನಡೆಸಿದ ವೈದ್ಯರ ಭಾಷೆ ಆಕೆಗೆ ಗೊತ್ತಿಲ್ಲ. ಬಡ ಹಾಗೂ ಅಸಹಾಯಕ ಮಹಿಳೆಯ ಮೇಲೆ ಮಾನವ ಹಕ್ಕು ಉಲ್ಲಂಘನೆಯಾಗಿದೆ. ಭಾರತದ ಯಾವೊಂದು ಕ್ರೀಡಾ ಪ್ರಾಧಿಕಾರ ಆಕೆಯ ನೆರವಿಗೆ ಬಂದಿರಲಿಲ್ಲ. ಮಾನವಹಕ್ಕು ಉಲ್ಲಂಘನೆ ಮಾಡಿರುವ ಕ್ರೀಡಾ ಪ್ರಾಧಿಕಾರದ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಆಕೆಯಿಂದ ಕಸಿದುಕೊಂಡಿರುವ ಪದಕವನ್ನು ವಾಪಸು ನೀಡಬೇಕೆಂದು ಮನವಿ ಮಾಡುತ್ತಿದ್ದೇವೆ’’ ಎಂದು ಶಂಕರ್ ಹೇಳಿದ್ದಾರೆ.
ಶಾಂತಿಯವರನ್ನು ನಿಷೇಧಿಸಲಾಗಿದೆ. ಏಷ್ಯನ್ ಗೇಮ್ಸ್‌ನ ವೇಳೆ ಒಸಿಎ ಅವರಿಂದ ಪದಕವನ್ನು ಕಿತ್ತುಕೊಂಡಿದೆ. ಹೀಗಾಗಿ ಫೆಡರೇಶನ್‌ನಿಂದ ಏನೂ ಮಾಡಲು ಸಾಧ್ಯವಿಲ್ಲ. ಶಾಂತಿ ವರದಿ ಸಿಕ್ಕಿಲ್ಲ ಎಂದು ಸುಳ್ಳು ಹೇಳುತ್ತಿದ್ದಾರೆ. ಅವರಿಗೆ 2011ರಲ್ಲಿ ವೈದ್ಯಕೀಯ ವರದಿ ನೀಡಲಾಗಿದೆ ಎಂದು ಎಎಫ್‌ಐ ಅಧ್ಯಕ್ಷ ಸುಮರಿವಾಲ ಹೇಳಿದ್ದಾರೆ.
ದೀರ್ಘಕಾಲದ ಹೋರಾಟದ ಬಳಿಕ ಕಳೆದ ತಿಂಗಳು ಶಾಂತಿ ತಮಿಳುನಾಡು ಕ್ರೀಡಾ ಪ್ರಾಧಿಕಾರದಲ್ಲಿ ಕೋಚ್ ಆಗಿ ನೇಮಕಗೊಂಡಿದ್ದರು.







