ದ್ವಂದ್ವ ನಿಯಂತ್ರಣ,ಆಳ ಸಮುದ್ರ ತೆರಿಗೆ ಕುರಿತು ಜಿಎಸ್‌ಟಿ ಬಿಕ್ಕಟ್ಟು ಮುಂದುವರಿಕೆ

ಹೊಸದಿಲ್ಲಿ,ಜ.4: ತೆರಿಗೆದಾತರ ಮೇಲೆ ನಿಯಂತ್ರಣ ಮತ್ತು ಆಳಸಮುದ್ರ ವ್ಯಾಪಾರದ ಮೇಲೆ ತೆರಿಗೆ ಹೇರಿಕೆಯಂತಹ ವಿಷಯಗಳಲ್ಲಿ ಕೇಂದ್ರ ಮತ್ತು ರಾಜ್ಯಗಳು ತಮ್ಮ ಪಟ್ಟುಗಳನ್ನು ಸಡಿಲಿಸಲು ನಿರಾಕರಿಸುವುದರೊಂದಿಗೆ ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಕುರಿತು ಬಿಕ್ಕಟ್ಟು ಇಂದೂ ಮುಂದುವರಿಯಿತು. ಇದರೊಂದಿಗೆ ಜಿಎಸ್‌ಟಿ ಜಾರಿ ಸೆಪ್ಟಂಬರ್‌ವರೆಗೂ ವಿಳಂಬಗೊಳ್ಳಬಹುದು ಎಂಬ ಆತಂಕವೂ ಸೃಷ್ಟಿಯಾಗಿದೆ.
ಎರಡು ದಿನಗಳ ಕಾಲ ನಡೆದ ಜಿಎಸ್‌ಟಿ ಮಂಡಳಿಯ ಎಂಟನೇ ಸಭೆಯು ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸುವಲ್ಲಿ ವಿಫಲಗೊಂಡಿತು. ಇದೇ ವೇಳೆ ಜಿಎಸ್‌ಟಿ ಜಾರಿಗೆ ಸೆಪ್ಟಂಬರ್ ಹೆಚ್ಚು ಸಂಭಾವ್ಯ ಗಡುವಾಗಬಹುದು ಎಂದು ಬಿಜೆಪಿಯೇತರ ಆಡಳಿತದ ರಾಜ್ಯಗಳು ಅಭಿಪ್ರಾಯಿಸಿವೆ.
ಕೇಂದ್ರ ವಿತ್ತಸಚಿವ ಅರುಣ್ ಜೇಟ್ಲಿ ಅವರ ನೇತೃತ್ವದ ಹಾಗೂ ರಾಜ್ಯಗಳ ಪ್ರತಿನಿಧಿಗಳನ್ನೊಳಗೊಂಡಿರುವ ಜಿಎಸ್‌ಟಿ ಮಂಡಳಿಯ ಮುಂದಿನ ಸಭೆಯು ಜ.16ರಂದು ನಡೆಯಲಿದೆ.
ಹೆಚ್ಚು ಶ್ರಮ ವಹಿಸಿ ಕಾರ್ಯವನ್ನು ನಿರ್ವಹಿಸಿದರೆ ಜಿಎಸ್‌ಟಿ ಜಾರಿ ಸೆಪ್ಟಂಬರ್‌ನಲ್ಲಿ ಸಾಧ್ಯವಾಗಬೇಕು. ಜೂನ್ ಅಥವಾ ಜುಲೈನಲ್ಲಿ ಅದು ಜಾರಿಗೊಳ್ಳುತ್ತದೆ ಎಂದು ತಾನು ನಿರೀಕ್ಷಿಸಿಲ್ಲ. ಅದು ನೂತನ ಕಾಯ್ದೆಯಾಗಿದ್ದು, ಹಲವು ಸಂಕೀರ್ಣತೆಗಳನ್ನು ಒಳಗೊಂಡಿದೆ. ಹೀಗಾಗಿ ಪೂರ್ಣ ಸಿದ್ಧತೆಯ ಬಳಿಕವೇ ಅದನ್ನು ಜಾರಿಗೊಳಿಸುವುದು ಒಳ್ಳೆಯದು ಎಂದು ಕೇರಳ ವಿತ್ತಸಚಿವ ಥಾಮಸ್ ಇಸಾಕ್ ಹೇಳಿದರು.
ಅತ್ಯಂತ ಹೆಚ್ಚಿನ ತೆರಿಗೆ ಸ್ತರದಲ್ಲಿ ಪ್ರಸ್ತಾಪಿತ 50:50 ಹಂಚಿಕೆಯ ಬದಲು ಶೇ.60 ರಷ್ಟು ತೆರಿಗೆ ತಮಗೆ ಸಿಗಬೇಕು ಮತ್ತು ಶೇ.40 ಕೇಂದ್ರಕ್ಕೆ ಹೋಗಬೇಕು ಎಂದು ಕೆಲವು ರಾಜ್ಯಗಳು ಬಯಸಿವೆ ಎಂದು ಅವರು ತಿಳಿಸಿದರು.
ರಾಜ್ಯಗಳ ಬೇಡಿಕೆಗಳ ಕುರಿತಂತೆ ಕೇಂದ್ರವು ಯಾವುದೇ ಪ್ರತಿಕ್ರಿಯೆ ವ್ಯಕ್ತಪಡಿಸಿಲ್ಲ. ಅದರೆ ಈ ಬಗ್ಗೆ ನಂತರ ಚರ್ಚಿಸಲು ನಿರ್ಧರಿಸಲಾಗಿದೆ ಎಂದರು.







