ನೋಟು ಅಮಾನ್ಯ ಉದ್ದೇಶ ಸಂಪೂರ್ಣ ವಿಫಲ: ಎಚ್.ಡಿ.ದೇವೇಗೌಡ
ಮೋದಿ ಆಶ್ವಾಸನೆಗಳು ಅಳುವ ಮಕ್ಕಳಿಗೆ ತಂದೆ ಚಾಕಲೆಟ್ ಕೊಟ್ಟಂತೆ
ಬೆಂಗಳೂರು, ಜ. 4: ಕೇಂದ್ರ ಸರಕಾರದ ನೋಟು ಅಮಾನ್ಯಗೊಳಿಸಿದ್ದ ಉದ್ದೇಶ ಸಂಪೂರ್ಣ ವಿಫಲವಾಗಿದೆ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ರಾಷ್ಟ್ರಾಧ್ಯಕ್ಷ ಹೆಚ್.ಡಿ. ದೇವೇಗೌಡರು ಹೇಳಿದ್ದಾರೆ.
ಬುಧವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಆಯೋಜಿಸಿದ್ದ ಬೆಂಗಳೂರು ಮಹಾನಗರ ಜಾತ್ಯತೀತ ಜನತಾದಳದ ಪದಾಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನೋಟು ರದ್ದತಿಯ ತೀರ್ಮಾನದ ನಂತರ ಕಳೆದ ಡಿ. 31 ರಂದು ಪ್ರಧಾನಿ ನರೇಂದ್ರಮೋದಿಯವರು ದೇಶವನ್ನು ಉದ್ದೇಶಿಸಿ ಮಾಡಿದ ಭಾಷಣ ತಮಗೆ ನಿರಾಸೆ ತಂದಿದೆ. ನೋಟು ರದ್ದತಿಯಿಂದ ಆದ ಸಾಮಾನ್ಯ ಜನರ ಪಡಿಪಾಟಿಲನ ಬಗ್ಗೆ ಆ ಭಾಷಣದಲ್ಲಿ ಅವರು ಚಕಾರವೆತ್ತಿಲ್ಲ ಎಂದು ಕಿಡಿ ಕಾರಿದರು.
ನೋಟು ರದ್ದತಿಯ ತೀರ್ಮಾನವನ್ನು ಆರಂಭದಲ್ಲಿ ನಾವೆಲ್ಲಾ ಸ್ವಾಗತಿಸಿದೆವು. ಆದರೆ ದಿನ ಕಳೆದಂತೆ ಅದರಿಂದ ಬಡವರಿಗೆ, ರೈತರಿಗೆ ತೊಂದರೆ ಆಗಿದೆ. 50 ದಿನಗಳ ಬಳಿಕ ಅಚ್ಛೇ ದಿನಗಳು ಬರುತ್ತವೆ ಎಂದು ಜನರನ್ನು ಮರಳು ಮಾಡಿದ್ದರು. ಅದು ಯಶಸ್ವಿ ಆಗಿಲ್ಲ. ನಂತರ ಪ್ರಧಾನಿಗಳು ರಾಷ್ಟ್ರವನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಬಜೆಟ್‌ನಲ್ಲಿ ಘೋಷಣೆ ಮಾಡಿದಂತೆ ಘೋಷಣೆ ಮಾಡಿದರು. ಮುಂದೆ ಬಜೆಟ್ ಮಂಡನೆಯಾಗಬೇಕು. ಸಂಸತ್ತಿನ ಜಂಟಿ ಅಧಿವೇಶನದಲ್ಲಿ ರಾಷ್ಟ್ರಪತಿಗಳು ಸರಕಾರದ ಕಾರ್ಯಕ್ರಮಗಳ ಬಗ್ಗೆ ಹೇಳಬೇಕು. ಈಗಲೇ ಎಲ್ಲವನ್ನೂ ಹೇಳಿದ್ದಾರೆ. ಇದಕ್ಕೆ ಏನು ಹೇಳಬೇಕು ಎಂದು ತಿಳಿಯುತ್ತಿಲ್ಲ ಎಂದು ಲೇವಡಿ ಮಾಡಿದರು.
ಪ್ರಧಾನಿ ನರೇಂದ್ರಮೋದಿಯವರ ಆಶ್ವಾಸನೆಗಳು ಅಳುವ ಮಕ್ಕಳಿಗೆ ತಂದೆ ಚಾಕಲೆಟ್ ಕೊಟ್ಟಂತೆ ಇದೆ. ರೈತರ 60 ದಿನಗಳ ಬಡ್ಡಿ ಮನ್ನಾ ಮಾಡಲಾಗಿದೆ. ಭೀಕರ ಬರಗಾಲದಲ್ಲಿ ರೈತರ ಸಾಲದ ಸಂಪೂರ್ಣ ಬಡ್ಡಿಯನ್ನಾದರೂ ಮನ್ನಾ ಮಾಡುತ್ತಾರೆ ಎಂಬ ನಿರೀಕ್ಷೆ ಹುಸಿಯಾಗಿದೆ. ಇದು ತಮಗೆ ನೋವು ತಂದಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಇದು ಬಹಳ ದಿನ ನಡೆಯುವುದಿಲ್ಲ. ಜನರಲ್ಲಿ ಈಗಾಗಲೇ ಸಂಘರ್ಷ ಆರಂಭವಾಗಿದೆ ನಿಮ್ಮ ಭಾಷಣದ ಕಲೆ ನಿಮಗೆ ಎಲ್ಲ ಕಾಲದಲ್ಲಿ ಜಯ ತಂದು ಕೊಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಸಿಬಿಐ ದುರ್ಬಳಕೆ:
ಕೇಂದ್ರ ಸರಕಾರ ಸಿಬಿಐನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಘಟನಾವಳಿಗಳು ಸಿಬಿಐ ದುರ್ಬಳಕೆಯನ್ನು ಸಾಬೀತುಪಡಿಸಿವೆ ಎಂದು ಅವರು ಹೇಳಿದರು. ಎಲ್ಲ ಕ್ಷೇತ್ರಗಳಲ್ಲಿ ಸ್ಪರ್ಧೆ: ಮುಂದಿನ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಲು ಸದಸ್ಯತ್ವ ಅಭಿಯಾನವನ್ನು ಆರಂಭಿಸಿದ್ದೇವೆ. ಎಲ್ಲಾ 224 ಕ್ಷೇತ್ರಗಳಲ್ಲೂ ಪ್ರವಾಸ ನಡೆಸಿ ಅಭ್ಯರ್ಥಿಗಳನ್ನು ನಿಲ್ಲಿಸುತ್ತೇವೆ ಎಂದು ದೇವೇಗೌಡರು ಹೇಳಿದರು. ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಡಿ.31ರಂದು ನಗರದಲ್ಲಿ ನಡೆದಿರುವ ಯುವತಿಯರಿಗೆ ಲೈಂಗಿಕ ದೌರ್ಜನ್ಯದಿಂದ ಮನಸ್ಸಿಗೆ ನೋವಾಗಿದೆ ಎಂದರು.
ಈ ಸಂದರ್ಭದಲ್ಲಿ ಸಂಸದರಾದ ಕುಪೇಂದ್ರರೆಡ್ಡಿ, ಪುಟ್ಟರಾಜು, ಶಾಸಕರಾದ ನಾರಾಯಣಗೌಡ, ಶರವಣ, ಪಕ್ಷದ ಪ್ರಧಾನ ಕಾರ್ಯದರ್ಶಿ ಜಫ್ರುಲ್ಲಾಖಾನ್, ಬೆಂಗಳೂರು ನಗರ ಅಧ್ಯಕ್ಷ ನಾರಾಯಣಸ್ವಾಮಿ,ಸೇರಿದಂತೆ ಇತರರು ಇದ್ದರು.