ವರದಕ್ಷಿಣೆಯನ್ನು ಉತ್ತೇಜಿಸುವ ವಿವಾಹ ವೆಬ್‌ಸೈಟ್‌ಗಳ ಸ್ಥಗಿತಕ್ಕೆ ಸೂಚನೆ

ಮುಂಬೈ,ಜ.4: ವರದಕ್ಷಿಣೆಯನ್ನು ಉತ್ತೇಜಿಸುವ ಎಲ್ಲ ವೆಬ್‌ಸೈಟ್‌ಗಳನ್ನು ಸ್ಥಗಿತಗೊಳಿಸುವಂತೆ ತಾನು ಮಹಾರಾಷ್ಟ್ರ ಸೇರಿದಂತೆ ಎಲ್ಲ ರಾಜ್ಯಗಳಿಗೆ ಮಾರ್ಗಸೂಚಿ ಗಳನ್ನು ಹೊರಡಿಸಿದ್ದೇನೆ. ಆ ಬಗ್ಗೆ ಕ್ರಮಗಳನ್ನು ಕೈಗೊಳ್ಳುವುದು ರಾಜ್ಯ ಸರಕಾರಗಳಿಗೆ ಬಿಟ್ಟ ವಿಷಯವಾಗಿದೆ ಎಂದು ಕೇಂದ್ರ ಸರಕಾರವು ಮುಂಬೈ ಉಚ್ಚ ನ್ಯಾಯಾಲಯಕ್ಕೆ ತಿಳಿಸಿದೆ.
ವರದಕ್ಷಿಣೆ ಪಿಡುಗಿನ ಕುರಿತು ನ್ಯಾಯವಾದಿ ಪ್ರಿಸಿಲ್ಲಾ ಸ್ಯಾಮ್ಯುಯೆಲ್ ಅವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್)ಗೆ ಸಂಬಂಧಿಸಿದಂತೆ ಇತ್ತೀಚಿಗೆ ಸಲ್ಲಿಸಿರುವ ಅಫಿದಾವತ್ತಿನಲ್ಲಿ ಕೇಂದ್ರ ಈ ವಿಷಯವನ್ನು ತಿಳಿಸಿದೆ.
ರಾಜ್ಯ ಸರಕಾರದ ಪರವಾಗಿ ಹಾಜರಾಗಿದ್ದ ಅಡ್ವೊಕೇಟ್ ಜನರಲ್ ರೋಹಿತ್ ದೇವ್ ಮತ್ತು ಸರಕಾರಿ ವಕೀಲ ಅಭಯ ಪತಕಿ ಅವರು ಇಂತಹ ಮಾರ್ಗಸೂಚಿಗಳನ್ನು ಜಾರಿಗೊಳಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ನ್ಯಾಯಾಲಯಕ್ಕೆ ಭರವಸೆ ನೀಡಿದರು.
ದೂರು ಇತ್ಯರ್ಥ ವ್ಯವಸ್ಥೆ ಮತ್ತು ಜಿಲ್ಲಾಮಟ್ಟದ ಸಲಹಾ ಮಂಡಳಿಗಳ ರಚನೆಗೆ ಸಂಬಂಧಿಸಿದಂತೆ ಕೈಗೊಳ್ಳಲಾಗಿರುವ ಕ್ರಮಗಳು ಮತ್ತು ಇವುಗಳ ಸ್ಥಾಪನೆಗೆ ಗಡುವು ಇತ್ಯಾದಿ ವಿವರಗಳನ್ನೊಳಗೊಂಡ ಅಫಿದಾವತ್ತನ್ನು ರಾಜ್ಯ ಸರಕಾರವು ಎರಡು ವಾರಗಳಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಲಿದೆ ಎಂದು ಪತಕಿ ತಿಳಿಸಿದರು.
ವರದಕ್ಷಿಣೆ ತಡೆ ಅಧಿಕಾರಿಗಳ ನೇಮಕಕ್ಕೆ ಪ್ರಸ್ತಾವನೆಯು ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪರಿಶೀಲನೆಯಲ್ಲಿದೆ ಎಂದು ದೇವ್ ತಿಳಿಸಿದರು. ನ್ಯಾಯಮೂರ್ತಿಗಳಾದ ಶಂತನು ಕುಮಾರ್ ಮತ್ತು ಪ್ರಕಾಶ ನಾಯ್ಕಾ ಅವರನ್ನೊಳಗೊಂಡ ಪೀಠವು ಪ್ರಕರಣದ ಮುಂದಿನ ವಿಚಾರಣೆಯನ್ನು ಜ.10ಕ್ಕೆ ನಿಗದಿಗೊಳಿಸಿತು.
ವರದಕ್ಷಿಣೆ ನಿಷೇಧ ಕಾಯ್ದೆಯು 1961ರಲ್ಲಿಯೇ ಜಾರಿಗೆ ಬಂದಿದೆಯಾದರೂ ವರದಕ್ಷಿಣೆ ಪಿಡುಗನ್ನು ನಿಯಂತ್ರಿಸುವಲ್ಲಿ ರಾಜ್ಯವು ಗಮನ ಹರಿಸಿಲ್ಲ ಎಂದು ಪಿಐಎಲ್ ಪ್ರತಿಪಾದಿಸಿದೆ.
ನಾಯಿಕೊಡೆಗಳಂತೆ ಹೆಚ್ಚುತ್ತಿರುವ ಮದುವೆ ದಲ್ಲಾಳಿಗಳು ಮತ್ತು ಮದುವೆ ಸೇವೆ ಪೂರೈಕೆದಾರರ ಅಕ್ರಮ ವ್ಯವಹಾರಗಳ ಬಗ್ಗೆ ವಿಚಾರಣೆ ನಡೆಸುವಂತೆ ಅದು ನ್ಯಾಯಾಲಯವನ್ನು ಆಗ್ರಹಿಸಿದೆ.
ವರದಕ್ಷಿಣೆಯನ್ನು ಕೋರಿ ವೈವಾಹಿಕ ವೆಬ್‌ಸೈಟ್‌ಗಳಲ್ಲಿ ಜಾಹೀರಾತುಗಳು ವರದಕ್ಷಿಣೆ ನಿಷೇಧ ಕಾಯ್ದೆಯ ನೇರ ಉಲ್ಲಂಘನೆಯಾಗಿದ್ದು, ಇಂತಹ ವೆಬ್‌ಸೈಟ್‌ಗಳ ಕಾರ್ಯ ನಿರ್ವಹಣೆಯನ್ನು ನಿಯಂತ್ರಿಸುವಂತೆ ರಾಜ್ಯ ಸರಕಾರಕ್ಕೆ ಆದೇಶಿಸಲೂ ಅದು ಆಗ್ರಹಿಸಿದೆ.







