ಫ್ರಾನ್ಸ್ ವಿಮಾನಕ್ಕೆ ಪಾಕ್ ವಿಮಾನ ಢಿಕ್ಕಿ

ಟೊರಾಂಟೊ, ಜ. 4: ಕೆನಡದ ಟೊರಾಂಟೊ ಪಿಯರ್‌ಸನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪಾಕಿಸ್ತಾನ್ ಇಂಟರ್‌ನ್ಯಾಶನಲ್ ಏರ್‌ಲೈನ್ಸ್ (ಪಿಐಎ) ವಿಮಾನವೊಂದು ನಿಲುಗಡೆಗಾಗಿ ಚಲಿಸುತ್ತಿದ್ದಾಗ ಏರ್ ಫ್ರಾನ್ಸ್ ವಿಮಾನವೊಂದಕ್ಕೆ ಢಿಕ್ಕಿ ಹೊಡೆದ ಘಟನೆ ವರದಿಯಗಿದೆ.
ಮಂಗಳವಾರ ಬೆಳಗ್ಗೆ ಪಿಐಎ ವಿಮಾನವು ಟರ್ಮಿನಲ್ 3ರಲ್ಲಿ ನಿಲುಗಡೆಯಾಗಿದ್ದ ಏರ್ ಫ್ರಾನ್ಸ್ ವಿಮಾನದ ರೆಕ್ಕೆಯನ್ನು ತುಂಡರಿಸಿತು. ಈ ಘಟನೆಯ ಬಳಿಕ ಪಿಐಎ ವಿಮಾನದ ಟೊರಾಂಟೊ-ಲಾಹೋರ್ ಪ್ರಯಾಣವನ್ನು ರದ್ದುಪಡಿಸಲಾಯಿತು ಎಂದು ಕೆನಡಿಯನ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಶನ್ ವರದಿ ಮಾಡಿದೆ.
ಘಟನೆಯಲ್ಲಿ ಯಾರೂ ಗಾಯಗೊಂಡಿಲ್ಲ ಹಾಗೂ ಇದರಿಂದ ವಿಮಾನಕ್ಕಾದ ಹಾನಿ ಅಲ್ಪ ಎಂದು ವರದಿ ತಿಳಿಸಿದೆ.
ರನ್‌ವೇಯಿಂದ ಹೊರಗೆ ಜಾರಿದ ರಶ್ಯ ವಿಮಾನ :
ಮಾಸ್ಕೊ, ಜ. 4: ರಶ್ಯದ ಕಲಿನಿಂಗ್ರಾಡ್ ವಿಮಾನ ನಿಲ್ದಾಣದಲ್ಲಿ ಹಿಮಗಟ್ಟಿದ ವಾತಾವರಣದಲ್ಲಿ ರಶ್ಯದ ಪ್ರಯಾಣಿಕ ವಿಮಾನವೊಂದು ಭೂಸ್ಪರ್ಶ ನಡೆಸುತ್ತಿದ್ದಾಗ ರನ್‌ವೇಯಿಂದ ಹೊರಗೆ ಜಾರಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದರು. ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ರಶ್ಯದ ‘ಏರೋಫ್ಲಾಟ್’ ವಿಮಾನಯಾನ ಕಂಪೆನಿಗೆ ಸೇರಿದ ಏರ್‌ಬಸ್ ಎ320 ವಿಮಾನವೊಂದು ಮಾಸ್ಕೊದಿಂದ 167 ಪ್ರಯಾಣಿಕರನ್ನು ಹೊತ್ತು ಕಲಿನಿಂಗ್ರಾಡ್ ವಿಮಾನ ನಿಲ್ದಾಣಕ್ಕೆ ತೆರಳುತ್ತಿತ್ತು. ಮಂಗಳವಾರ ರಾತ್ರಿ ವಿಮಾನ ಇಳಿಯುತ್ತಿದ್ದಾಗ ರನ್‌ವೇಯಿಂದ ಹೊರಗೆ ಜಾರಿತು ಎಂದು ತುರ್ತು ಪರಿಸ್ಥಿತಿ ಸಚಿವಾಲಯದ ಸ್ಥಳೀಯ ಶಾಖೆ ಹೇಳಿಕೆಯೊಂದರಲ್ಲಿ ತಿಳಿಸಿದೆ.







