ಏಕದಿನ, ಟ್ವೆಂಟಿ-20 ನಾಯಕತ್ವಕ್ಕೆ ಧೋನಿ ದಿಢೀರನೆ ವಿದಾಯ

ಹೊಸದಿಲ್ಲಿ, ಜ.4: ಅನಿರೀಕ್ಷಿತ ಬೆಳವಣಿಗೆಯಲ್ಲಿ ಭಾರತದ ಕಂಡ ಅತ್ಯಂತ ಯಶಸ್ವಿ ನಾಯಕ ಎಂ.ಎಸ್. ಧೋನಿ ಏಕದಿನ ಹಾಗೂ ಟ್ವೆಂಟಿ-20 ಅಂತಾರಾಷ್ಟ್ರೀಯ ತಂಡದ ನಾಯಕತ್ವಕ್ಕೆ ದಿಢೀರನೆ ವಿದಾಯ ಘೋಷಿಸಿದ್ದಾರೆ.
ಮುಂಬರುವ ಇಂಗ್ಲೆಂಡ್ ವಿರುದ್ಧದ ಏಕದಿನ ಹಾಗೂ ಟ್ವೆಂಟಿ-20 ಸರಣಿಯಲ್ಲಿ ನಾಯಕನಾಗಿ ಮುಂದುವರಿಯುವುದಿಲ್ಲ. ಕೇವಲ ಆಟಗಾರನಾಗಿ ತಂಡದಲ್ಲಿರುವೆ ಎಂದು ಧೋನಿ ಆಯ್ಕೆ ಸಮಿತಿಗೆ ಮಾಹಿತಿ ನೀಡಿದ್ದಾರೆ ಎಂದು ಬಿಸಿಸಿಐ ಬುಧವಾರ ತಿಳಿಸಿದೆ.
ಬಿಸಿಸಿಐ ಆಯ್ಕೆ ಸಮಿತಿಯು ಇಂಗ್ಲೆಂಡ್ ವಿರುದ್ಧ ಜ.15 ರಿಂದ ಆರಂಭವಾಗಲಿರುವ ಏಕದಿನ ಸರಣಿಗೆ ಜ.6 ರಂದು ತಂಡವನ್ನು ಆಯ್ಕೆ ಮಾಡಲಿದೆ. ಪ್ರಸ್ತುತ ವಿರಾಟ್ ಕೊಹ್ಲಿ ಟೆಸ್ಟ್ ತಂಡದ ನಾಯಕನಾಗಿದ್ದು,ಕೊಹ್ಲಿ ಅವರೇ ಏಕದಿನ ಹಾಗೂ ಟ್ವೆಂಟಿ-20 ನಾಯಕನಾಗಿ ಆಯ್ಕೆಯಾಗುವ ಸಾಧ್ಯತೆಯಿದೆ.
‘ಕೂಲ್ ಕ್ಯಾಪ್ಟನ್’ ಖ್ಯಾತಿಯ ಧೋನಿಯ ದಕ್ಷ ನಾಯಕತ್ವದಲ್ಲಿ ಭಾರತ 2007ರಲ್ಲಿ ಟ್ವೆಂಟಿ-20 ವಿಶ್ವಕಪ್,2011ರಲ್ಲಿ ಐಸಿಸಿ ಏಕದಿನ ವಿಶ್ವಕಪ್ ಹಾಗೂ 2013ರಲ್ಲಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಚಾಂಪಿಯನ್ ಆಗಿತ್ತು. 2009ರಲ್ಲಿ ಭಾರತ ಧೋನಿ ಮುಂದಾಳತ್ವದಲ್ಲಿ ವಿಶ್ವದ ನಂ.1 ಟೆಸ್ಟ್ ತಂಡವಾಗಿತ್ತು. ಐಸಿಸಿಯ ಎಲ್ಲ 3 ಪ್ರಮುಖ ಟೂರ್ನಿ ಜಯಿಸಿದ ಮೊದಲ ನಾಯಕ ಧೋನಿ.
2004ರಲ್ಲಿ ಏಕದಿನ ತಂಡಕ್ಕೆ ಕಾಲಿಟ್ಟಿದ್ದ ಧೋನಿ 2007ರಲ್ಲಿ ಟ್ವೆಂಟಿ-20 ನಾಯಕನಾಗಿ ಆಯ್ಕೆಯಾಗಿದ್ದರು. ಟಿ-20 ಪ್ರಶಸ್ತಿ ಜಯಿಸಿ ವಿಶ್ವದ ಗಮನ ಸೆಳೆದಿದ್ದರು. ರಾಹುಲ್ ದ್ರಾವಿಡ್ ನಿವೃತ್ತಿಯ ಬಳಿಕ ಏಕದಿನ ನಾಯಕನಾಗಿ ಭಡ್ತಿ ಪಡೆದಿದ್ದ ಧೋನಿ ಅವರು ಅನಿಲ್ ಕುಂಬ್ಳೆ ನಿವೃತ್ತಿಯ ಬಳಿಕ ಪೂರ್ಣಾವಧಿ ನಾಯಕನಾಗಿ ಆಯ್ಕೆಯಾಗಿದ್ದರು. 2014ರಲ್ಲಿ ಆಸ್ಟ್ರೇಲಿಯ ಪ್ರವಾಸದಲ್ಲಿ ದಿಢೀರನೆ ಟೆಸ್ಟ್ ನಾಯಕತ್ವವನ್ನು ತ್ಯಜಿಸಿದ್ದ ಧೋನಿ ಸೀಮಿತ ಓವರ್ ಕ್ರಿಕೆಟ್‌ನಲ್ಲಿ ನಾಯಕನಾಗಿ ಮುಂದುವರಿದಿದ್ದರು.
ಧೋನಿ ಎಲ್ಲ ಮೂರು ಮಾದರಿಯ ಕ್ರಿಕೆಟ್‌ನಲ್ಲಿ ಒಟ್ಟು 330 ಪಂದ್ಯಗಳಲ್ಲಿ ನಾಯಕನಾಗಿ ತಂಡವನ್ನು ಮುನ್ನಡೆಸಿರುವ ಅಪೂರ್ವ ದಾಖಲೆ ನಿರ್ಮಿಸಿದ್ದಾರೆ. 60 ಟೆಸ್ಟ್, 199 ಏಕದಿನ ಹಾಗೂ 72 ಟ್ವೆಂಟಿ-20 ಪಂದ್ಯಗಳಲ್ಲಿ ಭಾರತದ ನಾಯಕನಾಗಿದ್ದರು. ಅತ್ಯಂತ ಹೆಚ್ಚು ಏಕದಿನ ನಾಯಕತ್ವವಹಿಸಿಕೊಂಡ ವಿಶ್ವದ ಮೂರನೆ ನಾಯಕ ಧೋನಿ. ರಿಕಿ ಪಾಂಟಿಂಗ್(230) ಹಾಗೂ ಸ್ಟೀಫನ್ ಫ್ಲೆಮಿಂಗ್(218) ಮೊದಲೆರಡು ಸ್ಥಾನದಲ್ಲಿದ್ದಾರೆ.
ಧೋನಿ ಕಳೆದ ವರ್ಷ ಸ್ವದೇಶದಲ್ಲಿ ನಡೆದ ನ್ಯೂಝಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಭಾರತವನ್ನು ಕೊನೆಯ ಬಾರಿ ನಾಯಕನಾಗಿ ಮುನ್ನಡೆಸಿದ್ದಾರೆ. ಆ ಸರಣಿಯನ್ನು ಭಾರತ 3-2 ರಿಂದ ಗೆದ್ದುಕೊಂಡಿತ್ತು.







