ಪರ್ಕಳದ ವ್ಯಕ್ತಿ ನಾಪತ್ತೆ: ಕೊಲೆ ಶಂಕೆ
ಉಡುಪಿ, ಜ.4: ಒಂದು ತಿಂಗಳ ಹಿಂದೆ ನಾಪತ್ತೆಯಾಗಿದ್ದ ಪರ್ಕಳ ಸಣ್ಣಕ್ಕಿ ಬೆಟ್ಟುವಿನ ಸಂತೋಷ್ ನಾಯ್ಕಿ ಎಂಬವರನ್ನು ಇತ್ತೀಚೆಗೆ ಹಿರಿಯಡ್ಕ ಕೋಟ್ನ ಕಟ್ಟೆಯಲ್ಲಿ ಕೊಲೆಯಾದ ರೌಡಿ ವರ್ವಾಡಿ ಪ್ರವೀಣ್ ಕುಲಾಲ್ ಅಪಹರಿಸಿ ಕೊಲೆ ಮಾಡಿರಬಹುದೆಂಬ ಸಂಶಯವನ್ನು ಮನೆಯವರು ವ್ಯಕ್ತಪಡಿಸಿದ್ದು, ಈ ಬಗ್ಗೆ ಮಣಿಪಾಲ ಹಾಗೂ ಹಿರಿಯಡ್ಕ ಪೊಲೀಸರು ಜಂಟಿಯಾಗಿ ತನಿಖೆ ನಡೆಸುತ್ತಿದ್ದಾರೆ.
ಮಣಿಪಾಲದಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಸಂತೋಷ್ ನಾಯ್ಕಿ ನಂತರ ಬೇರೆ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದನು. ಅಲ್ಲದೆ ರೌಡಿ ವರ್ವಾಡಿ ಪ್ರವೀಣ್ ಕುಲಾಲ್ ತಂಡದ ಜೊತೆ ಹಣದ ವ್ಯವಹಾರವನ್ನೂ ಹೊಂದಿದ್ದ ಎನ್ನಲಾಗಿದೆ. ಡಿ.2ರಂದು ತನ್ನ ಪತ್ನಿ ಸುಮಿತ್ರಾ ಅವರನ್ನು ಮಣಿಪಾಲದಲ್ಲಿ ಕೆಲಸಕ್ಕೆ ಹಾಗೂ ಮಕ್ಕಳನ್ನು ಬಡಗುಬೆಟ್ಟು ಶಾಲೆ ಯಲ್ಲಿ ಬಿಟ್ಟು ತೆರಳಿದ್ದ ಸಂತೋಷ್ ನಾಪತ್ತೆಯಾಗಿದ್ದರು.
ಅದರ ನಂತರ ಸಂತೋಷ್ ನಾಯ್ಕ ಮನೆಗೆ ಬಂದಿದ್ದ ಪ್ರವೀಣ್ ಕುಲಾಲ್ ಹಾಗೂ ಇತರ ಇಬ್ಬರು ಸಂತೋಷ್ ನಾಯ್ಕ ತಾಯಿ, ತಮ್ಮ ಹಾಗೂ ಅಣ್ಣನ ಹೆಂಡತಿಯನ್ನು ಅಪಹರಿಸಿ, ಸಂತೋಷ್ ನಾಯ್ಕ ನಮಗೆ ಹಣ ಕೊಡಲು ಇದೆ. ಅವನು ಕೊಡದಿದ್ದರೆ ಎಲ್ಲರನ್ನು ಕೊಲೆ ಮಾಡುವು ದಾಗಿ ಬೆದರಿಕೆಯೊಡ್ಡಿದ್ದನು. ಈ ಬಗ್ಗೆ ಸಂತೋಷ್ ನಾಯ್ಕೆನ ತಾಯಿ ಮಣಿಪಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಅದರಂತೆ ಪ್ರಕರಣ ದಾಖಲಾಗಿದೆ.
ಈ ಮಧ್ಯೆ ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯ ಚಿತ್ರಬೈಲು ಎಂಬಲ್ಲಿ ಇಂದು ಸುಟ್ಟ ಬೂದಿ ಹಾಗೂ ಸಣ್ಣ ಸಣ್ಣ ಎಲುಬಿನ ತುಂಡುಗಳು ಪತ್ತೆ ಯಾಗಿವೆ. ಇವುಗಳು ಮನುಷ್ಯರದ್ದೆ ಅಥವಾ ಪ್ರಾಣಿಗಳದ್ದೆ ಎಂಬುದು ತಿಳಿದು ಬಂದಿಲ್ಲ. ಇದನ್ನು ವಶಪಡಿಸಿಕೊಂಡಿರುವ ಹಿರಿಯಡ್ಕ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಸಂತೋಷ್ ಪತ್ನಿ ಸುಮಿತ್ರಾ ಹಿರಿಯಡ್ಕ ಪೊಲೀಸ್ ಠಾಣೆಗೆ ಸಂತೋಷ್ ನಾಪತ್ತೆಯಾಗಿರುವ ಬಗ್ಗೆ ದೂರು ನೀಡಲು ತೆರಳಿದ್ದು, ಇನ್ನಷ್ಟೆ ಪ್ರಕರಣ ದಾಖಲಾಗಬೇಕಾಗಿದೆ ಎಂದು ತಿಳಿದುಬಂದಿದೆ.







