ಅಚ್ಚರಿಯ ಹೇಳಿಕೆ ನೀಡಿದ ಉತ್ತರ ಪ್ರದೇಶ ಕಾಂಗ್ರೆಸ್ ಸಿಎಂ ಅಭ್ಯರ್ಥಿ ಶೀಲಾ ದೀಕ್ಷಿತ್
.jpg)
ಹೊಸದಿಲ್ಲಿ,ಜ.4: ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ ಅವರು ತನಗಿಂತಲೂ ಉತ್ತಮ ಮುಖ್ಯಮಂತ್ರಿ ಹುದ್ದೆ ಅಭ್ಯರ್ಥಿಯಾಗಬಲ್ಲರು ಎಂದು ಬುಧವಾರ ಆಂಗ್ಲ ಸುದ್ದಿವಾಹಿನಿಯೊಂದರೊಂದಿಗೆ ಮಾತನಾಡುತ್ತ ಒಪ್ಪಿಕೊಳ್ಳುವ ಮೂಲಕ ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ಹುದ್ದೆಯ ಅಭ್ಯರ್ಥಿ ಶೀಲಾ ದೀಕ್ಷಿತ್ ಅವರು ಅಚ್ಚರಿಯನ್ನು ಸೃಷ್ಟಿಸಿದ್ದಾರೆ. ತನಗಿಂತಲೂ ಸುಮಾರು 30 ವರ್ಷ ಕಿರಿಯರಾಗಿರುವ ಅಖಿಲೇಶ್‌ಗೆ ಅವಕಾಶ ಮಾಡಿಕೊಡಲು ತನಗೆ ಸಂತಸವಾಗುತ್ತದೆ ಎಂದು ಹೇಳುವ ಮೂಲಕ ಇನ್ನಷ್ಟು ಅಚ್ಚರಿಯನ್ನು ಮೂಡಿಸಿದ್ದಾರೆ.
ಕಾಂಗ್ರೆಸ್ ಹೈಕಮಾಂಡ್ ಎಸ್‌ಪಿಯಲ್ಲಿನ ಆಂತರಿಕ ಕಲಹವನ್ನು 90ರ ದಶಕದ ಟಿವಿ ಧಾರಾವಾಹಿಗಳಿಗೆ ಹೋಲಿಸಿದ್ದರೂ ಉತ್ತರ ಪ್ರದೇಶದ ಕಾಂಗ್ರೆಸ್ ನಾಯಕರು ಮಾತ್ರ ಆ ಪಕ್ಷದೊಡನೆ ಚನಾವಣಾಪೂರ್ವ ಮೈತ್ರಿ ಮಾಡಿಕೊಳ್ಳಲು ಒಲವು ಹೊಂದಿದ್ದಾರೆ. ಅಖಿಲೇಶ್‌ರ ‘ಸ್ವಚ್ಛ ಮತ್ತು ಜನಪ್ರಿಯ ’ ವ್ಯಕ್ತಿತ್ವವು ‘ಕೋಮುವಾದಿ ಶಕ್ತಿಗಳನ್ನು ’ ಸೋಲಿಸಲು ನೆರವಾಗಲಿದೆ ಎನ್ನುವುದು ಹೆಚ್ಚಿನ ರಾಜ್ಯ ಕಾಂಗ್ರೆಸ್ ನಾಯಕರ ಅಭಿಪ್ರಾಯವಾಗಿದೆ.
ಎರಡೂ ಪಕ್ಷಗಳು ಗುಟ್ಟನ್ನು ಕಾಯ್ದುಕೊಂಡಿದ್ದು, ಫೆ.22ರಂದು ಮತದಾನದ ಮೊದಲ ಹಂತಕ್ಕೆ ಮುನ್ನ ಇಂತಹ ಮೈತ್ರಿ ರೂಪುಗೊಳ್ಳಲಿದೆಯೇ ಎನ್ನುವ ಬಗ್ಗೆ ಭವಿಷ್ಯ ನುಡಿಯುವುದು ಕಷ್ಟ. ಎಸ್‌ಪಿ ಎರಡು ಹೋಳುಗಳಾಗಿರುವುದರಿಂದ ಅದಕ್ಕೆ ತನ್ನದೇ ಆದ ಅಂತರಿಕ ಹೋರಾಟಗಳಿವೆ.
ಹೀಗಿದ್ದರೂ ಶೀಲಾ ದೀಕ್ಷಿತ್ ಹೇಳಿಕೆಯು ಉಭಯ ಪಕ್ಷಗಳ ನಡುವೆ ಮೈತ್ರಿ ಸಾಧ್ಯತೆಯನ್ನು ಸೂಚಿಸುವಂತಿದೆ.







