ದುರಸ್ಥಿ ಕಾಣದ ಸಾರ್ವಜನಿಕ ಬಾವಿ : ಪಂಚಾಯತ್ ನಿರ್ಲಕ್ಷ್ಯ, ಗ್ರಾಮಸ್ಥರ ಆರೋಪ
.jpg)
ಮುಲ್ಕಿ, ಜ.4: ಹಳೆಯಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕದಿಕೆ ದರ್ಗಾ ಮುಂಭಾದಲ್ಲಿರುವ ಹಳೆಯ ಬಾವಿ ದುರಸ್ತಿಗೆ ಪಂಚಾಯತ್‌ಗೆ ಹಲವು ಬಾರಿ ಮನವಿ ನೀಡಿ ಸರಿಪಡಿಸುವಂತೆ ವಿನಂತಿಸಿದರೂ ಪಂಚಾಯತ್ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಸುಮಾರು 20ರಿಂದ 25 ಅಡಿಗಳಷ್ಟು ಆಳವಿರುವ ಸುಮಾರು 20 ವರ್ಷಗಳ ಹಳೆಯ ಬಾವಿ. ಬಾವಿ ಕುಸಿತದಿಂದಾಗಿ ಇದರ ಒಳಭಾಗದಲ್ಲಿ ಕಟ್ಟಲಾಗಿರುವ ಕಪ್ಪು ಕಲ್ಲುಗಳು ಬಾವಿಯ ಒಳಕ್ಕೆ ಬಿದ್ದಿವೆ. ಅಲ್ಲದೆ, ಹೊರಭಾಗ ಕುಸಿದಿದೆ. ಈ ಬಗ್ಗೆ ಹಲವು ಕಳೆದ ಎರಡು ವರ್ಷಗಳಿಂದ ಹಳೆಯಂಗಡಿ ಗ್ರಾಮ ಪಂಚಾಯತ್‌ನ ಗಮನಕ್ಕೆ ತರುತ್ತಿದ್ದೇವೆ. ಅಲ್ಲದೆ, ಕಳೆದ ಆರು ತಿಂಗಳ ಹಿಂದೆಯೂ ಸ್ಥಳೀಯರು ಸೇರಿಕೊಂಡು ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ಮನವಿಯನ್ನೂ ಸಲ್ಲಿಸಿದ್ದೇವೆ. ಮಳೆಗಾಲ ಮುಗಿದ ಬಳಿಕ ದುರಸ್ತಿ ಮಾಡುವುದಾಗಿ ಪಂಚಾಯತ್ ಅಧಿಕಾರಿಗಳು ಹಾಗೂ ಇಲ್ಲಿನ ಪಂಚಾಯತ್‌ನ ಸದಸ್ಯರು ತಿಳಿಸಿದ್ದರು. ಆದರೆ, ಮಳೆಗಾಲ ಮುಗಿದು ತಿಂಗಳು ಕಳೆದಿವೆಯೇ ಹೊರತು ದುರಸ್ತಿಕಾರ್ಯ ನಡೆದಿಲ್ಲ ಎಂದು ಮನ್ಸೂರ್ ಆರೋಪಿಸಿದ್ದಾರೆ.
ಕಳೆದ ಎರಡು ವರ್ಷಗಳಿಂದ ಹಳೆಯಂಗಡಿ ಗ್ರಾಮ ಪಂಚಾಯತ್, ಕದಿಕೆ ಭಾಗದ ಸ್ಥಳಿಯರನ್ನು ಕಡೆಗಣಿಸುತ್ತಾ ಬಂದಿದೆ. ಈ ಬಗ್ಗೆ ಉನ್ನತ ಅಧಿಕಾರಿಗಳಿಗೆ ದೂರು ನೀಡಿವುದಾಗಿ ತಿಳಿಸಿದರುವ ಮನ್ಸೂರ್, ಮುಂಬರುವ ಚುನಾವಣೆಗಳನ್ನು ಬಹಿಷ್ಕರಿಸುವುದಾಗಿ ಸ್ಥಳೀಯರು ಒಮ್ಮತದ ನಿರ್ಧಾರ ಕೈಗೊಂಡಿರುವುದಾಗಿ ಹಳೆಯಂಗಡಿ ಗ್ರಾಮ ಪಂಚಾಯತ್‌ನ್ನು ಎಚ್ಚರಿಸಿದ್ದಾರೆ.





