ಚಿತ್ರಕಲಾ ಕಲಾವಿದರಿಂದ ಅನಾವರಣಗೊಂಡ ಹಸೆಯ ಚಿತ್ತಾರ

ಚಿಕ್ಕಮಗಳೂರು, ಜ.4: ಕಲೆ ಎಂಬುದು ಸೃಜನಶೀಲತೆಯ ಪ್ರತಿಬಿಂಬ. ಆದರೆ ನಮ್ಮ ಮತ್ತು ನಮ್ಮ ಸರಕಾರಗಳ ನಿರ್ಲಕ್ಷದಿಂದಲೇ ಇಂದು ಬಹಳಷ್ಟು ಕಲೆಗಳು ಅಳಿವಿನಂಚಿಗೆ ತಲುಪಿವೆ. ಇಂತಹ ಕಲೆಗಳಲ್ಲಿ ಅಪ್ಪಟ ಜನಪದೀಯ ಕಲೆ ಹಸೆಯೂ ಒಂದು. ಆಧುನಿಕ ಭರಾಟೆ ಹಾಗೂ ಪೈಪೋಟಿಯ ಪರಿಣಾಮದಿಂದ ಕಲಾ ಜಗತ್ತಿನಿಂದ ನೇಪಥ್ಯಕ್ಕೆ ಸರಿಯುತ್ತಿರುವ ಹಸೆಯನ್ನು ಪುನಶ್ಚೇತನಗೊಳಿಸುವ ಪ್ರಯತ್ನ ಕಲಾರಾಧಕರಿಂದ ನಡೆಯುತ್ತಿದೆ. ಇಂತದ್ದೇ ಒಂದು ಪ್ರಯತ್ನವು ಚಿಕ್ಕಮಗಳೂರಿನಲ್ಲಿ ನಡೆಯಿತು. ನಗರದ ಶಾಂತಿನಿಕೇತನ ಚಿತ್ರಕಲಾ ಶಾಲೆಯ ವಿದ್ಯಾರ್ಥಿಗಳು ಹಸೆಯ ಚಿತ್ತಾರವನ್ನು ಗೋಡೆಗಳಲ್ಲಿ ಅನಾವರಣಗೊಳಿಸುವ ಮೂಲಕ ಕಲಾ ಜಾಗೃತಿ ಮೂಡಿಸಿದರು.
ಚಿಕ್ಕಮಗಳೂರಿನ ಶಾಂತಿನಿಕೇತನ ಚಿತ್ರಕಲಾ ಶಾಲೆಯ ವಿದ್ಯಾರ್ಥಿಗಳು ವಿನೂತನ ಪ್ರಯೋಗಕ್ಕೆ ಕೈ ಹಾಕಿದ್ದಾರೆ. ಕುವೆಂಪು ಕಲಾ ಮಂದಿರದ ಗೋಡೆ, ಬೋರ್ಡ್‌ಗಳ ಮೇಲೆ ವಿದ್ಯಾರ್ಥಿಗಳು ಹಸೆಯನ್ನು ನಾನಾ ಆಯಾಮಗಳಲ್ಲಿ ಅನಾವರಣಗೊಳಿಸಿ ಜನರನ್ನು ಚಕಿತಗೊಳಿಸಿದರು. ವರ್ಲಿ ಸೇರಿದಂತೆ ಹಸೆಯ ನಾನಾ ಆಯಾಮಗಳು ವಿದ್ಯಾರ್ಥಿಗಳ ಕೈಚಳಕದ ಮೂಲಕ ಸುಂದರವಾಗಿ ಮೂಡಿ ಬಂದವು. ವಿಚಿತ್ರವಾಗಿ ಬರೆದುದೆಲ್ಲವೂ ಕಲೆಯಂತಾಗಿರುವ ಇಂದಿನ ಸಂದರ್ಭದಲ್ಲಿ ಶತಮಾನಗಳಷ್ಟು ಹಳೆಯ ಇತಿಹಾಸ ವೈಭವ ಹೊಂದಿರುವ ಹಸೆಯ ಮಹತ್ವ ತಿಳಿಸಿಕೊಡುವಂತಹದ್ದು ಇದರ ಉದ್ದೇಶವಾಗಿದೆ.
ವಿದ್ಯಾರ್ಥಿಗಳು ತಮ್ಮ ಮನಸಲ್ಲಿ ಮೂಡಿದ ಭಿನ್ನ ಭಾವಲಹರಿಯನ್ನು ಚಿತ್ತಾರಗೊಳಿಸಿದರು. ತಮ್ಮ ಭಾವನೆಗಳ ವಿನಿಮಯಕ್ಕೆ ಜನಪದರು ಅಭಿವ್ಯಕ್ತಿ ಮಾಧ್ಯಮವಾಗಿ ಕಂಡುಕೊಂಡದ್ದೇ ಹಸೆ ಕಲೆ. ಆದರೆ ಕಲೆಯ ಮಹತ್ವ ತಿಳಿಸಿಕೊಡುವುದರಲ್ಲಿ ಆಗಬೇಕಿದ್ದ ಪ್ರಾಮಾಣಿಕ ಪ್ರಯತ್ನಗಳು ವಿಫಲವಾಗಿರುಮದೇ ಈ ಕಲೆ ಸಂಕ್ರಮಣ ಘಟ್ಟ ತಲುಪಲು ಕಾರಣವಾಗಿದೆ.
ಒಟ್ಟಾರೆಯಾಗಿ ನಮ್ಮಲ್ಲಿನ ಕಲಾವಿಹೀನತೆ ಹಾಗೂ ಸರಕಾರದ ನಿರ್ಲಕ್ಷದಿಂದ ನೇಪಥ್ಯಕ್ಕೆ ಸರಿಯುತ್ತಿರುವ ಕಲೆಗಳ ಪಟ್ಟಿಯಲ್ಲಿ ಕೇವಲ ಹಸೆ ಮಾತ್ರ ಸೇರಿಲ್ಲ. ಇನ್ನು ಅದೆಷ್ಟೋ ಗ್ರಾಮೀಣ ಕಲೆಗಳು ಸೊರಗುತ್ತಿವೆ. ಇಡೀ ಸಂಸ್ಕೃತಿಯ ಜೀವಂತಿಕೆ ಇರುವುದೇ ನಮ್ಮ ಜಾನಪದದಲ್ಲಿ ಎಂದು ಹೇಳಿ ಕಂಠ ಶೋಷಣೆ ಮಾಡಿಕೊಳ್ಳುವುದನ್ನು ಸರಕಾರ ಬಿಡಬೇಕಿದೆ. ಅದೇ ರೀತಿ ಜಾನಪದದ ಹೃದಯವಂತಿಕೆಯನ್ನು ಅರ್ಥೈಸಿಕೊಳ್ಳುವಂತಹ ವೈಶಾಲ್ಯತೆಯೂ ನಮ್ಮಲ್ಲಿ ಬೆಳೆಯಬೇಕಿದೆ. ಅದರಲ್ಲಿಯೇ ಜಾನಪದ ಕಾಳಜಿ-ಜಾನಪದ ಪುನರುತ್ಥಾನ ಅಡಗಿದೆ. ಇಂತಹ ತತ್ವ ಸಂದೇಶವನ್ನು ಪ್ರತಿ ಧ್ವನಿಸುವಲ್ಲಿ ಶಾಂತಿನಿಕೇತನ ಕಾಲೇಜಿನ ವಿದ್ಯಾರ್ಥಿಗಳ ಕಲಾ ಜಾಗೃತಿ ಯಶಸ್ವಿಯಾಗಿಸಿದೆ.







