ಕೇರಳ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ, ಕಾರ್ಯದರ್ಶಿ ರಾಜೀನಾಮೆ
ತಿರುವನಂತಪುರ, ಜ.4: ಮಾಜಿ ಟೆಸ್ಟ್ ಕ್ರಿಕೆಟಿಗ ಬ್ರಿಜೇಶ್ ಪಟೇಲ್ ನೇತೃತ್ವದ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಉನ್ನತಾಧಿಕಾರಿಗಳು ತಮ್ಮ ಹುದ್ದೆಯನ್ನು ತ್ಯಜಿಸಿದ ಮರುದಿನವೇ ಕೇರಳ ಕ್ರಿಕೆಟ್ ಸಂಸ್ಥೆಯ(ಕೆಸಿಎ)ಅಧ್ಯಕ್ಷ ಟಿಸಿ ಮ್ಯಾಥ್ಯೂ, ಕಾರ್ಯದರ್ಶಿ ಟಿ ಎಂ ಅನಂತನಾರಾಯಣನ್, ಹರಿದಾಸ್, ಟಿಆರ್ ಬಾಲಕೃಷ್ಣನ್ ಹಾಗೂ ಸುನೀಲ್ ಕೋಶಿ ಜಾರ್ಜ್ ಅವರು ತಮ್ಮ ಸ್ಥಾನ ತ್ಯಜಿಸಿದ್ದಾರೆ.
ಸುಪ್ರೀಂಕೋರ್ಟ್ ಸೋಮವಾರ ನೀಡಿದ ಮಹತ್ವದ ತೀರ್ಪಿನಲ್ಲಿ ಲೋಧಾ ಸಮಿತಿಯ ಶಿಫಾರಸುಗಳನ್ನು ಜಾರಿಗೆ ತರಲು ಹಿಂದೇಟು ಹಾಕಿದ್ದ ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ಹಾಗೂ ಕಾರ್ಯದರ್ಶಿ ಅಜಯ್ ಶಿರ್ಕೆ ಅವರನ್ನು ವಜಾ ಮಾಡಿತ್ತು. ಈ ಹಿನ್ನೆಲೆಯಲ್ಲಿ ದೇಶದ ಎಲ್ಲ ಕ್ರಿಕೆಟ್ ಸಂಸ್ಥೆಯಲ್ಲಿ ದೀರ್ಘಕಾಲದಿಂದ ಅಧಿಕಾರದಲ್ಲಿರುವವರು ಹುದ್ದೆ ತ್ಯಜಿಸುತ್ತಿದ್ದಾರೆ.
ಮುಂಬೈ ಕ್ರಿಕೆಟ್ ಸಂಸ್ಥೆಯ ಉಪಾಧ್ಯಕ್ಷ ದಿಲಿಪ್ ವೆಂಗ್‌ಸರ್ಕಾರ್, ಮ.ಪ್ರ.ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಜ್ಯೋತಿರಾದಿತ್ಯ ಸಿಂಧಿಯಾ, ಎಂಪಿಸಿಎ ಅಧ್ಯಕ್ಷ ಸಂಜಯ್ ಜಗದಾಲೆ ಬುಧವಾರ ತಮ್ಮ ಸ್ಥಾನವನ್ನು ತ್ಯಜಿಸಿ ಸುಪ್ರೀಂಕೋರ್ಟ್ ಆದೇಶ ಪಾಲಿಸಿದ್ದಾರೆ.
ಈ ಮೂಲಕ ಕರ್ನಾಟಕ ಹಾಗೂ ಕೇರಳ ರಾಜ್ಯ ಕ್ರಿಕೆಟ್ ಸಂಸ್ಥೆಗಳು ಲೋಧಾ ಸಮಿತಿಯ ಶಿಫಾರಸುಗಳನ್ನು ಪಾಲಿಸಿವೆ. ಕೆಸಿಎ ಉನ್ನತಾಧಿಕಾರಿಗಳು ತಮ್ಮ ಅಧಿಕಾರದ ಅವಧಿ ಮುಗಿಯಲು 7 ತಿಂಗಳು ಬಾಕಿ ಇರುವಾಗಲೇ ಹುದ್ದೆಯನ್ನು ತ್ಯಜಿಸಿದರು.
ಲೋಧಾ ಸಮಿತಿ ಶಿಫಾರಸಿನ ಪ್ರಕಾರ ವ್ಯಕ್ತಿಯೊಬ್ಬ ಕ್ರಿಕೆಟ್ ಸಂಸ್ಥೆಯಲ್ಲಿ 9 ವರ್ಷಗಿಂತ ಹೆಚ್ಚು ಕಾಲ ಅಧಿಕಾರದಲ್ಲಿರಬಾರದು. ಓರ್ವ ಅಧಿಕಾರಿಯು 3 ವರ್ಷ ಮಾತ್ರ ಒಂದು ಹುದ್ದೆಯಲ್ಲಿ ಸೇವೆ ಸಲ್ಲಿಸಬಹುದು ಎಂದು ಹೇಳಿತ್ತು. ಮ್ಯಾಥ್ಯೂಸ್ ಕಳೆದ 20 ವರ್ಷಗಳಿಂದಲೂ, ಅನಂತನಾರಾಯಣನ್ ಕಳೆದ 11 ವರ್ಷಗಳಿಂದ ಕೆಎಸ್‌ಎ ಆಡಳಿತ ಮಂಡಳಿಯಲ್ಲಿದ್ದಾರೆ.







