ಮೂರನೆ ಟೆಸ್ಟ್: ಪಾಕಿಸ್ತಾನಕ್ಕೆ ಅಲಿ, ಯೂನಿಸ್ ಆಸರೆ
ಆಸ್ಟ್ರೇಲಿಯ 538/8 ಡಿಕ್ಲೇರ್, ಪಾಕ್ 126/2

ಸಿಡ್ನಿ, ಜ.4: ಮೂರನೆ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ಆಸ್ಟ್ರೇಲಿಯ ಗಳಿಸಿದ ಬೃಹತ್ ಮೊತ್ತಕ್ಕೆ ಉತ್ತರವಾಗಿ ಪಾಕಿಸ್ತಾನ ತಂಡ ಪ್ರತಿ ಹೋರಾಟ ನೀಡುವ ಹಾದಿಯಲ್ಲಿದೆ.
ಎರಡನೆ ದಿನವಾದ ಬುಧವಾರ ಆಟ ಕೊನೆಗೊಂಡಾಗ ಪಾಕಿಸ್ತಾನ 2 ವಿಕೆಟ್‌ಗಳ ನಷ್ಟಕ್ಕೆ 126 ರನ್ ಗಳಿಸಿದೆ. ಆರಂಭಿಕ ಆಟಗಾರ ಅಝರ್ ಅಲಿ(ಅಜೇಯ 58, 123 ಎಸೆತ, 5 ಬೌಂಡರಿ) ಹಾಗೂ ಯೂನಿಸ್ ಖಾನ್(ಅಜೇಯ 64, 112 ಎಸೆತ, 7 ಬೌಂಡರಿ) 3ನೆ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 120 ರನ್ ಸೇರಿಸಿದ್ದಾರೆ.
ಆಸೀಸ್ ಪರ ಹೇಝಲ್‌ವುಡ್ 2 ವಿಕೆಟ್ ಕಬಳಿಸಿದ್ದಾರೆ. ಪಾಕ್ ತಂಡ 4ನೆ ಓವರ್‌ನ ಮೊದಲ ಎಸೆತದಲ್ಲಿ ಆರಂಭಿಕ ಬ್ಯಾಟ್ಸ್‌ಮನ್ ಶಾರ್ಜೀಲ್ ಖಾನ್(4) ವಿಕೆಟ್‌ನ್ನು ಕಳೆದುಕೊಂಡಿತು. ಬಾಬರ್ ಆಝಂ(0) ಖಾತೆ ತೆರೆಯಲು ವಿಫಲವಾಗಿ ಪೆವಿಲಿಯನ್ ಸೇರಿದಾಗ ಪಾಕ್‌ನ ಸ್ಕೋರ್ 2 ವಿಕೆಟ್ 6 ರನ್.
ಕಳೆದ ವಾರ ಮೆಲ್ಬೋರ್ನ್ ಟೆಸ್ಟ್‌ನಲ್ಲಿ ಅಜೇಯ 205 ರನ್ ಗಳಿಸಿದ್ದ ಅಝರ್ ಅಲಿ ಹಾಗೂ ಹಿರಿಯ ಆಟಗಾರ ಯೂನಿಸ್ ಖಾನ್ 3ನೆ ವಿಕೆಟ್‌ಗೆ ಶತಕದ ಜೊತೆಯಾಟ ನಡೆಸಿ ತಂಡವನ್ನು ಆಧರಿಸಿದರು. ಅಲಿ ಇನಿಂಗ್ಸ್ ಅಂತ್ಯದಲ್ಲಿ 51 ರನ್ ಗಳಿಸಿದ್ದಾಗ ನಥನ್ ಲಿಯೊನ್ ಎಸೆತದಲ್ಲಿ ಜೀವದಾನ ಪಡೆದರು. ವಾರ್ನರ್ ಒಂದೇ ಕೈಯ್ಯಲ್ಲಿ ಕ್ಯಾಚ್ ಪಡೆಯಲು ಹೋಗಿ ಎಡವಿದರು.
ಅಝರ್ ಅಲಿ ಇನ್ನು 8 ರನ್ ಗಳಿಸಿದರೆ ಆಸ್ಟ್ರೇಲಿಯ ವಿರುದ್ಧ ಟೆಸ್ಟ್ ಸರಣಿಯಲ್ಲಿ ಗರಿಷ್ಠ ಸ್ಕೋರ್ ಗಳಿಸಿದ ದಾಖಲೆ ನಿರ್ಮಿಸುತ್ತಾರೆ. 1984ರಲ್ಲಿ ಮೊಹ್ಸಿನ್ ಖಾನ್ ಆಸೀಸ್‌ನ ವಿರುದ್ಧ ಒಟ್ಟು 390 ರನ್ ಗಳಿಸಿದ್ದರು. ಅಲಿ ಆಸೀಸ್‌ನ ವಿರುದ್ಧ ಈ ತನಕ ಒಟ್ಟು 382 ರನ್ ಗಳಿಸಿದ್ದಾರೆ. ಯೂನಿಸ್ ಖಾನ್ ಆಸ್ಟ್ರೇಲಿಯದ ವಿರುದ್ಧ 1000 ರನ್ ಪೂರೈಸಿದರು.
ಆಸ್ಟ್ರೇಲಿಯ 538/8 ಡಿಕ್ಲೇರ್: ಇದಕ್ಕೆ ಮೊದಲು 3 ವಿಕೆಟ್ ನಷ್ಟಕ್ಕೆ 365 ರನ್‌ನಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಆಸ್ಟ್ರೇಲಿಯ ತಂಡ 135 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 538 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿತು.
ನಾಲ್ಕನೆ ಟೆಸ್ಟ್ ಪಂದ್ಯದಲ್ಲಿ ಎರಡನೆ ಶತಕ ಬಾರಿಸಿದ ಹ್ಯಾಂಡ್ಸ್‌ಕಾಂಬ್ ಪಂದ್ಯದಲ್ಲಿ ಆಸ್ಟ್ರೇಲಿಯದ ಪರ ಮೂರಂಕೆ ಸ್ಕೋರ್ ದಾಖಲಿಸಿದ ಮೂರನೆ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಡೇವಿಡ್ ವಾರ್ನರ್(113 ರನ್) ಹಾಗೂ ಮ್ಯಾಥ್ಯೂ ರೆನ್‌ಶಾ(184) ಈಗಾಗಲೇ ಶತಕ ಬಾರಿಸಿದ್ದಾರೆ.
25ರ ಹರೆಯದ ಹ್ಯಾಂಡ್ಸ್‌ಕಾಂಬ್ ವೇಗಿ ರಿಯಾಝ್ ಎಸೆತದಲ್ಲಿ ಹಿಟ್ ವಿಕೆಟ್‌ಗೆ ಒಳಗಾದರು. ಹ್ಯಾಂಡ್ಸ್‌ಕಾಂಬ್ ಅವರು ರಿಯಾಝ್ ಎಸೆತವನ್ನು ಕಟ್ ಮಾಡುವ ಯತ್ನದಲ್ಲಿ ಕ್ರೀಸ್‌ನಿಂದ ಹಿಂದೆ ಸರಿದಾಗ ಅವರ ಬ್ಯಾಟ್ ಸ್ಟಂಪ್‌ಗೆ ತಾಗಿ ಬೇಲ್ಸ್ ಕೆಳಗೆ ಬಿತ್ತು. ಹ್ಯಾಂಡ್ಸ್‌ಕಾಂಬ್ 110 ರನ್‌ಗೆ ಹಿಟ್ ವಿಕೆಟ್‌ನಿಂದಾಗಿ ಔಟಾದರು.
ನವೆಂಬರ್‌ನಲ್ಲಿ ದಕ್ಷಿಣ ಆಫ್ರಿಕ ವಿರುದ್ಧ ಟೆಸ್ಟ್ ಸರಣಿಯಲ್ಲಿ ಕಳಪೆ ಪ್ರದರ್ಶನ ನೀಡಿದ ಬಳಿಕ ಆಸ್ಟ್ರೇಲಿಯ ತಂಡಕ್ಕೆ ವಾಪಸಾಗಿದ್ದ ಹ್ಯಾಂಡ್ಸ್‌ಕಾಂಬ್ ಉತ್ತಮ ಪ್ರದರ್ಶನ ನೀಡಿದ್ದಾರೆ.
ಹ್ಯಾಂಡ್ಸ್‌ಕಾಂಬ್‌ರೊಂದಿಗೆ ಅಜೇಯ 167 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ 20ರ ಪ್ರಾಯದ ರೆನ್‌ಶಾ 4ನೆ ವಿಕೆಟ್‌ಗೆ 142 ರನ್ ಜೊತೆಯಾಟವನ್ನು ನಡೆಸಿದರು. ತನ್ನ ನಾಲ್ಕನೆ ಟೆಸ್ಟ್ ಪಂದ್ಯದಲ್ಲಿ 413 ನಿಮಿಷಗಳ ಕಾಲ ಕ್ರೀಸ್ ಆಕ್ರಮಿಸಿಕೊಂಡಿದ್ದ ರೆನ್‌ಶಾ 293 ಎಸೆತಗಳನ್ನು ಎದುರಿಸಿ 20 ಬೌಂಡರಿಗಳನ್ನು ಒಳಗೊಂಡ 184 ರನ್ ಗಳಿಸಿದರು. ಕೇವಲ 16 ರನ್‌ನಿಂದ ದ್ವಿಶತಕ ವಂಚಿತರಾದರು.
ಚೊಚ್ಚಲ ಪಂದ್ಯವಾಡುತ್ತ್ಟಿರುವ ಆರನೆ ಕ್ರಮಾಂಕದ ಬ್ಯಾಟ್ಸ್‌ಮನ್ ಹಿಲ್ಟನ್ ಕಾರ್ಟ್‌ರೈಟ್ ಈ ಋತುವಿನಲ್ಲಿ ಗರಿಷ್ಠ ಸ್ಕೋರ್ ಗಳಿಸಿದ ಆಸೀಸ್ ಆಟಗಾರ ಎನಿಸಿಕೊಂಡರು. ವೇಗಿ ಇಮ್ರಾನ್ ಖಾನ್‌ಗೆ ಕ್ಲೀನ್ ಬೌಲ್ಡಾಗುವ ಮೊದಲು ಝಿಂಬಾಬ್ವೆ ಸಂಜಾತ ಹಿಲ್ಟನ್ 97 ಎಸೆತಗಳಲ್ಲಿ 5 ಬೌಂಡರಿಗಳ ಸಹಿತ 37 ರನ್ ಗಳಿಸಿದ್ದರು. ನವೆಂಬರ್‌ನಲ್ಲಿ ಪರ್ತ್‌ನಲ್ಲಿ ದ.ಆಫ್ರಿಕ ವಿರುದ್ಧ 26 ರನ್ ಗಳಿಸಿದ್ದ ಮಿಚೆಲ್ ಮಾರ್ಷ್ ದಾಖಲೆಯನ್ನು ಮುರಿದರು.
ಮ್ಯಾಟ್ ವ್ಯಾಡ್(29), ಮಿಚೆಲ್ ಸ್ಟಾರ್ಕ್(16) ಬೇಗನೆ ಔಟಾದರು. ಟೀ ವಿರಾಮಕ್ಕೆ ಮೊದಲು ನಾಯಕ ಸ್ಮಿತ್ ಆಸ್ಟ್ರೇಲಿಯ ಇನಿಂಗ್ಸ್‌ನ್ನು ಡಿಕ್ಲೇರ್ ಮಾಡಿದರು.
ಕಳೆದ ವಾರ ಮೆಲ್ಬೋರ್ನ್‌ನಲ್ಲಿ ಆಸ್ಟ್ರೇಲಿಯ ಮೊದಲ ಇನಿಂಗ್ಸ್‌ನಲ್ಲಿ 624 ರನ್ ಗಳಿಸಿದ್ದಾಗ ಸುಮಾರು 11 ಗಂಟೆಗಳ ಮೈದಾನದಲ್ಲಿ ಕಾಲ ಕಳೆದಿದ್ದ ಪಾಕ್ ಆಟಗಾರರು ಇಂದು ಸುಮಾರು 10 ಗಂಟೆಗಳ ಮೈದಾನದಲ್ಲಿದ್ದರು.
ಪಾಕ್ ಪರ ವಹಾಬ್ ರಿಯಾಝ್(3-89) ಮೂರು ವಿಕೆಟ್ ಯಶಸ್ವಿ ಬೌಲರ್ ಎನಿಸಿಕೊಂಡರು. ಇಮ್ರಾನ್ ಖಾನ್(2-111) ಹಾಗೂ ಅಝರ್ ಅಲಿ(2-70) ತಲಾ ಎರಡು ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್
ಆಸ್ಟ್ರೇಲಿಯ ಪ್ರಥಮ ಇನಿಂಗ್ಸ್: 538/8
(ರೆನ್‌ಶಾ 184, ವಾರ್ನರ್ 113, ಹ್ಯಾಂಡ್ಸ್‌ಕಾಂಬ್ 110, ರಿಯಾಝ್ 3-89, ಅಲಿ 2-70, ಇಮ್ರಾನ್ ಖಾನ್ 2-111)
ಪಾಕಿಸ್ತಾನ ಪ್ರಥಮ ಇನಿಂಗ್ಸ್: 126/2
(ಅಝರ್ ಅಲಿ ಅಜೇಯ 58, ಯೂನಿಸ್ ಖಾನ್ ಅಜೇಯ 64, ಹೇಝಲ್‌ವುಡ್ 2-32)







