ಬಿಸಿಸಿಐ ವೀಕ್ಷಕರಾಗಿ ಜಸ್ಟಿಸ್ ಮುಕುಲ್ ಮುದ್ಗಲ್ ನೇಮಕ ಸಾಧ್ಯತೆ

ಹೊಸದಿಲ್ಲಿ, ಜ.4: ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ಹಾಗೂ ಕಾರ್ಯದರ್ಶಿ ಅಜಯ್ ಶಿರ್ಕೆ ಅವರನ್ನು ಸುಪ್ರೀಂಕೋರ್ಟ್ ವಜಾಗೊಳಿಸಿರುವ ಹಿನ್ನೆಲೆಯಲ್ಲಿ ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿಯ ಕಾರ್ಯಚಟುವಟಿಕೆಯನ್ನು ನೋಡಿಕೊಳ್ಳಲು ವೀಕ್ಷಕರಾಗಿ ಜಸ್ಟಿಸ್ ಮುಕುಲ್ ಮುದ್ಗಲ್ ನೇಮಕವಾಗುವ ಸಾಧ್ಯತೆಯಿದೆ. ವೀಕ್ಷಕರ ಹುದ್ದೆಗೆ ಮುದ್ಗಲ್ ಹೆಸರು ಮುಂಚೂಣಿಯಲ್ಲಿದೆ.
ಬಿಸಿಸಿಐನ ಎಲ್ಲ ಉನ್ನತಾಧಿಕಾರಿಗಳನ್ನು ವಜಾಗೊಳಿಸಬೇಕು. ಮಾಜಿ ಗೃಹ ಕಾರ್ಯದರ್ಶಿ ಜಿ.ಕೆ. ಪಿಳ್ಳೈ ಅವರನ್ನು ವೀಕ್ಷಕರನ್ನಾಗಿ ನೇಮಕ ಮಾಡಬೇಕೆಂದು ನವೆಂಬರ್‌ನಲ್ಲಿ ಜಸ್ಟಿಸ್ ಲೋಧಾ ಸಮಿತಿ ಸುಪ್ರೀಂಕೋರ್ಟ್‌ಗೆ ಶಿಫಾರಸು ಮಾಡಿತ್ತು.
ದಿಲ್ಲಿ ಕ್ರಿಕೆಟ್ ಸಂಸ್ಥೆ(ಡಿಡಿಸಿಎ)ಯಲ್ಲಿ ವೀಕ್ಷಕರಾಗಿ ಕಾರ್ಯನಿರ್ವಹಿಸಿರುವ ಅನುಭವ ಹೊಂದಿರುವ ಮುದ್ಗಲ್ ಬಿಸಿಸಿಐ ವೀಕ್ಷಕರಾಗಿ ನೇಮಕವಾಗುವ ಸಾಧ್ಯತೆಯಿದೆ.
2016ರ ಐಸಿಸಿ ಟ್ವೆಂಟಿ-20 ವಿಶ್ವಕಪ್ ಹಾಗೂ 2016ರ ಐಪಿಎಲ್ ಪಂದ್ಯಗಳ ಆಯೋಜನೆಯನ್ನು ನೋಡಿಕೊಳ್ಳುವಂತೆ ದಿಲ್ಲಿ ಹೈಕೋರ್ಟ್ ಮುದ್ಗಲ್‌ರನ್ನು ನೇಮಕ ಮಾಡಿತ್ತು. ಫಿರೋಝ್ ಷಾ ಕೋಟ್ಲಾ ಸ್ಟೇಡಿಯಂ 2015ರ ಡಿಸೆಂಬರ್‌ನಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕ ನಡುವಿನ ನಾಲ್ಕನೆ ಟೆಸ್ಟ್ ಆತಿಥ್ಯ ವಹಿಸಿಕೊಂಡಿದ್ದಾಗ ಮುದ್ಗಲ್ ನ್ಯಾಯಾಲಯದಿಂದ ನೇಮಿಲ್ಪಟ್ಟ ವೀಕ್ಷಕರಾಗಿ ಕಾರ್ಯನಿರ್ವಹಿಸಿದ್ದರು.
ಟೆಸ್ಟ್ ಕೊನೆಗೊಂಡ ಬಳಿಕ ಡಿಡಿಸಿಎಯಲ್ಲಿನ ಹಲವು ನ್ಯೂನತೆಯನ್ನು ಬೆಟ್ಟು ಮಾಡಿ ವರದಿಯನ್ನು ಸಲ್ಲಿಸಿದ್ದರು. 2013ರ ಐಪಿಎಲ್‌ನಲ್ಲಿ ಸ್ಪಾಟ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿ ಸುಪ್ರೀಂಕೋರ್ಟ್‌ನಿಂದ ನೇಮಕ ಮಾಡಲ್ಪಟ್ಟ ಸಮಿತಿಯಲ್ಲಿ ಅಧ್ಯಕ್ಷರಾಗಿದ್ದ ಮುದ್ಗಲ್ ಕ್ರಿಕೆಟ್ ವಲಯದಲ್ಲಿ ಭಾರೀ ಗೌರವವನ್ನು ಪಡೆದುಕೊಂಡಿದ್ದರು.







