ರಣಜಿ ಟ್ರೋಫಿ: ಕಿರಿಯ ಆಟಗಾರ ಪ್ರಥ್ವಿ ಶಾ ಶತಕ, ಮುಂಬೈ ಫೈನಲ್‌ಗೆ

ಹೊಸದಿಲ್ಲಿ, ಜ.5: ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಆಡಿದ ತನ್ನ ಮೊದಲ ಪಂದ್ಯದಲ್ಲೇ ಶತಕ ಬಾರಿಸಿದ 17ರ ಹರೆಯದ ಆರಂಭಿಕ ಬ್ಯಾಟ್ಸ್‌ಮನ್ ಪ್ರಥ್ವಿ ಶಾ ಹಾಲಿ ಚಾಂಪಿಯನ್ ಮುಂಬೈ ತಂಡ ರಣಜಿ ಟ್ರೋಫಿ ಟೂರ್ನಿಯಲ್ಲಿ 46ನೆ ಬಾರಿ ಫೈನಲ್‌ಗೆ ತೇರ್ಗಡೆಯಾಗಲು ಮಹತ್ವದ ಕೊಡುಗೆ ನೀಡಿದ್ದಾರೆ.
ರಾಜ್‌ಕೋಟ್‌ನಲ್ಲಿ ಗುರುವಾರ ಕೊನೆಗೊಂಡ ರಣಜಿ ಟ್ರೋಫಿಯ ಮೊದಲ ಸೆಮಿ ಫೈನಲ್‌ನಲ್ಲಿ ತಮಿಳುನಾಡು ವಿರುದ್ಧ ಜಯ ಸಾಧಿಸಲು 251 ರನ್ ಗುರಿ ಪಡೆದಿದ್ದ ಮುಂಬೈ ತಂಡ 6 ವಿಕೆಟ್‌ಗಳ ಅಂತರದಿಂದ ಜಯ ದಾಖಲಿಸಿತು.
17 ವರ್ಷ, 57 ದಿನಗಳ ಪ್ರಾಯದ ಪ್ರಥ್ವಿ ಶಾ ಒತ್ತಡದ ನಡುವೆಯೂ ಮುಂಬೈನ 2ನೆ ಇನಿಂಗ್ಸ್‌ನಲ್ಲಿ 175 ಎಸೆತಗಳನ್ನು ಎದುರಿಸಿ 13 ಬೌಂಡರಿ, 1 ಸಿಕ್ಸರ್‌ಗಳ ಸಹಿತ 120 ರನ್ ಗಳಿಸಿದರು. ಚೊಚ್ಚಲ ಪ್ರಥಮ ದರ್ಜೆ ಪಂದ್ಯದಲ್ಲಿ ಶತಕ ಪೂರೈಸಿದ ಶಾ ಮುಂಬೈ ಮಾಜಿ ಬ್ಯಾಟ್ಸ್‌ಮನ್‌ಗಳಾದ ಕ್ರಿಕೆಟ್ ದಂತಕತೆ ಸಚಿನ್ ತೆಂಡುಲ್ಕರ್, ಅಮೋಲ್ ಮುಝುಂದಾರ್, ಅಜಿಂಕ್ಯ ರಹಾನೆ, ಜತಿನ್ ಪರಾಂಜಪೆ ಹಾಗೂ ಸಮೀರ್ ದಿೆ ಅವರನ್ನೊಳಗೊಂಡ ಯಾದಿಗೆ ಸೇರ್ಪಡೆಯಾದರು.
ತಾನೆದುರಿಸಿದ 152ನೆ ಎಸೆತದಲ್ಲಿ ಶತಕ ಪೂರೈಸಿದ ಶಾ ಚೊಚ್ಚಲ ರಣಜಿ ಟ್ರೋಫಿ ಪಂದ್ಯದಲ್ಲಿ ಶತಕ ಬಾರಿಸಿದ 14ನೆ ಆಟಗಾರನೆಂಬ ಕೀರ್ತಿಗೆ ಭಾಜನರಾದರು.
ಶಾ ಮೊದಲ ಇನಿಂಗ್ಸ್‌ನಲ್ಲಿ ಕೇವಲ 4 ರನ್ ಗಳಿಸಿ ಔಟಾಗಿದ್ದರು. ಎರಡನೆ ಇನಿಂಗ್ಸ್‌ನಲ್ಲಿ ಅಮೋಘ ಬ್ಯಾಟಿಂಗ್ ಮಾಡಿದ ಶಾ ಚೊಚ್ಚಲ ಪ್ರಥಮ ದರ್ಜೆ ಪಂದ್ಯದಲ್ಲಿ ತನಗೆ ಲಭಿಸಿದ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಂಡಿದ್ದಾರೆ.
ಪ್ರಥ್ವಿ ಶಾ 2014ರಲ್ಲಿ 14ರ ಹರೆಯದಲ್ಲಿ ಮುಂಬೈನಲ್ಲಿ ನಡೆದಿದ್ದ ಅಂತರ್-ಶಾಲಾ ಮಟ್ಟದ ಹ್ಯಾರಿಸ್ ಶೀಲ್ಡ್ ಕ್ರಿಕೆಟ್ ಟೂರ್ನಿಯಲ್ಲಿ 330 ಎಸೆತಗಳಲ್ಲಿ 85 ಬೌಂಡರಿ, 5 ಸಿಕ್ಸರ್‌ಗಳಿದ್ದ 546 ರನ್ ಗಳಿಸಿ ಎಲ್ಲರ ಗಮನ ಸೆಳೆದಿದ್ದರು. ಡಿಸೆಂಬರ್‌ನಲ್ಲಿ ನಡೆದಿದ್ದ ಅಂಡರ್-19 ಟೂರ್ನಿಯಲ್ಲಿ 5 ಪಂದ್ಯಗಳನ್ನು ಆಡಿದ್ದರು. ಈ ಸಾಧನೆಯ ಮೂಲಕ ಮುಂಬೈಯು ರಣಜಿಯ ಸೆಮಿ ಫೈನಲ್‌ಗೆ ಆಯ್ಕೆ ಮಾಡಿದ್ದ ತಂಡವನ್ನು ಸೇರಿದ್ದರು.
ಶಾ 20ಕ್ಕೂ ಅಧಿಕ ವರ್ಷದ ಬಳಿಕ ರಣಜಿ ಟ್ರೋಫಿಯ ಚೊಚ್ಚಲ ಪಂದ್ಯದಲ್ಲಿ ಶತಕ ಬಾರಿಸಿದ ಮುಂಬೈನ ಮೊದಲ ಆಟಗಾರನಾಗಿದ್ದಾರೆ. 1993-94ರಲ್ಲಿ ಅಮೊಲ್ ಮುಝುಂದಾರ್ ಬಳಿಕ ಶಾ ಈ ಸಾಧನೆ ಮಾಡಿದ್ದಾರೆ.
ಸೆಮಿಫೈನಲ್‌ನಲ್ಲಿ 251 ರನ್ ಗುರಿ ಪಡೆದಿದ್ದ ಮುಂಬೈ ತಂಡದಲ್ಲಿ ಆರಂಭಿಕ ಆಟಗಾರನಾಗಿ ಕಣಕ್ಕಿಳಿದ ಈ ಹುಡುಗ ಪ್ರಫುಲ್ ವೇಲ(36) ಅವರೊಂದಿಗೆ ಮೊದಲ ವಿಕೆಟ್‌ಗೆ 90 ರನ್ ಜೊತೆಯಾಟ ನಡೆಸಿ ಭದ್ರ ಬುನಾದಿ ಹಾಕಿಕೊಟ್ಟರು.
ಶ್ರೇಯಸ್ ಐಯ್ಯರ್(40) ಅವರೊಂದಿಗೆ 2ನೆ ವಿಕೆಟ್‌ಗೆ 91 ರನ್ ಹಾಗೂ ಸೂರ್ಯಕುಮಾರ ಯಾದವ್(34) ಅವರೊಂದಿಗೆ 3ನೆ ವಿಕೆಟ್‌ಗೆ 57 ರನ್ ಸೇರಿಸಿ ಮುಂಬೈ ಫೈನಲ್‌ಗೆ ತಲುಪಲು ಪ್ರಮುಖ ಪಾತ್ರವಹಿಸಿದರು. ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
ಇದೀಗ 46ನೆ ಬಾರಿ ರಣಜಿ ಟ್ರೋಫಿ ಫೈನಲ್‌ಗೆ ತಲುಪಿರುವ ಮುಂಬೈ ತಂಡ ಜ.10 ರಂದು ಇಂದೋರ್‌ನಲ್ಲಿ ಗುಜರಾತ್ ತಂಡವನ್ನು ಎದುರಿಸಲಿದೆ. ದಾಖಲೆ 42ನೆ ಬಾರಿ ರಣಜಿ ಟ್ರೋಫಿ ಜಯಿಸುವ ವಿಶ್ವಾಸದಲ್ಲಿದೆ.
ಮುಂಬೈ ಫೈನಲ್‌ಗೆ ತಲುಪಲು ಅಭಿಷೇಕ ನಾಯರ್ ಹಾಗೂ ಶಾರ್ದೂಲ್ ಠಾಕೂರ್ ಅವರ ಆಲ್‌ರೌಂಡ್ ಪ್ರದರ್ಶನ, ಪ್ರಫುಲ್ ವೇಲ, ಶ್ರೇಯಸ್ ಐಯ್ಯರ್, ಸೂರ್ಯಯಾದವ್ ಹಾಗೂ ನಾಯಕ ಆದಿತ್ಯ ತಾರೆಯ ಕೊಡುಗೆಯೂ ಕಾರಣ. ಆದರೆ, ಸೆಮಿಫೈನಲ್ ಪಂದ್ಯದಲ್ಲಿ ಎಲ್ಲರ ಗಮನ ಸೆಳೆದವರು ಪ್ರಥ್ವಿ ಶಾ. ಕೊನೆಯ ದಿನದಾಟದ ಒತ್ತಡದ ಪರಿಸ್ಥಿತಿಯಲ್ಲಿ ಬಲಗೈ ದಾಂಡಿಗ ಶಾ ಓರ್ವ ಅನುಭವಿ ಆಟಗಾರನಂತೆ ಆಡಿದ್ದರು.
‘‘ನನಗೆ ಮಾರ್ಗದರ್ಶನ ನೀಡಿರುವ ಕೋಚ್ ಹಾಗೂ ಸಹ ಆಟಗಾರರಿಗೆ ಕೃತಜ್ಞತೆ ಸಲ್ಲಿಸುವೆ. ರಾಜ್ಯ ತಂಡವನ್ನು ಪ್ರತಿನಿಧಿಸಬೇಕೆನ್ನುವುದು ಎಲ್ಲ ಆಟಗಾರರ ಕನಸಾಗಿರುತ್ತದೆ. ನನ್ನ ಮೊದಲ ಪಂದ್ಯದಲ್ಲೇ ಶತಕ ಬಾರಿಸಿದ್ದಕ್ಕೆ ತುಂಬಾ ಸಂತೋಷವಾಗುತ್ತಿದೆ’’ ಎಂದು ಶಾ ಸಂತಸ ವ್ಯಕ್ತಪಡಿಸಿದ್ದಾರೆ.
ಪ್ರಥ್ವಿ ಶಾ ಯಾರೀತ?
1999ರ ನ.9 ರಂದು ಮುಂಬೈನ ಥಾಣೆಯಲ್ಲಿ ಜನಿಸಿದ್ದ ಪ್ರಥ್ವಿ 3ನೆ ವರ್ಷದಲ್ಲಿ ವಿರಾಟ್ ಕ್ರಿಕೆಟ್ ಅಕಾಡೆಮಿಗೆ ಸೇರಿದರು. ಶಾ ಚಿಕ್ಕವರಿರುವಾಗಲೇ ತಾಯಿ ತೀರಿಕೊಂಡಿದ್ದರು. ತಂದೆಯ ಆಶ್ರಯದಲ್ಲಿ ಬೆಳೆದು ಕ್ರಿಕೆಟ್ ಆಡಲು ಆರಂಭಿಸಿದ್ದರು.
ಮುಂಬೈ ಕ್ರಿಕೆಟ್ ಕ್ಲಬ್‌ನ ಮಿಡ್ಲ್ ಇನ್‌ಕಮ್ ಗ್ರೂಪ್‌ನಲ್ಲಿ ಕ್ರಿಕೆಟ್ ಆಡಲು ಆರಂಭಿಸಿದರು. ರಿಝ್ವಿ ಸ್ಪ್ರಿಂಗ್‌ಫೀಲ್ಡ್ ಹೈಸ್ಕೂಲ್ ಹಾಗೂ ಮುಂಬೈನ ಅಂಡರ್-16 ತಂಡದ ನಾಯಕನಾಗಿದ್ದರು. ಶಾ ನಾಯಕತ್ವದಲ್ಲಿ ರಿಝ್ವಿ ಸ್ಪ್ರಿಂಗ್‌ಫೀಲ್ಡ್ ಹೈಸ್ಕೂಲ್ ತಂಡ ಎರಡು ಬಾರಿ 2012 ಹಾಗೂ 2013ರಲ್ಲಿ ಭಾರತೀಯ ಯೂತ್ ಕ್ರಿಕೆಟ್‌ನ ಪ್ರತಿಷ್ಠಿತ ಟ್ರೋಫಿ ಹ್ಯಾರಿಸ್ ಶೀಲ್ಡ್ ಟ್ರೋಫಿಯನ್ನು ಗೆದ್ದುಕೊಂಡಿತ್ತು.
2012ರ ಎಪ್ರಿಲ್‌ನಲ್ಲಿ ಇಂಗ್ಲೆಂಡ್‌ನ ಮ್ಯಾಂಚೆಸ್ಟರ್ ಸ್ಕೂಲ್ ತಂಡದ ಪರ ಆಡುವ ಆಹ್ವಾನ ಪಡೆದಿದ್ದ ಶಾ 2 ತಿಂಗಳ ಅವಧಿಯಲ್ಲಿ 1,446 ರನ್ ಗಳಿಸಿದ್ದರು. ಚೊಚ್ಚಲ ಪಂದ್ಯದಲ್ಲಿ ಶತಕ ಬಾರಿಸಿದ್ದಲ್ಲದೆ 68 ವಿಕೆಟ್‌ಗಳನ್ನು ಪಡೆದಿದ್ದರು.
2013ರ ನವೆಂಬರ್‌ನಲ್ಲಿ ಶಾಲಾ ಮಟ್ಟದ ಕ್ರಿಕೆಟ್‌ನಲ್ಲಿ 546 ರನ್ ಗಳಿಸಿ 1901ರ ಬಳಿಕ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಗರಿಷ್ಠ ಸ್ಕೋರ್ ಗಳಿಸಿದ ಸಾಧನೆ ಮಾಡಿದ್ದರು. 2016ರ ಜನವರಿ 4 ರಂದು ಮುಂಬೈನ ಹುಡುಗ ಪ್ರಣವ್ ಧನವಡೆ 1000 ನರ್ ಗಳಿಸುವ ಮೂಲಕ ಶಾ ದಾಖಲೆಯನ್ನು ಮುರಿದಿದ್ದರು.
ಶಾ 2016-17 ರಣಜಿ ಟ್ರೋಫಿಯ ಸೆಮಿಫೈನಲ್‌ನಲ್ಲಿ ಮುಂಬೈ ತಂಡದಲ್ಲಿ ಆಡುವ ಮೂಲಕ ಪ್ರಥಮ ದರ್ಜೆ ಕ್ರಿಕೆಟ್‌ಗೆ ಕಾಲಿಟ್ಟರು.
ಸಂಕ್ಷಿಪ್ತ ಸ್ಕೋರ್
ತಮಿಳುನಾಡು ಪ್ರಥಮ ಇನಿಂಗ್ಸ್: 305 ರನ್‌ಗೆ ಆಲೌಟ್
ಮುಂಬೈ ಪ್ರಥಮ ಇನಿಂಗ್ಸ್: 411
ತಮಿಳುನಾಡು ಎರಡನೆ ಇನಿಂಗ್ಸ್: 356/6 ಡಿಕ್ಲೇರ್
ಮುಂಬೈ ಎರಡನೆ ಇನಿಂಗ್ಸ್: 62.1 ಓವರ್‌ಗಳಲ್ಲಿ 251/4
(ಪ್ರಥ್ವಿ ಶಾ ಅಜೇಯ 120, ಶ್ರೇಯಸ್ ಐಯ್ಯರ್ 40, ವೇಲ 36, ಯಾದವ್ 34, ಶ್ರೀನಿವಾಸ 2/73)







