ಜ.26ರಿಂದ ಫಲಪುಷ್ಪ ಪ್ರದರ್ಶನ
ಮಂಗಳೂರು, ಜ.5: ಗಣರಾಜ್ಯೋತ್ಸವದ ಪ್ರಯುಕ್ತ ಫಲಪುಷ್ಪ ಪ್ರದರ್ಶನ ಜನವರಿ 26ರಿಂದ 29ರ ವರೆಗೆ ನಗರದ ಕದ್ರಿ ಪಾರ್ಕ್‌ನಲ್ಲಿ ನಡೆಯಲಿದೆ. ಈ ಕುರಿತು ಪೂರ್ವಭಾವಿ ಸಭೆಯು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಎಂ.ಆರ್. ರ ವಿಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಈ ಫಲಪುಷ್ಪ ಪ್ರದರ್ಶನವು ಇನ್ನಷ್ಷು ಜನರನ್ನು ಆಕರ್ಷಿಸುವಂತಾಗಬೇಕು. ಈ ನಿಟ್ಟಿನಲ್ಲಿ ಎಲ್ಲಾ ರೀತಿಯ ಸಿದ್ಧತೆಗಳನ್ನೂ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಅಲಂಕಾರಿಗಳ ಗಿಡಗಳು, ನರ್ಸರಿ ಸೇರಿದಂತೆ ಮಳಿಗೆಗಳನ್ನು ವ್ಯವಸ್ಥಿತವಾಗಿ ಜೋಡಣೆ ಮಾಡಬೇಕು. ಸಾರ್ವಜನಿಕರಿಗೆ ಮಿತ ದರದಲ್ಲಿ ಸಸಿ-ಗಿಡಗಳು ದೊರೆಯುವಂತಾಗಬೇಕು. ಶೌಚಾಲಯ ಸೇರಿದಂತೆ ಮೂಲ ಸೌಕರ್ಯಗಳನ್ನು ಸಮರ್ಪಕವಾಗಿ ಸಿದ್ಧಗೊಳಿಸಲು ತಿಳಿಸಿದರು.
ಫಲಪುಷ್ಪ ಪ್ರದರ್ಶನ ಸಂದರ್ಭದಲ್ಲಿ ವಾಹನಗಳ ಪಾರ್ಕಿಂಗ್ ಸುಗಮವಾಗಲು, ತಿಂಡಿ ತಿನಿಸುಗಳ ಮಳಿಗೆಗಳಲ್ಲಿ ಶುಚಿತ್ವ ಕಾಪಾಡಲು ಆದ್ಯತೆ ನೀಡುವಂತೆ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ತಿಳಿಸಿದರು.
ಸಭೆಯಲ್ಲಿ ತೋಟಗಾರಿಕಾ ಇಲಾಖಾ ಉಪನಿರ್ದೇಶಕ ಡಾ.ಎಚ್.ಆರ್. ಯೊಗೀಶ್, ಜಂಟಿ ಕೃಷಿ ನಿರ್ದೇಶಕ ಕೆಂಪೇಗೌಡ, ಸಿರಿ ತೋಟಗಾರಿಕಾ ಸಂಘದ ಸದಸ್ಯರು ಉಪಸ್ಥಿತರಿದ್ದರು.





