ಆನ್‌ಲೈನ್ ಮೂಲಕ ಎಪಿಎಲ್ ಪಡಿತರ ಚೀಟಿ
ಜ.9ರಿಂದ ಚಾಲನೆ: ಯು.ಟಿ.ಖಾದರ್

ಬೆಂಗಳೂರು, ಜ.5: ಆನ್‌ಲೈನ್‌ನಲ್ಲಿ ಅರ್ಜಿ ಹಾಕಿದ ತಕ್ಷಣವೇ ಎಪಿಎಲ್ ಪಡಿತರ ಚೀಟಿಯನ್ನು ನೀಡುವ ನೂತನ ವ್ಯವಸ್ಥೆಯನ್ನು ಜಾರಿ ಮಾಡಲಾಗುತ್ತಿದ್ದು, ಜ.9ರಂದು ಈ ನೂತನ ವ್ಯವಸ್ಥೆ ಜಾರಿಯಾಗಲಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ.ಖಾದರ್ ಹೇಳಿದ್ದಾರೆ. ಗುರುವಾರ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ದೇಶದಲ್ಲಿಯೇ ಈ ವ್ಯವಸ್ಥೆ ಪ್ರಥಮವಾಗಿದ್ದು, ಆನ್‌ಲೈನ್‌ನಲ್ಲಿ ಎಪಿಎಲ್ ಕಾರ್ಡ್ ಕೋರಿ ಅರ್ಜಿ ಹಾಕಿದ ತಕ್ಷಣ ತಾತ್ಕಾಲಿಕ ಕಾರ್ಡ್‌ನ್ನು ಪಡೆಯಬಹುದು. ನಂತರ ಒಂದು ವಾರದ ಒಳಗೆ ಅಂಚೆ ಮೂಲಕ ಅವರಿಗೆ ಪಡಿತರ ಚೀಟಿ ತಲುಪಲಿದೆ ಎಂದು ಹೇಳಿದರು.
ಈ ಹೊಸ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜ.9ರಂದು ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು. ಎಪಿಎಲ್ ಕಾರ್ಡ್ ವಿತರಣೆಯಂತೆಯೇ ಬಿಪಿಎಲ್ ಕಾರ್ಡ್‌ನ್ನೂ 15 ದಿನದಲ್ಲಿ ಆನ್‌ಲೈನ್ ಮುಖಾಂತರ ನೀಡಲು ನಿರ್ಧರಿಸಿದ್ದು, ಸುಮಾರು 10 ಲಕ್ಷ ಅರ್ಜಿಗಳು ಬಿಪಿಎಲ್ ಕಾರ್ಡ್‌ಗಾಗಿ ಬಂದಿವೆ. ಈ ಹಿಂದೆ ಅರ್ಜಿ ಸಲ್ಲಿಸಿರುವವರು ಸಹ ಆನ್‌ಲೈನ್‌ನಲ್ಲಿ ಹೊಸದಾಗಿ ಅರ್ಜಿ ಸಲ್ಲಿಸಬೇಕು. ಆದರೆ, ಯಾವುದೆ ಶುಲ್ಕ ನೀಡಬೇಕಾಗಿಲ್ಲ ಎಂದು ತಿಳಿಸಿದರು.
ಬಿಪಿಎಲ್ ಕಾರ್ಡ್ ನೀಡುವಾಗ ಮಾನದಂಡಗಳ ತಪಾಸಣೆಗಳನ್ನು ಗ್ರಾಮ ಲೆಕ್ಕಿಗರು ನಡೆಸುತ್ತಾರೆ ಎಂದು ತಿಳಿಸಿದರು.
ಎಪಿಎಲ್ ಮತ್ತು ಬಿಪಿಎಲ್ ಕಾರ್ಡ್‌ಗಳನ್ನು ಆಧಾರ್ ಕಾರ್ಡ್‌ನಲ್ಲಿರುವ ವಿಳಾಸಗಳಿಗೆ ಸ್ಪೀಡ್ ಪೋಸ್ಟ್ ಮೂಲಕ ಕಳುಹಿಸಲಾಗುವುದು. ಹಾಗೊಂದು ಬಾರಿ ಮನೆಯನ್ನು ಬದಲಾಯಿಸಿದರೆ ಮತ್ತೆ ಅರ್ಜಿ ಸಲ್ಲಿಸಲು ಅವಕಾಶವಿದೆ ಎಂದು ಹೇಳಿದರು.







