ಬಾಳೆಪುಣಿ: ಸ್ಕೌಟ್ಸ್-ಗೈಡ್ಸ್ ರ್ಯಾಲಿ, ಕಬ್ಸ್-ಬುಲ್ ಬುಲ್ಸ್ ಉತ್ಸವ ಉದ್ಘಾಟನೆ

ಕೊಣಾಜೆ,ಜ.5: ಮಕ್ಕಳು ವಿದ್ಯಾರ್ಥಿ ದೆಸೆಯಲ್ಲೇ ನಾಯಕತ್ವದ ಗುಣಗಳನ್ನು ಬೆಳೆಸಿ ದೇಶ ಪ್ರೇಮ ಮೈಗೂಡಿಸಿಕೊಳ್ಳುವಂತಾಗಬೇಕು.ಸ್ಕೌಟ್ಸ್ ಮತ್ತು ಗೈಡ್ಸ್ ಶಿಕ್ಷಣದಲ್ಲಿ ವಿದ್ಯಾರ್ಥಿಗಳ ಪ್ರತಿಭೆಗಳನ್ನೂ ಪ್ರೋತ್ಸಾಹಿಸುವ ಸೂಕ್ತ ವೇದಿಕೆ ದೊರೆಯುತ್ತದೆ ಎಂದು ಬಂಟ್ವಾಳ ತಾಲೂಕು ಪಂಚಾಯಿತಿ ಅಧ್ಯಕ್ಷರಾದ ಚಂದ್ರಹಾಸ್ ಕರ್ಕೇರ ಹೇಳಿದರು.
ಅವರು ಹೂಹಾಕುವ ಕಲ್ಲಿನ ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಮುಡಿಪುವಿನ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆಯಿಂದ ವಾರ್ಷಿಕ ಸ್ಕೌಟ್ಸ್-ಗೈಡ್ಸ್ ರ್ಯಾಲಿ ಹಾಗೂ ಕಬ್ಸ್-ಬುಲ್ ಬುಲ್ಸ್ ಉತ್ಸವ 2016-17 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸ್ಕೌಟ್ಸ್ ಮತ್ತು ಗೈಡ್ಸ್ ಎಂಬುವುದು ದೇಶ ಪ್ರೇಮವನ್ನು ಮೈಗೂಡಿಸುವುದರ ಜೊತೆಗೆ ಶಿಸ್ತಿನ ಸಾಮರಸ್ಯ ಜೀವನವನ್ನು ಕಲಿಸುವ ಕಟ್ಟುನಿಟ್ಟಿನ ವ್ಯವಸ್ಥೆಯಾಗಿದೆ ಎಂದು ಹೇಳಿದರು.
ಮಂಗಳೂರು ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಸಂತೋಷ್ ಕುಮಾರ್ ಬೋಳಿಯಾರ್ ಮಾತನಾಡಿ ಸ್ಕೌಟ್ಸ್ ರ್ಯಾಲಿ ಮತ್ತು ಕಬ್-ಬುಲ್ ಬುಲ್ಸ್ ಉತ್ಸವವನ್ನು ಕೇವಲ ಒಂದು ದಿವಸ ಆಚರಿಸುವುದರಿಂದ ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆಗಳನ್ನು ಅನಾವರಣಗೊಳಿಸಲು ಸಮಯದ ಅಭಾವ ಎದುರಾಗುತ್ತೆ.ಮುಂದಿನ ವರುಷ ಖಂಡಿತವಾಗಿಯೂ ಎರಡು ದಿವಸಗಳ ಕಾಲ ಕಾರ್ಯಕ್ರಮವನ್ನು ಆಯೋಜಿಸುವುದಾಗಿ ಭರವಸೆ ವ್ಯಕ್ತಪಡಿಸಿದರು.
ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಪ್ರದಾನ ಆಯುಕ್ತ ಎನ್.ಜಿ.ಮೋಹನ್ ಅವರು ಮಾತನಾಡಿ, ರಾಜ್ಯ ಸರಕಾರದ ಆರ್ಥಿಕ ಸಹಕಾರದಿಂದಾಗಿ ಸ್ಕೌಟ್ಸ್ ಮತ್ತು ಗೈಡ್ಸ್‌ನ ರಾಷ್ಟ್ರೀಯ ಜಾಂಬೂರಿಯನ್ನು ಕರ್ನಾಟಕದ ಮೈಸೂರಿನಲ್ಲಿ ನಡೆಸಿದ್ದು ಹೆಮ್ಮೆಯ ವಿಚಾರ. ಮೊನ್ನೆಯಷ್ಟೇ ನಿಧನರಾದ ಸಹಕಾರಿ ಸಚಿವ ಹೆಚ್.ಮಹದೇವ ಪ್ರಸಾದ್ ಅವರು ಜಾಂಬೂರಿ ಉತ್ಸವ ನಡೆಯಲು ಅವಿರತವಾಗಿ ಶ್ರಮಿಸಿ ಸರಕಾರದಿಂದ ಆರ್ಥಿಕ ಸಹಕಾರವನ್ನು ನೀಡಲು ಪ್ರದಾನ ಪಾತ್ರವಹಿಸಿದ್ದನ್ನು ಮರೆಯುವಂತಿಲ್ಲ. ಮುಂದೆ ನಡೆಯುವ ರಾಜ್ಯ ಜಾಂಬೂರಿ ಉತ್ಸವವನ್ನು ಅರ್ಥಪೂರ್ಣವಾಗಿ ಅದ್ಧೂರಿಯಾಗಿ ಆಚರಿಸಲು ಚಿಂತನೆ ನಡೆಸಲಾಗಿದೆ ಎಂದರು.
ಬಾಳೆಪುಣಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲೀಲಾವತಿ, ತಾ.ಪಂ ಸದಸ್ಯ ನವೀನ್ ಪಾದಲ್ಪಾಡಿ, ಬಿಜೆಪಿ ಅಲ್ಪ ಸಂಖ್ಯಾತ ಮೋರ್ಚಾ ಜಿಲ್ಲಾ ಪ್ರ.ಕಾರ್ಯದರ್ಶಿ ಹಾಜಿ.ಡಾ.ಕೆ.ಎ.ಮುನೀರ್ ಬಾವಾ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ರವಿಕಲಾ, ಆಯುಕ್ತರಾದ ರಾಮಶೇಷ ಶೆಟ್ಟಿ, ಉದ್ಯಮಿಗಳಾದ ವಿಕ್ಟರ್ ಡಿ ಸೋಜಾ, ರಮೇಶ್ ಶೇಣವ, ಬಿಜೆಪಿ ಯುವಮೋರ್ಚಾ ಕ್ಷೇತ್ರ ಉಪಾಧ್ಯಕ್ಷ ನವೀನ್ ಶೆಟ್ಟಿ, ಶಾಲಾ ಮುಖ್ಯ ಶಿಕ್ಷಕಿ ಶಾರದಾ ಬಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ನವೀನ್ ಚಂದ್ರ, ಮುಖ್ಯಸ್ಥರಾದ ಕೆ.ಸುಬ್ರಹ್ಮಣ್ಯ ಭಟ್, ಲೀನಾ ಮೆಂಡೋನ್ಸಾ ಚೇಳೂರು, ಎಂ.ರಾಮರಾವ್, ಚಂದ್ರಶೇಖರ ಶೆಟ್ಟಿ ಮರಿಕ್ಕಳ, ವಾಸುದೇವ ಬೋಳೂರು ಮುಂತಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಾಧನೆಗೈದ ಶಿಕ್ಷಕಿಯರು ಹಾಗೂ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.







