ಬರ ಪರಿಹಾರ : ರಾಜ್ಯ ಕೇಳಿದ್ದು ಎಷ್ಟು ?., ಕೇಂದ್ರ ಕೊಟ್ಟಿದ್ದು ಇಷ್ಟು !
ಕೇಂದ್ರದ ಮಲತಾಯಿ ಧೋರಣೆಗೆ ಆಕ್ಷೇಪ

ಬೆಂಗಳೂರು, ಜ. 5: ರಾಜ್ಯದ ಭೀಕರ ಸ್ವರೂಪದ ಬರಗಾಲಕ್ಕೆ 4,702 ಕೋಟಿ ರೂ. ಪರಿಹಾರ ಕೋರಿ ಕೇಂದ್ರಕ್ಕೆ ಮನವಿ ಸಲ್ಲಿಸಿದ್ದರೆ, ಕೇಂದ್ರ ಸರಕಾರ ಕೇವಲ 1,782 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿರುವುದಕ್ಕೆ ಜನರಿಂದ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ಬರ ಸ್ಥಿತಿಯಿಂದ ತತ್ತರಿಸಿರುವ ಕರ್ನಾಟಕ ರಾಜ್ಯಕ್ಕೆ, ಕೇಂದ್ರ ಸರಕಾರ ‘ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ’ ಎಂಬಂತೆ ಅತ್ಯಲ್ಪ ಪ್ರಮಾಣದ ಪರಿಹಾರ ಘೋಷಿಸುವ ಮೂಲಕ ಮತ್ತೊಮ್ಮೆ ಮಲತಾಯಿ ಧೋರಣೆ ಅನುಸರಿಸಿದೆ ಎಂಬ ಆರೋಪಗಳು ಕೇಳಿಬಂದಿವೆ.
ಹೊಸದಿಲ್ಲಿಯಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ್‌ಸಿಂಗ್ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ರಾಜ್ಯಕ್ಕೆ 1,782 ಕೋಟಿ ರೂ.ಗಳನ್ನು ನೀಡಲು ತೀರ್ಮಾನ ಕೈಗೊಳ್ಳಲಾಗಿದೆ. ಸತತ ಬರಗಾಲದಿಂದ 17 ಸಾವಿರ ಕೋಟಿ ರೂ. ನಷ್ಟ ಉಂಟಾಗಿದ್ದು, ತಕ್ಷಣದ ಪರಿಹಾರವಾಗಿ ಮಾರ್ಗಸೂಚಿಯನ್ವಯ 4,702 ಕೋಟಿ ರೂ.ಗಳ ನೆರವು ನೀಡಬೇಕೆಂದು ರಾಜ್ಯ ಸರಕಾರ ಮನವಿ ಸಲ್ಲಿಸಿತ್ತು.
ನೈಸರ್ಗಿಕ ಕೋಪ ನಿಧಿಯಿಂದ 1782.44 ಕೋಟಿ ರೂ.ಗಳನ್ನು ಮಾತ್ರ ಬಿಡುಗಡೆ ಮಾಡುವಂತೆ ಕೇಂದ್ರ ಸರಕಾರ ತಾಂತ್ರಿಕ ಸಮಿತಿ ಮಾಡಿದ ಶಿಫಾರಸಿಗೆ ಸಹಮತ ವ್ಯಕ್ತವಾಗಿದೆ. ಕಳೆದ ವರ್ಷದ ಮುಂಗಾರು ಬೆಳೆ ನಷ್ಟಕ್ಕಾಗಿ ಕರ್ನಾಟಕಕ್ಕೆ ಬಿಡುಗಡೆ ಮಾಡಬೇಕಾದ ಬರ ಪರಿಹಾರ ಮೊತ್ತದ ಬಗ್ಗೆ ಪರಾಮರ್ಶಿಸಲು ರಾಜನಾಥ್‌ಸಿಂಗ್ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿ ಸಭೆ ನಡೆಸಲಾಯಿತು.
ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ನೇತೃತ್ವದ ಸಮಿತಿಯಲ್ಲಿ ಹಣಕಾಸು ಸಚಿವ ಅರುಣ್ ಜೇಟ್ಲಿ, ಕೃಷಿ ಸಚಿವ ರಾಧಾ ಮೋಹನ್‌ಸಿಂಗ್ ಸದಸ್ಯರಾಗಿದ್ದಾರೆ. ರಾಜ್ಯಕ್ಕೆ 1,782.44 ಕೋಟಿ ರೂ.ಗಳ ಬರ ಪರಿಹಾರ ನೀಡಬೇಕೆಂದು ತಾಂತ್ರಿಕ ಸಮಿತಿ ಶಿಫಾರಸು ಮಾಡಿತ್ತು. ಸಮಿತಿಯ ಶಿಫಾರಸು ಪರಿಶೀಲಿಸಿ ಸಭೆಯಲ್ಲಿ ಇಂದು ಅಂತಿಮ ನಿರ್ಧಾರ ಪ್ರಕಟಿಸಿದೆ.
ಕಳೆದ 40 ವರ್ಷಗಳಲ್ಲೇ ಕಂಡು ಕೇಳರಿಯದ ಭೀಕರ ಸ್ವರೂಪದ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ರೈತರ ಸಂಕಷ್ಟವನ್ನು ಪರಿಗಣಿಸಿ ಇಡೀ ಬರ ಪರಿಹಾರ ಮೊತ್ತವನ್ನು ತಕ್ಷಣ ಬಿಡುಗಡೆ ಮಾಡುವಂತೆ ಕಳೆದ ವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ನಿಯೋಗ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು.
ರಾಜ್ಯದಲ್ಲಿನ ಬರ ಪರಿಹಾರಕ್ಕೆ 4,700 ಕೋಟಿ ರೂ.ನೆರವಿಗೆ ಕೇಂದ್ರಕ್ಕೆ ಮನವಿ ಸಲ್ಲಿಸಲಾಗಿತ್ತು. ಮಾರ್ಗಸೂಚಿಯನ್ವಯ ಅಷ್ಟು ಪರಿಹಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಆದರೆ, ಕೇಂದ್ರ ಸರಕಾರ ಕೇವಲ 1,700 ಕೋಟಿ ರೂ.ಬಿಡುಗಡೆ ಮಾಡಿದ್ದು, ಬಹಳ ಕಡಿಮೆಯಾಯಿತು. ಈ ಬಗ್ಗೆ ಮತ್ತೊಮ್ಮೆ ಕೇಂದ್ರಕ್ಕೆ ಮನವಿ ಸಲ್ಲಿಸಲಾಗುವುದು’
-ಸಿದ್ದರಾಮಯ್ಯ ಮುಖ್ಯಮಂತ್ರಿ







