ಮರಳಿಗಾಗಿ ಹೋರಾಟ; ತಾತ್ಕಾಲಿಕ ಹಿಂದೆಗೆತ
ಉಡುಪಿ, ಜ.5: ಜಿಲ್ಲೆಯ ಜನತೆಯನ್ನು ತೀವ್ರವಾಗಿ ಬಾಧಿಸುತ್ತಿರುವ ಮರಳಿನ ಸಮಸ್ಯೆ ಕುರಿತು ಸರಕಾರ ಹಾಗೂ ಜಿಲ್ಲಾಡಳಿತದ ಗಮನ ಸೆಳೆಯಲು ಜ.7ರಂದು ಉಡುಪಿ ಜಿಲ್ಲೆಯ ಸರ್ವ ಸಂಘಟನೆಗಳ ಮರಳಿಗಾಗಿ ಹೋರಾಟ ಸಮಿತಿಯಿಂದ ಆಯೋಜಿಸಲಾದ ಪ್ರತಿಭಟನೆಯನ್ನು ಹಿಂದಕ್ಕೆ ಪಡೆಯಲಾಗಿದೆ.
ಸಮಿತಿಯ ಸದಸ್ಯರು ಬುಧವಾರ ಜಿಲ್ಲಾದಿಕಾರಿಗಳನ್ನು ಭೇಟಿ ಮಾಡಿ ಪ್ರತಿಭಟನೆಯ ಮನವಿಯನ್ನು ಸಲ್ಲಿಸಿದಾಗ ಅವರು, ಸಂಘಟಕರ ಮನವಿಗೆ ಸ್ಪಂಧಿಸುವ ಕುರಿತು ನೀಡಿದ ಆಶ್ವಾಸನೆಯ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ತಾತ್ಕಾಲಿಕವಾಗಿ ಹಿಂದಕ್ಕೆ ಪಡೆಯಲಾಗಿದೆ ಎಂದು ಸಮಿತಿಯ ಸಂಚಾಲಕ ಎಂ.ಜಿ.ನಾಗೇಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲೆಯ ಬಡ ಲಾರಿ, ಟೆಂಪೋ ಮಾಲಕರಿಗೆ ಹಾಗೂ ಕೂಲಿ ಕಾರ್ಮಿಕರಿಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ಉಡುಪಿ ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಮನವಿಗೆ ಸ್ಪಂಧಿಸಿ ಸೂಕ್ತ ಕ್ರಮಕೈಗೊಳ್ಳುವಾಗಿ ಭರವಸೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ 7ರ ಪ್ರತಿಭಟನೆಯನ್ನು ಕೈಬಿಡಲಾಗಿದೆ. ಜಿಲ್ಲಾಧಿಕಾರಿಗಳು ನೀಡಿದ ಆಶ್ವಾಸನೆ ತಪ್ಪಿದಲ್ಲಿ ಮುಂದಿನ ದಿನಗಳಲ್ಲಿ ಅನಿರ್ಧಿಷ್ಟಾವಧಿ ಮುಷ್ಕರ ಮಾಡಲು ಸಮಿತಿ ನಿರ್ಧರಿಸಿದೆ ಎಂದವರು ಹೇಳಿದ್ದಾರೆ.
ಸಭೆಯಲ್ಲಿ ಸಮಿತಿಯ ಸಂಚಾಲಕರಾದ ಜೆರ್ರಿ ವಿನ್ಸೆಂಟ್ ಡಯಾಸ್, ನಾಗೇಶ್ ಹೆಗ್ಡೆ, ಜನನಿ ದಿವಾಕರ ಶೆಟ್ಟಿ, ಕುತ್ಯಾರು ಪ್ರಸಾದ್ ಶೆಟ್ಟಿ, ಸುದೇಶ್ ಶೇಟ್, ಕೃಷ್ಮ ಹೆಬ್ಬಾರ್, ರವಿ ಶೆಟ್ಟಿ, ಅನ್ಸಾರ್ ಅಹಮ್ಮದ್, ಉದಯ ಕಿರಣ್, ರಾಘವೇಂದ್ರ ಶೆಟ್ಟಿ, ಚಂದ್ರಪೂಜಾರಿ ಮುಂತಾದವರು ಉಪಸ್ಥಿತರಿದ್ದರು.







