ಉಡುಪಿ ತಾಲೂಕು ಮಟ್ಟದ ಯುವಜನ ಮೇಳ ಸಮಾರೋಪ

ಉಡುಪಿ, ಜ.5: ಯುವಜನ ಮೇಳದಲ್ಲಿ 15ರಿಂದ 30ವರ್ಷದೊಳಗಿನ ಯುವಕ-ಯುವತಿಯರು ಪಾಲ್ಗೊಳ್ಳಬೇಕೆಂಬ ನಿಯಮವಿದೆ. ಆದರೆ ಈ ವಯೋಮಿತಿಯ ಮಂದಿ ಸಿನಿಮಾ ಡ್ಯಾನ್ಸ್‌ನಂಥ ಪ್ರಕಾರಗಳತ್ತ ಆಕರ್ಷಿತರಾಗುತಿದ್ದಾರೆಯೇ ಹೊರತು ಜಾನಪದ ಕಲಾ ಪ್ರಕಾರಗಳತ್ತ ಮನ ಮಾಡುತ್ತಿಲ್ಲ. ಹೀಗಾಗಿ ಯುವಜನ ಮೇಳದಂತಹ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮಗಳನ್ನು ಸಂಘಟಿಸುವುದು ಕಷ್ಟಕರವಾಗಿದೆ ಎಂದು ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೆಶನ್ ಕುಮಾರ್ ಶೆಟ್ಟಿ ಹೇಳಿದ್ದಾರೆ.
ಮರ್ಣೆ ಸಮೀಪದ ಗುಂಡುಪಾದೆಯಲ್ಲಿ ಗುಂಡುಪಾದೆ ಗೆಳೆಯರ ಬಳಗ, ಜಿಪಂ, ಉಡುಪಿ ತಾಪಂ ಆಶ್ರಯದಲ್ಲಿ ನಡೆದ ಉಡುಪಿ ತಾಲೂಕು ಮಟ್ಟದ ಯುವಜನ ಮೇಳದ ಸಮಾರೋಪ ಸಮಾರಂಭದಲ್ಲಿ ಮಾತನಾಡುತಿದ್ದರು.
ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದ ಕಾಪುವಿನ ಮಾಜಿ ಶಾಸಕ ಲಾಲಾಜಿ ಮೆಂಡನ್ ಮಾತನಾಡಿ, ಅವಿಭಜಿತ ದ.ಕ. ಜಿಲ್ಲೆ ಜಾನಪದ ಕಲೆ ಗಳಿಗೆ ಹೆಸರುವಾಸಿಯಾಗಿವೆ. ಇಲ್ಲಿ ಯಕ್ಷಗಾನ, ದೈವರಾಧನೆ, ನಾಗಾರಾಧನೆ ಮೊದಲಾದ ಜಾನಪದ ಕಲಾಪ್ರಕಾರಗಳಿವೆ. ಇಲ್ಲಿ ಸಾಕಷ್ಟು ಉತ್ತಮ ಕಲಾವಿದರಿದ್ದು ಅವರಿಗೆ ಸೂಕ್ತ ಅವಕಾಶ ನೀಡಬೇಕು ಎಂದರು.
ಕಾರ್ಯಕ್ರಮದಲ್ಲಿ ಯುವಜನ ಒಕ್ಕೂಟದ ಮಾಜಿ ಅಧ್ಯಕ್ಷ ಮನೋಹರ ಕುಂದರ್, ಗುಂಡುಪಾದೆ ಗೆಳೆಯರ ಬಳಗದ ಅಧ್ಯಕ್ಷ ಅಶೋಕ್ ನಾಯ್ಕ, ಗುಂಡುಪಾದೆ ಮಹಿಳಾ ಸಮಾಜದ ಅಧ್ಯಕ್ಷೆ ವಿನ್ನಿ ಡಿಸೋಜಾ, ಯುವಜನ ಸೇವಾ ಮತ್ತು ಕ್ರೀಡಾಧಿಕಾರಿ ನಾರಾಯಣ ರಾವ್, ಮಣಿಪುರ ಗ್ರಾಪಂ ಉಪಾಧ್ಯಕ್ಷ ಕರುಣಾಕರ ಕರ್ಕೇರ, ಪೆರಣಂಕಿಲ ಗ್ರಾಪಂ ಸದಸ್ಯೆ ರಶ್ಮಿ ಆರ್. ನಾಯಕ್ ಉಪಸ್ಥಿತರಿದ್ದರು.
ಯುವಜನ ಮೇಳದಲ್ಲಿ ಭಾವಗೀತೆ, ಲಾವಣಿ, ಗೀಗೀ ಪದ, ಕೋಲಾಟ, ರಂಗಗೀತೆ, ಜಾನಪದ ಗೀತೆ, ಭಜನೆ, ವೀರಗಾಸೆ, ಡೊಳ್ಳು ಕುಣಿತ, ಚರ್ಮವಾದ್ಯ ಮೇಳ ಸೇರಿದಂತೆ ಸುಮಾರು 12 ಸ್ಪರ್ಧೆಗಳು ನಡೆದವು. ಗುಂಡುಪಾದೆ ಗೆಳೆಯರ ಬಳಗದ ಗೌರವಾಧ್ಯಕ್ಷ ಸದಾನಂದ ಪ್ರಭು ಸ್ವಾಗತಿಸಿ, ಅಧ್ಯಕ್ಷ ಅಶೋಕ್ ನಾಯ್ಕಾ ವಂದಿಸಿದರು. ಪ್ರಶಾಂತ್ ಪ್ರಭು ವಂದಿಸಿದರು.







