ಬರ ಪರಿಸ್ಥಿತಿ; ಪ್ರಧಾನಿಗೆ ಮತ್ತೊಮ್ಮೆ ಮನವಿ: ಮುಖ್ಯಮಂತ್ರಿ

ಮಂಗಳೂರು, ಜ.5: ರಾಜ್ಯದಲ್ಲಿರುವ ಬರಗಾಲದ ಪರಿಸ್ಥಿತಿಗೆ ಹೆಚ್ಚಿನ ನೆರವು ನೀಡಲು ಇನ್ನೊಂದು ಬಾರಿ ಪ್ರಧಾನಿಗೆ ಮನವಿ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಖಾಸಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಂದು ಸಂಜೆ ಬಂದಿಳಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ರಾಷ್ಟ್ರೀಯ ಬರ ಪರಿಹಾರ ನಿಯಮದ ಪ್ರಕಾರ 4,702 ಕೋಟಿ ರೂ. ಪರಿಹಾರ ನೀಬೇಕೆಂದು ಪ್ರಧಾನಿಯನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೇನೆ. ಪ್ರಧಾನಿಯವರು 1,782 ಕೋ.ರೂ. ಪರಿಹಾರ ನೀಡುವ ಬಗ್ಗೆ ತಿಳಿಸಿದ್ದಾರೆ. ರಾಜ್ಯದ ಬರ ಪರಿಸ್ಥಿತಿಯನ್ನು ನಿಭಾಯಿಸಲು ಈ ಅನುದಾನ ಸಾಕಾಗುವುದಿಲ್ಲ. ಆದ್ದರಿಂದ ಹೆಚ್ಚಿನ ಅನುದಾನಕ್ಕಾಗಿ ಎರಡನೆ ಬಾರಿ ಪ್ರಯತ್ನಿಸುತ್ತೇವೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಎಂಡೊಸಲ್ಫಾನ್ ಸಂತ್ರಸ್ತರ ನೆರವಿಗೆ ಸಿದ್ಧ
ಎಂಡೊಸಲ್ಫಾನ್ ಸಂತ್ರಸ್ತರ ಆತ್ಮಹತ್ಯೆ ದುರದೃಷ್ಟಕರ. ರಾಜ್ಯ ಸರಕಾರ ಎಂಡೊಸಲ್ಫಾನ್ ಸಂತ್ರಸ್ತರಿಗೆ ಎಲ್ಲಾ ನೆರವು ನೀಡಲು ಸಿದ್ಧವಿದೆ ಈಗಾಗಲೇ ಹಲವು ಯೋಜನೆಳನ್ನು ಅನುಷ್ಠಾನಗೊಳಿಸುತ್ತಿವೆ. ಆದರೆ ಈ ಹಂತದಲ್ಲಿ ಸಂತ್ರಸ್ತರು ಆತ್ಮಹತ್ಯೆ ಮುಂದಾಗಬಾರದಿತ್ತು ಎಂದು ಸಿಎಂ ವಿಷಾದ ವ್ಯಕ್ತಪಡಿಸಿದ್ದಾರೆ.
ಡಿವೈಎಸ್ಪಿ ಗಣಪತಿ ಪ್ರಕರಣ ಮುಗಿದ ಅಧ್ಯಾಯ
ಡಿವೈಎಸ್ಪಿ ಗಣಪತಿ ಸಾವಿನ ಬಗ್ಗೆ ರಾಜ್ಯ ಸರಕಾರ ಸಿಓಡಿ ತನಿಖೆ ನಡೆಸಿದೆ. ಆ ವರದಿಯ ಪ್ರಕಾರ ಗಣಪತಿಯ ಸಾವು ಆತ್ಮಹತ್ಯೆ ಎಂದು ದೃಢಪಟ್ಟಿದೆ. ಈ ಸಾವಿನಲ್ಲಿ ಯಾರದೇ ಕೈವಾಡ ಇಲ್ಲ ಎಂಬುದು ಸಾಬೀತಾಗಿದೆ. ಅದೀಗ ಮುಗಿದ ಅಧ್ಯಾಯ. ಆದರೆ,ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆಯಾಗಬೇಕೆಂದು ಗಣಪತಿ ಅವರ ಕುಟುಂಬದವರೇ ಆಗ್ರಹಿಸಿದ್ದ ಮನವಿಯನ್ನು ಸ್ವೀಕರಿಸಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಸಂಸದ ಮಲ್ಲಿಕಾರ್ಜುನ ಖರ್ಗೆ, ಗೃಹ ಸಚಿವ ಡಾ.ಜಿ.ಪರಮೇಶ್ವರ್, ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಮೊದಲಾದವರು ಉಪಸ್ಥಿತರಿದ್ದರು.







