ಪುನರೂರು ಬಳಿ ಮರಗಳಿಗೆ ಆಕಸ್ಮಿಕ ಬೆಂಕಿ
.jpg)
ಮುಲ್ಕಿ, ಜ.5: ಕಿನ್ನಿಗೋಳಿ ರಾಜ್ಯ ಹೆದ್ದಾರಿಯ ಪುನರೂರು ಬಳಿ ರಸ್ತೆ ಬದಿಯ ಬೃಹತ್ ಮರಗಳಿಗೆ ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ಸ್ಥಳೀಯರು ಆತಂಕಗೊಂಡ ಘಟನೆ ಗುರುವಾರ ಸಂಜೆ ನಡೆದಿದೆ.
ಆಕಸ್ಮಿಕ ಬೆಂಕಿಯಿಂದ ಮರಗಳು ಧಗಧಗನೆ ಉರಿಯಲು ಪ್ರಾರಂಭಿಸಿದಾಗ ಸ್ಥಳೀಯರು ಆತಂಕಗೊಂಡಿದ್ದಾರೆ. ಕೂಡಲೇ ಸ್ಥಳೀಯರು ಅಗ್ನಿಶಾಮಕ ದಳ ಮತ್ತು ಕಿನ್ನಿಗೋಳಿ ಮೆಸ್ಕಾಂ ಸಿಬ್ಬಂದಿಗೆ ಮಾಹಿತಿ ನೀಡಿದ್ದ ಕಾರಣ ಅವರು ಸ್ಥಳಕ್ಕೆ ಭೇಟಿ ನೀಡಿ ಬೆಂಕಿ ನಂದಿಸಲು ಹರ ಸಾಹಸ ಪಡುತ್ತಿದ್ದರು.
ಒಂದು ಮರದಿಂದ ಬೆಂಕಿ ನಂದಿಸುತ್ತಿದ್ದಂತೆಯೆ ಗಾಳಿಯ ಆರ್ಭಟಕ್ಕೆ ಬೆಂಕಿ ಮತ್ತೊಂದು ಮರಕ್ಕೆ ವ್ಯಾಪಿಸಿತು. ಆದರೆ, ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಮೆಸ್ಕಾಂ ಸಿಬ್ಬಂದಿ ಮುಂಜಾಗರುಕತೆ ವಹಿಸಿ ಹೆಚ್ಚಿನ ಅನಾಹುತ ನಡೆಯದಂತೆ ಬೆಂಕಿಯನ್ನು ತಹಬದಿಗೆ ತಂದಿದ್ದಾರೆ.
ರಾಜ್ಯ ಹೆದ್ದಾರಿ ತಡೆ:
ಆಕಸ್ಮಿಕ ಬೆಂಕಿಯಿಂದ ಮುಲ್ಕಿ-ಕಿನ್ನಿಗೋಳಿ ರಾಜ್ಯ ಹೆದ್ದಾರಿ ತಡೆ ಉಂಟಾಗಿದ್ದು ವಾಹನ ಸಂಚಾರ ಕೊಂಚ ಮಟ್ಟಿಗೆ ಅಸ್ತವ್ಯಸ್ತಗೊಂಡಿತ್ತು. ಬಳಿಕ ಸ್ಥಳೀಯರ ಮುತುವರ್ಜಿಯಿಂದ ವಾಹನಗಳು ಬದಲಿ ಮಾರ್ಗವಾಗಿ ಸಂಚರಿಸಿದರು.





