ಮಹಿಳಾ ಆಸ್ಪತ್ರೆ ಉಳಿವಿಗಾಗಿ ಹೋರಾಟ ಯಶಸ್ಸಿಗೆ ಜಿಲ್ಲಾ ಮುಸ್ಲಿಮ್ ಒಕ್ಕೂಟ ಕರೆ
ಉಡುಪಿ, ಜ.5: ಉಡುಪಿಯ ಬಡ, ದಲಿತ ಹಾಗೂ ಹಿಂದುಳಿದವರಿಗಾಗಿ ಉಚಿತ ಆರೋಗ್ಯ ಸೇವೆಯನ್ನು ನೀಡಲು ಹಾಜಿ ಅಬ್ದುಲ್ಲಾರವರು ಎಂಟು ದಶಕಗಳ ಹಿಂದೆ ನಿರ್ಮಿಸಿಕೊಟ್ಟ ಸರಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ಖಾಸಗಿಯವರ ಸುಪರ್ದಿಗೆ ಒಪ್ಪಿಸಲು ರಾಜ್ಯ ಸರಕಾರ ನಿರ್ಧರಿಸಿರುವುದನ್ನು ವಿರೋಧಿಸಿ ನಾಗರಿಕ ಒಕ್ಕೂಟ ಜ.6ರಂದು ಹಮ್ಮಿಕೊಂಡಿರುವ ಪ್ರತಿಭಟನಾ ರ್ಯಾಲಿ ಹಾಗೂ ಸಾರ್ವಜನಿಕ ಸಭೆಗೆ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ತನ್ನ ಸಂಪೂರ್ಣ ಬೆಂಬಲ ಹಾಗೂ ಸಕ್ರಿಯ ಪಾಲುದಾರಿಕೆಯನ್ನು ಘೋಷಿಸಿದೆ.
ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಖಾಸಗಿ ಉದ್ಯಮಿಯೊಬ್ಬರಿಗೆ ಸಾರ್ವಜನಿಕ ಆಸ್ತಿಯನ್ನು ತಟ್ಟೆಯಲ್ಲಿಟ್ಟು ನೀಡುತ್ತಿರುವ ಸರಕಾರದ ಕ್ರಮವನ್ನು ಜನ ಎಚ್ಚೆತ್ತು ಈಗಲೇ ಪ್ರತಿಭಟಿಸಬೇಕಾಗಿದೆ. ಇಲ್ಲದಿದ್ದರೆ ಜನಸಾಮಾನ್ಯರ ಪಾಲಿಗೆ ಸಂಜೀವಿನಿಯಾದ ಸರಕಾರಿ ಆಸ್ಪತ್ರೆ ಉಳ್ಳವರ ಸೊತ್ತಾಗಲಿದೆ ಎಂದು ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಯಾಸೀನ್ ಮಲ್ಪೆ ತಿಳಿಸಿದ್ದಾರೆ.
ನಾಳೆ ಸಂಜೆ 4:30ಕ್ಕೆ ಜೋಡುಕಟ್ಟೆಯಿಂದ ಪ್ರಾರಂಭಗೊಳ್ಳುವ ರ್ಯಾಲಿಗೆ ಹಾಗೂ ಚಿತ್ತರಂಜನ್ ಸರ್ಕಲ್‌ನಲ್ಲಿ ನಡೆಯುವ ಪ್ರ್ರತಿಭಟನಾ ಸಭೆಯಲ್ಲಿ ಉಡುಪಿಯ ಸಮಸ್ತ ಜನತೆ ಸಕ್ರಿಯವಾಗಿ ಪಾಲ್ಗೊಂಡು ಸರಕಾರದ ಈ ಪ್ರಜಾಪ್ರಭುತ್ವ ವಿರೋಧಿ ನಡೆಯನ್ನು ಬಲವಾಗಿ ವಿರೋಧಿಸಬೇಕೆಂದು ಅವರು ಪ್ರಕಟನೆಯಲ್ಲಿ ಒತ್ತಾಯಿಸಿದ್ದಾರೆ.





