ಎಸಿಬಿ ಬಲೆಗೆ ಬಿದ್ದ ಗ್ರಾಪಂ ಪಿಡಿಒ
ನಿವೇಶನ ದಾಖಲಾತಿ ನೀಡಲು ಲಂಚ ಸ್ವೀಕಾರ
ನಾಪೋಕ್ಲು, ಜ. 5: ನಿವೇಶನದ ದಾಖಲಾತಿಗಳನ್ನು ನೀಡಲು ಲಂಚ ಸ್ವೀಕರಿಸುತ್ತಿದ್ದ ಗ್ರಾ ಪಂ ಅಭಿವೃದ್ಧಿ ಅಧಿಕಾರಿಯೋರ್ವ ಭ್ರಷ್ಟಾಚಾರ ನಿಗ್ರಹ ದಳ ಬೀಸಿದ ಬಲೆಗೆ ಬಿದ್ದ ಘಟನೆ ಚೆಯ್ಯಂಡಾಣೆ ನರಿಯಂದಡ ಗ್ರಾಮದಲ್ಲಿ ಗುರುವಾರ ನಡೆದಿದೆ.ನರಿಯಂದಡ ಚೆಯ್ಯಂಡಾಣೆ ಗ್ರಾಪಂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಚಿನ್ ಎಂಬವರೇ ಲಂಚ ಸ್ವೀಕರಿಸುತ್ತಿದ್ದ ಸಂದರ್ಭ ಸಿಕ್ಕಿಬಿದ್ದ ಅಧಿಕಾರಿಯಾಗಿದ್ದಾರೆಂದು ಭ್ರಷ್ಟಾಚಾರ ನಿಗ್ರಹ ದಳದ ಮೈಸೂರು ವಿಭಾಗದ ಪೊಲೀಸ್ ಅಧೀಕ್ಷಕಿ ಕವಿತಾ ಸ್ಪಷ್ಟಪಡಿಸಿದ್ದಾರೆ.
ಗ್ರಾಮದ ನಿವಾಸಿ ಕುಕ್ಕೆಮನೆ ಸುಬ್ರಹ್ಮಣ್ಯ ಎಂಬವರು ತಮಗೆ ಸೇರಿದ ನಿವೇಶನವೊಂದರ ಮೇಲೆ ಬ್ಯಾಂಕ್ ಸಾಲ ಪಡೆಯುವ ನಿಟ್ಟಿನಲ್ಲಿ ನಿವೇಶನದ ಸ್ವತ್ತನ್ನು ಪ್ರಮಾಣೀಕರಿಸುವ 9/11 ಪ್ರಮಾಣಪತ್ರವನ್ನು ಕೋರಿ ಕಳೆದ ಮೂರು ತಿಂಗಳ ಹಿಂದೆ ಪಂಚಾಯತ್ ಅರ್ಜಿ ಸಲ್ಲಿಸಿದ್ದರು.
ಆದರೆ, ಪ್ರಮಾಣಪತ್ರ ನೀಡಲು ಸತಾಯಿಸುತ್ತಿದ್ದ ಸಚಿನ್ ಕಳೆದ 2 ದಿನಗಳ ಹಿಂದೆ ತಮ್ಮನ್ನು ಭೇಟಿಯಾದ ಸುಬ್ರಹ್ಮಣ್ಯ ಅವರ ಮುಂದೆ 3 ಸಾವಿರ ರೂ. ಲಂಚದ ಬೇಡಿಕೆಯನ್ನಿಟ್ಟಿದ್ದರು. ಇದನ್ನು ಪೂರೈಸುವ ಭರವಸೆ ನೀಡಿದ್ದ ಸುಬ್ರಹ್ಮಣ್ಯ ಗುರುವಾರ ಹಣದೊಂದಿಗೆ ಬರುವುದಾಗಿ ಹೇಳಿದ್ದರು.
ಈ ನಡುವೆ ಮಡಿಕೇರಿಯಲ್ಲಿರುವ ಭ್ರಷ್ಟಾಚಾರ ನಿಗ್ರಹ ದಳದ ಡಿವೈಎಸ್ಪಿ ಶಾಂತಮಲ್ಲಪ್ಪ ಅವರನ್ನು ಭೇಟಿ ಮಾಡಿದ ಸುಬ್ರಹ್ಮಣ್ಯ ದೂರು ನೀಡಿದ್ದರು. ಅದರನ್ವಯ ಕಾರ್ಯಾಚರಣೆಯ ರೂಪುರೇಶೆ ಸಿದ್ಧಗೊಂಡಿತು.
ಗುರುವಾರ ಮಧ್ಯಾಹ್ನ ಸುಬ್ರಹ್ಮಣ್ಯ ಪಂಚಾಯತ್ ಕಚೇರಿಗೆ ತೆರಳಿ ಮೂರು ಸಾವಿರ ರೂ.ವನ್ನು ಪಿಡಿಒ. ಸಚಿನ್‌ಗೆ ನೀಡುತ್ತಿದ್ದಂತೆಯೇ ದಾಳಿ ಮಾಡಿದ ಎಸಿಬಿ. ಸಿಬ್ಬಂದಿ ಹಣ ಸಹಿತ ಪಿಡಿಒ.ನನ್ನು ವಶಕ್ಕೆ ತೆಗೆದುಕೊಂಡು ಪಂಚರ ಸಮ್ಮುಖದಲ್ಲಿ ಮಹಜರು ನಡೆಸಿದರು.
ಭ್ರಷ್ಟಾಚಾರ ನಿಗ್ರಹದಳದ ಮೈಸೂರಿನ ಎಸ್ಪಿಕವಿತಾ ಅವರ ನಿರ್ದೇಶನದನ್ವಯ ನಡೆದ ಕಾರ್ಯಾಚರಣೆಯಲ್ಲಿ ಇನ್‌ಸ್ಪೆಕ್ಟರ್ ಮಂಜು ಮತ್ತು ಸಿಬ್ಬಂದಿ ಭಾಗವಹಿಸಿದ್ದರು.







