ಕಾರವಾರ: 24ಗಂಟೆಯೊಳಗೆ ಆಧಾರ್ ನೋಂದಣಿ
ಪಾರ್ಶ್ವವಾಯು ಪೀಡಿತ ಮಹಿಳೆಯ ನೋವಿಗೆ ಸ್ಪಂದಿಸಿದ ಜಿಲ್ಲಾಡಳಿತ

ಕಾರವಾರ, ಜ.5: ಆಧಾರ್ ಕಾರ್ಡ್ ಇಲ್ಲದ ಕಾರಣ ನಿವೃತ್ತಿ ವೇತನ ಪಡೆಯಲು ಸಮಸ್ಯೆ ಎದುರಿಸುತ್ತಿದ್ದ ಅನಾರೋಗ್ಯ ಪೀಡಿತ ವೃದ್ಧೆಯ ಮನವಿಗೆ ಸ್ಪಂದಿಸಿದ ಜಿಲ್ಲಾಡಳಿತ, ಮನವಿ ಸ್ವೀಕರಿಸಿದ 24 ಗಂಟೆ ಒಳಗಾಗಿ ಆಧಾರ್ ಕಾರ್ಡ್ ನೋಂದಣಿ ಮಾಡಿಸಿ ಶ್ಲಾಘನೆಗೆ ಪಾತ್ರವಾಗಿದೆ.
ಉತ್ತರಕನ್ನಡ ಜಿಲ್ಲೆಯ ಹೊನ್ನಾವರದ ಎಲ್. ಆರ್. ನಗರದ ನಿವಾಸಿ ಕವಯಿತ್ರಿ ಹಾಗೂ ಅಂಚೆ ಇಲಾಖೆ ನಿವೃತ್ತ ನೌಕರರಾಗಿರುವ ಕನ್ನಿಕಾ ಈಶ್ವರ ಹೆಗಡೆ ಕಳೆದ ಆರು ವರ್ಷಗಳಿಂದ ಪಾರ್ಶ್ವವಾಯು ಪೀಡಿತರಾಗಿ ಹಾಸಿಗೆ ಹಿಡಿದಿದ್ದಾರೆ. ಕಣ್ಣುಗಳು ಸಂಪೂರ್ಣ ಕಾಣದಾಗಿದ್ದು, ಅವರು ಅತ್ತಿತ್ತ ಚಲಿಸಲಾರದ ಪರಿಸ್ಥಿತಿಯಲ್ಲಿದ್ದಾರೆ. ಅವರಿಗೆ ಅಂಚೆ ಇಲಾಖೆಯಲ್ಲಿ ಬರುತ್ತಿದ್ದ ನಿವೃತ್ತಿ ವೇತನ ಪಡೆಯಲು ಖಾತೆಗೆ ಇದೀಗ ಆಧಾರ್ ಸಂಖ್ಯೆಯನ್ನು ಕಡ್ಡಾಯವಾಗಿ ಜೋಡಣೆ ಮಾಡಬೇಕಾಗಿದ್ದು, ಅವರ ಬಳಿ ಆಧಾರ ಕಾರ್ಡ್ ಇಲ್ಲ. ಈ ಹಿನ್ನೆಲೆಯಲ್ಲಿ ನಿವೃತ್ತಿ ವೇತನ ಪಡೆಯುವುದು ದುಸ್ತರವಾಗಿತ್ತು.
ಈ ಸಮಸ್ಯೆ ಕುರಿತು ಬೆಂಗಳೂರಿನಲ್ಲಿ ನೌಕರಿಯಲ್ಲಿರುವ ಅವರ ಮಗ ರವಿ ಹೆಗಡೆ ಎಂಬವರು ಎಸ್‌ಎಂಎಸ್ ಮೂಲಕ ಜಿಲ್ಲೆಯ ಉಸ್ತುವಾರಿ ಕಾರ್ಯದರ್ಶಿಗಳಾದ ಮುನೀಷ್ ಮೌದ್ಗಿಲ್ ಅವರ ಗಮನ ಸೆಳೆದಿದ್ದರು. ನನ್ನ ತಾಯಿಯವರು ನಿರಂತರ ಪಾರ್ಶ್ವವಾಯು ಪೀಡಿತರಾಗಿ ಹಾಸಿಗೆ ಹಿಡಿದಿದ್ದು, ಮನೆಯಿಂದ ಹೊರ ಹೋಗುವುದು ಅಸಾಧ್ಯವಾಗಿದೆ. ಹೊನ್ನಾವರ ಉಪ ಅಂಚೆ ಕಚೇರಿಯಲ್ಲಿ ಅವರ ನಿವೃತ್ತಿ ವೇತನದ ಖಾತೆಯಿದ್ದು, ಇದೀಗ ಅದಕ್ಕೆ ಆಧಾರ್‌ಜೋಡಣೆ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ಆಧಾರ್ ನೋಂದಣಿಗೆ ನೆರವಾಗುವಂತೆ ಅವರು ಮನವಿ ಮಾಡಿದ್ದರು.
ಈ ಎಸ್‌ಎಂಎಸ್ ಮನವಿಯನ್ನು ಜಿಲ್ಲಾಡಳಿತಕ್ಕೆ ರವಾನೆ ಮಾಡಿದ್ದ ಮುನೀಷ್ ಮೌದ್ಗಿಲ್ ಅವರು, ವೃದ್ಧೆಗೆ ನೆರವಾಗುವಂತೆ ಸೂಚನೆ ನೀಡಿದ್ದರು. ವೃದ್ಧೆಯ ಮನೆಗೆ ತಕ್ಷಣ ತೆರಳಿ ಆಧಾರ್ ಕಾರ್ಡ್ ನೋಂದಣಿ ಮಾಡಿಸುವಂತೆ ಅಟಲ್‌ಜಿ ಜನಸ್ನೇಹಿ ಕೇಂದ್ರಕ್ಕೆ ಜಿಲ್ಲಾಡಳಿತ ನೀಡಿದ ಸೂಚನೆಯಂತೆ ಸಿಬ್ಬಂದಿ ಹೊನ್ನಾವರದ ಅವರ ಮನೆಗೆ ತೆರಳಿ 24 ಗಂಟೆಗಳ ಒಳಗಾಗಿ ನೋಂದಣಿ ಕಾರ್ಯ ಮುಗಿಸಿದ್ದಾರೆ.
‘ನನ್ನ ತಾಯಿಗೆ ಆಧಾರ್ ಕಾರ್ಡ್ ಮಾಡಿಸಲು ಆಡಳಿತ ವ್ಯವಸ್ಥೆ ತೋರಿಸಿದ ಮುತುವರ್ಜಿಗೆ ಅಭಾರಿಯಾಗಿದ್ದೇವೆ. ಅತ್ತಿತ್ತ ಚಲಿಸಲು ಸಾಧ್ಯವಿಲ್ಲದ ಆಕೆಗೆ ಆಧಾರ್ ಕಾರ್ಡ್ ಮಾಡಿಸುವುದು ಹೇಗೆ ಎಂಬುದೇ ದೊಡ್ಡ ಸಮಸ್ಯೆಯಾಗಿತ್ತು’ ಎಂದು ರವಿ ಹೆಗಡೆ ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯಲ್ಲಿ 21ಸಂಚಾರಿ ಆಧಾರ್ ಕಿಟ್‌ಗಳಿದ್ದು, ತುರ್ತು ಸಂದರ್ಭಗಳಲ್ಲಿ ಮನೆಗಳಿಗೆ ತೆರಳಿ ಆಧಾರ್ ನೋಂದಣಿ ಕಾರ್ಯವನ್ನು ಸಿಬ್ಬಂದಿ ಮಾಡುತ್ತಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಎಚ್.ಪ್ರಸನ್ನ ತಿಳಿಸಿದ್ದಾರೆ.







