ಅಂಗನವಾಡಿ ಕಾರ್ಯಕರ್ತೆಯ ಮೇಲೆ ಗ್ಯಾಂಗ್ ರೇಪ್ ಪ್ರಕರಣ
ತನಿಖಾಧಿಕಾರಿಯ ಅಮಾನತಿಗೆ ಸಿಐಟಿಯು ಒತ್ತಾಯ
ಮಡಿಕೇರಿ, ಜ.5 : ಬೀದರ್ ಜಿಲ್ಲೆಯ ಸುಂಕನಾಳ ಗ್ರಾಮದಲ್ಲಿ ಅಂಗನವಾಡಿ ಕಾರ್ಯಕರ್ತೆಯ ಮೇಲೆ ನಡೆದ ಗ್ಯಾಂಗ್ ರೇಪ್ ಪ್ರಕರಣವನ್ನು ಖಂಡಿಸಿರುವ ಸಿಐಟಿಯು ಸಂಘಟನೆಯ ಜಿಲ್ಲಾ ಸಮಿತಿ, ಕರ್ತವ್ಯ ಲೋಪವೆಸಗಿದ ತನಿಖಾಧಿಕಾರಿ ಎಸ್ಪಿ ಮಲ್ಲಮ್ಮ ಚೌಬೆ ಅವರನ್ನು ಅಮಾನತುಗೊಳಿಸಬೇಕೆಂದು ಒತ್ತಾಯಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಬಿ. ರಮೇಶ್, 10 ಜನರ ಗುಂಪು ಅಮಾಯಕ ಅಂಗನವಾಡಿ ಕಾರ್ಯಕರ್ತೆಯ ಮೇಲೆ ನಡೆಸಿದ ಅತ್ಯಾಚಾರ ಪ್ರಕರಣ ಅತ್ಯಂತ ಅಮಾನವೀಯವೆಂದರು.
ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯ ನಾಶಪಡಿಸುವ ಮೊದಲೇ ಆರೋಪಿಗಳನ್ನು ತಕ್ಷಣ ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೆೇಕು. ಅತ್ಯಾಚಾರಕ್ಕೆ ಒಳಗಾದ ಕಾರ್ಯಕರ್ತೆಯನ್ನು ಅವಮಾನಿಸಿದ ಆರೋಪ ಎದುರಿಸುತ್ತಿರುವ ಮಹಿಳಾ ಪೊಲೀಸ್ ಅಧಿಕಾರಿ ಮಲ್ಲಮ್ಮ ಚೌಬೆಯನ್ನು ಅಮಾನತುಗೊಳಿಸಿ ಬೇರೆ ತನಿಖಾಧಿಕಾರಿಯನ್ನು ನೇಮಿಸಬೇಕು. ದುಷ್ಕೃತ್ಯಕ್ಕೆ ಪ್ರಚೋದನೆ ನೀಡಿದವರನ್ನು ಕೂಡ ಬಂಧನಕ್ಕೆ ಒಳಪಡಿಸಿ, ಘಟನೆ ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕೆಂದು ಎಚ್.ಬಿ. ರಮೇಶ್ ಒತ್ತಾಯಿಸಿದರು.
ಅತ್ಯಾಚಾರಕ್ಕೆ ಒಳಗಾದ ಕಾರ್ಯಕರ್ತೆಗೆ ನ್ಯಾಯ ಸಿಗದಿದ್ದಲ್ಲಿ ಸಿಐಟಿಯು ವತಿಯಿಂದ ರಾಜ್ಯವ್ಯಾಪಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಿಐಟಿಯು ಉಪ ಕಾರ್ಯದರ್ಶಿ ಪಿ.ಆರ್. ಭರತ್, ಖಜಾಂಚಿ, ಎ.ಸಿ. ಸಾಬು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಎಸ್. ಸುಮಿತ್ರಾ ಉಪಸ್ಥಿತರಿದ್ದರು.





