ತನ್ನ ಪತ್ರಿಕೆಯಲ್ಲಿ ವರದಿ ಮಾಡುವ ಬದಲು ಅಮಿತ್ ಶಾಗೆ ವರದಿ ಮಾಡುತ್ತಿದ್ದ ಸಂಪಾದಕ!
ಹೊಸದಿಲ್ಲಿ,ಜ.5: ಪ್ರತಿಷ್ಠಿತ ಆಂಗ್ಲ ದೈನಿಕವೊಂದರ ಕಾರ್ಯ ನಿರ್ವಾಹಕ ಸಂಪಾದಕರು ತನ್ನ ಪತ್ರಿಕೆಯಲ್ಲಿ ವರದಿ ಮಾಡುವ ಬದಲು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರಿಗೆ ನೇರವಾಗಿ ವರದಿ ಮಾಡುತ್ತಿರುವುದನ್ನು ಆಂಗ್ಲ ನಿಯತಕಾಲಿಕವೊಂದು ಬಯಲಿಗೆಳೆದಿದೆ.
ಪ್ರಧಾನಿ ಕಚೇರಿಯು ದಿಲ್ಲಿಯ ಆಪ್ ಸರಕಾರದ ಮೇಲೆ ಹೇಗೆ ನಿಕಟ ನಿಗಾಯಿರಿಸಿದೆ ಎನ್ನುವ ಬಗ್ಗೆ ಪತ್ರಕರ್ತ ಅಕ್ಷಯ ದೇಶಮಾನೆ ಅವರು ಸಿದ್ಧಪಡಿಸಿರುವ ವರದಿಯನ್ನು ಆಂಗ್ಲ ಪಾಕ್ಷಿಕ 'ಫ್ರಂಟ್‌ಲೈನ್' ತನ್ನ ಇತ್ತೀಚಿನ ಸಂಚಿಕೆಯಲ್ಲಿ ಪ್ರಕಟಿಸಿದೆ. ಆಪ್ ಸರಕಾರ ಅಧಿಕಾರಕ್ಕೆ ಬಂದು ಒಂದು ತಿಂಗಳು ಕಳೆಯುವಷ್ಟರಲ್ಲಿಯೇ ಆರಂಭಗೊಂಡಿದ್ದ ಆಗಿನ ದಿಲ್ಲಿ ಉಪರಾಜ್ಯಪಾಲ ನಜೀಬ್ ಜಂಗ್ ಮತ್ತು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ನಡುವಿನ ಹಗ್ಗಜಗ್ಗಾಟ ಸೇರಿದಂತೆ ಆಪ್ ಸರಕಾರದ ಮೇಲೆ ಕೇಂದ್ರವು ಹೇಗೆ ನಿಕಟ ನಿಗಾಯಿರಿಸಿದೆ ಎನ್ನುವುದನ್ನು ಬೆಳಕಿಗೆ ತರಲು ವರದಿಯು ಹಲವಾರು ಮಾಹಿತಿ ಹಕ್ಕು ಅರ್ಜಿಗಳನ್ನು ಬಳಸಿಕೊಂಡಿದೆ.
ಹಿಂದೂಸ್ಥಾನ್ ಟೈಮ್ಸ್‌ನ ಕಾರ್ಯನಿರ್ವಾಹಕ ಸಂಪಾದಕ ಶಿಶಿರ್ ಗುಪ್ತಾ ಅವರು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮತ್ತು ಪ್ರಧಾನಿ ಕಚೇರಿಯಲ್ಲಿ ವಿಶೇಷ ಕರ್ತವ್ಯಾ ಧಿಕಾರಿಯಾಗಿರುವ ಹಿರೇನ್ ಜೋಶಿ ಅವರಿಗೆ ಬರೆದಿರುವ ಇ-ಮೇಲ್ ಒಂದನ್ನು ವರದಿಯು ಬಹಿರಂಗಗೊಳಿಸಿದೆ. 'ಕೇಂದ್ರದ ವಿರುದ್ಧ ಕೇಜ್ರಿವಾಲ್' ಎಂಬ ಶೀರ್ಷಿಕೆಯ ಈ ಇ-ಮೇಲ್ ಪತ್ರವು ಕೇಜ್ರಿವಾಲ್‌ರಿಂದ 'ಉಲ್ಲಂಘನೆಗಳ' 10 ಘಟನೆಗಳನ್ನು ಪಟ್ಟಿ ಮಾಡಿದೆ. ಗುಪ್ತಾ ಇವುಗಳನ್ನು ಶಾ ಆ್ಯಂಡ್ ಕಂಪೆನಿಗೆ ಏಕೆ ವರದಿ ಮಾಡುತ್ತಿದ್ದಾರೆ ಎನ್ನುವುದನ್ನು ಇಡೀ ಪತ್ರದಲ್ಲಿ ಎಲ್ಲೂ ಉಲ್ಲೇಖಿಸಲಾಗಿಲ್ಲ. ಶಾ ಮತ್ತು ಜೋಶಿ ಅವರಿಗೆ ಪ್ರಶ್ನಾವಳಿಗಳನ್ನೂ ಅದು ಒಳಗೊಂಡಿಲ್ಲ. ಅದೇನಾದರೂ ಇದ್ದರೆ ಕೇಜ್ರಿವಾಲ್‌ರ 'ಉಲ್ಲಂಘನೆ'ಗಳ ಬಗ್ಗೆ ಅವರಿಬ್ಬರ ಅಭಿಪ್ರಾಯವನ್ನು ಪಡೆಯಲು ಗುಪ್ತಾ ಬಯಸುತ್ತಿದ್ದಾರೆ ಎಂದಾದರೂ ವ್ಯಾಖ್ಯಾನಿಸಬಹುದಿತ್ತು ಎಂದು ದೇಶಮಾನೆ ಬರೆದಿದ್ದಾರೆ.
ಈ ಇ-ಮೇಲ್ ಬಗ್ಗೆ ತ್ವರಿತ ಕ್ರಮವನ್ನು ಕೈಗೊಂಡ ಪ್ರಧಾನಿ ಕಚೇರಿಯು ಈ ಕುರಿತು ವಾಸ್ತವಾಂಶ ವರದಿಯನ್ನು ಐದು ದಿನಗಳಲ್ಲಿ ತನಗೆ ಸಲ್ಲಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಆದೇಶಿಸಿತ್ತು ಎನ್ನುವುದು ಕುತೂಹಲ ಕೆರಳಿಸಿದೆ.
ಈ ವರದಿಗೆ ಟ್ವಿಟರ್‌ನಲ್ಲಿ ಸಾಕಷ್ಟು ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಗುಪ್ತಾ ಕೇಂದ್ರ ಸರಕಾರಕ್ಕೆ ಮಾಹಿತಿದಾರರಾಗಿದ್ದಾರೆಯೇ ಎಂದು ಕೆಲವರು ಪ್ರಶ್ನಿಸಿದ್ದರೆ, ಈ ವ್ಯಕ್ತಿ ತನ್ನ ಪತ್ರಿಕೆಗೆ ವರದಿ ಮಾಡುವ ಬದಲು ಅಮಿತ್ ಶಾ ಅವರಿಗೆ ವರದಿ ಮಾಡುತ್ತಿದ್ದಾರಲ್ಲ ಎಂದು ಹಲವರು ಅಚ್ಚರಿ ವ್ಯಕ್ತಪಡಿಸಿದ್ದಾರೆ.







