ಪ್ರಾಕೃತಿಕ ವಿಕೋಪಕ್ಕೆ ಕೇಂದ್ರದ ನೆರವು
ಹೊಸದಿಲ್ಲಿ, ಜ.5: ತೀವ್ರ ಬರಪರಿಸ್ಥಿತಿ ಎದುರಿಸುತ್ತಿರುವ ಕರ್ನಾಟಕಕ್ಕೆ 1,782 ಕೋಟಿ ರೂ. ಮತ್ತು 2013ರಲ್ಲಿ ಭಾರೀ ನೆರೆಯಿಂದ ಸಂಕಷ್ಟಕ್ಕೊಳಗಾದ ಉತ್ತರಾಖಂಡಕ್ಕೆ 209 ಕೋಟಿ ರೂ. ಅನುದಾನವನ್ನು ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ ಕೇಂದ್ರ ಸರಕಾರ ಬಿಡುಗಡೆ ಮಾಡಿದೆ. ಗೃಹ ಸಚಿವ ರಾಜನಾಥ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳ ಲಾಯಿತು. ರಾಜ್ಯಗಳಿಗೆ ಭೇಟಿ ನೀಡಿದ್ದ ಅಂತರ್ ಸಚಿವರ ಕೇಂದ್ರ ತಂಡ ಸಲ್ಲಿಸಿದ ವರದಿಯಲ್ಲಿ ಉಲ್ಲೇಖಿಸಲಾಗಿರುವ ಪ್ರಸ್ತಾವನೆಯನ್ನೂ ಸಮಿತಿಯು ಪರಿಶೀಲಿಸಿತು. 2016ರಲ್ಲಿ ತೀವ್ರ ಬರದ ಕಾರಣ ಮುಂಗಾರು ಬೆಳೆ ನಷ್ಟವಾದ ಹಿನ್ನೆಲೆಯಲ್ಲಿ 4,702 ಕೋಟಿ ರೂ. ಪರಿಹಾರಧನ ಬಿಡುಗಡೆ ಮಾಡುವಂತೆ ಕರ್ನಾಟಕ ಸರಕಾರ ಕೇಂದ್ರಕ್ಕೆ ಮನವಿ ಸಲ್ಲಿಸಿತ್ತು. ಕಳೆದ 6 ವರ್ಷಗಳಿಂದ ರಾಜ್ಯದಲ್ಲಿ ಬರಪರಿಸ್ಥಿತಿ ಇದೆ. 2016ರಲ್ಲಿ ತಲೆದೋರಿದ ಬರದಿಂದ 139 ತಾಲೂಕುಗಳು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದು, ಕಳೆದ 40 ವರ್ಷಗಳಲ್ಲೇ ಅತ್ಯಂತ ತೀವ್ರವಾದ ಬರದ ಸಮಸ್ಯೆಯಾಗಿದೆ ಎಂದು ರಾಜ್ಯ ಸರಕಾರ ತಿಳಿಸಿದೆ. ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ 188.91 ಕೋಟಿ ರೂ. ಮತ್ತು ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರಿನ ಯೋಜನೆಯಡಿ 20 ಕೋಟಿ ರೂ. ನೆರವನ್ನು ಉತ್ತರಾಖಂಡಕ್ಕೆ ಹಾಗೂ 1,782.44 ಕೋಟಿ ರೂ. ಮೊತ್ತವನ್ನು ಬರ ಪರಿಹಾರ ರೂಪದಲ್ಲಿ ಕರ್ನಾಟಕಕ್ಕೆ ಒದಗಿಸಲು ಉನ್ನತ ಮಟ್ಟದ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ ಎಂದು ಗೃಹ ಸಚಿವಾಲಯದ ಪ್ರಕಟನೆಯಲ್ಲಿ ತಿಳಿಸಲಾಗಿದೆ.





