ಜಯಲಲಿತಾ ಸಾವಿನ ಬಗ್ಗೆ ಸಿಬಿಐ ತನಿಖೆ ಕೋರಿದ್ದ ಅರ್ಜಿ ವಜಾ ಮಾಡಿದ ಸುಪ್ರೀಂ
ಹೊಸದಿಲ್ಲಿ,ಜ.5: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಸಾವಿನ ಕುರಿತು ಸಿಬಿಐ ತನಿಖೆ ಅಥವಾ ನ್ಯಾಯಾಂಗ ತನಿಖೆಯನ್ನು ನಡೆಸಬೇಕು ಎಂದು ಕೋರಿ ರಾಜ್ಯಸಭಾ ಸದಸ್ಯೆ ಹಾಗೂ ಉಚ್ಚಾಟಿತ ಎಡಿಎಂಕೆ ನಾಯಕಿ ಶಶಿಕಲಾ ಪುಷ್ಪಾ ಸಲ್ಲಿಸಿದ್ದ ಅರ್ಜಿ ಸೇರಿದಂತೆ ಇಂತಹ ಎರಡು ಅರ್ಜಿಗಳನ್ನು ಸರ್ವೋಚ್ಚ ನ್ಯಾಯಾಲಯವು ಗುರುವಾರ ವಜಾಗೊಳಿಸಿತು.
ಇಂತಹುದೇ ಅರ್ಜಿ ಮದ್ರಾಸ್ ಉಚ್ಚ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿಯಿದೆ. ಹೀಗಾಗಿ ಈ ಅರ್ಜಿಗಳನ್ನು ವಿಚಾರಣೆಗೆ ಅಂಗೀಕರಿಸಲು ನಾವು ಬಯಸುತ್ತಿಲ್ಲ. ಅರ್ಜಿಗಳನ್ನು ವಜಾಗೊಳಿಸಲಾಗಿದೆ ಎಂದು ನ್ಯಾಯಮೂರ್ತಿಗಳಾದ ಪಿ.ಸಿ.ಘೋಷ್ ಮತ್ತು ಆರ್.ಎಫ್.ನಾರಿಮನ್ ಅವರ ಪೀಠವು ಹೇಳಿತು. ಜಯಲಲಿತಾರಿಗೆ ನೀಡಲಾಗುತ್ತಿದ್ದ ಚಿಕಿತ್ಸೆಯ ವಿವರಗಳನ್ನು ಗುಟ್ಟಾಗಿರಿಸಲಾಗಿತ್ತು. ಅವರನ್ನು ಭೇಟಿಯಾಗಲು ಯಾರಿಗೂ ಅವಕಾಶ ನೀಡಿರಲಿಲ್ಲ. ಅವರ ಅಂತ್ಯಯಾತ್ರೆಯ ಚಿತ್ರಗಳಲ್ಲಿ ಶವವು ಕೊಳೆಯದಂತೆ ಎಂಬಾಮ್ ಮಾಡಿದ್ದರ ಗುರುತುಗಳು ಎದ್ದು ್ದಕಾಣುತ್ತಿದ್ದವು ಮತ್ತು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾಗಿನಿಂದ ಸಾವಿನವರೆಗೆ ಪ್ರತಿಯೊಂದನ್ನೂ ಮುಚ್ಚಿಡಲಾಗಿತ್ತು. ಹೀಗಾಗಿ ಜಯಲಲಿತಾರ ಸಾವಿನ ಬಗ್ಗೆ ಶಂಕೆಗಳಿವೆ ಎಂದು ಆರೋಪಿಸಿ ಪುಷ್ಪಾ ಕಳೆದ ವರ್ಷದ ಡಿ.18ರಂದು ಸರ್ವೋಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಎನ್‌ಜಿಒ ತಮಿಳುನಾಡು ಯುವಶಕ್ತಿ ಕೂಡ ಇಂತಹುದೇ ಅರ್ಜಿಯನ್ನು ಸಲ್ಲಿಸಿ ಜಯಾ ಸಾವಿನ ಸಂದರ್ಭಗಳ ಬಗ್ಗೆ ಶಂಕೆಯನ್ನು ವ್ಯಕ್ತಪಡಿಸಿತ್ತು.





