ಡಿಜಿಟಲ್ ವಹಿವಾಟಿನ ಸುರಕ್ಷತೆ ಬಗ್ಗೆ ಸಂಸದೀಯ ಸಮಿತಿಯ ಕಳವಳ

ಹೊಸದಿಲ್ಲಿ,ಜ.5: ನಗದು ರಹಿತ ಆರ್ಥಿಕತೆಗೆ ಸರಕಾರವೇನೋ ಒತ್ತು ನೀಡುತ್ತಿದೆ, ಹಣ ಪಾವತಿಗೆ ಮತ್ತು ಸ್ವೀಕೃತಿಗೆ ಡಿಜಿಟಲ್ ವಿಧಾನಗಳನ್ನೇ ಬಳಸುವಂತೆ ಉತ್ತೇಜಿಸುತ್ತಿದೆ. ನಮ್ಮ ಸೈಬರ್ ಭದ್ರತೆ ದುರ್ಬಲವಾಗಿರುವುದರಿಂದ ಡಿಜಿಟಲ್ ವಿಧಾನಗಳ ಬಳಕೆ ಯಶಸ್ವಿಯಾಗುವ ಬಗ್ಗೆ ಕೆಲವರು ಶಂಕೆ ವ್ಯಕ್ತಪಡಿಸಿದ್ದೂ ಇದೆ. ಆದರೆ ಇದೀಗ ಸಾಕ್ಷಾತ್ ಸಂಸದೀಯ ಸ್ಥಾಯಿ ಸಮಿತಿಯೇ ಡಿಜಿಟಲ್ ವಹಿವಾಟಿನ ಸುರಕ್ಷತೆಯ ಬಗ್ಗೆ ಕಳವಳವನ್ನು ವ್ಯಕ್ತಪಡಿಸಿದೆಯಲ್ಲದೆ, ಇದಕ್ಕಾಗಿ ಕಾನೂನು ಮಾರ್ಗಸೂಚಿಗಳನ್ನು ಪುನರ್ ಪರಿಶೀಲಿಸುವಂತೆ ಮತ್ತು ಲೋಪದೋಷಗಳಿದ್ದರೆ ನಿವಾರಿಸುವಂತೆ ಸರಕಾರವನ್ನು ಒತ್ತಾಯಿಸಿದೆ, ಜೊತೆಗೆ ಜನರಲ್ಲಿ ಸುರಕ್ಷಿತ ಆನ್‌ಲೈನ್ ಬಳಕೆಯ ಬಗ್ಗೆ ಅರಿವು ಮೂಡಿಸುವ ಅಗತ್ಯವನ್ನು ಅದು ಪ್ರತಿಪಾದಿಸಿದೆ.
ಬಿಜೆಪಿ ಸಂಸದ ಅನುರಾಗ್ ಠಾಕೂರ್ ಅಧ್ಯಕ್ಷತೆಯ ಮಾಹಿತಿ ತಂತ್ರಜ್ಞಾನ ಕುರಿತ ಸ್ಥಾಯಿ ಸಮಿತಿಯು ಇಲ್ಲಿ ನಡೆದ ತನ್ನ ಸುದೀರ್ಘ ಸಭೆಯಲ್ಲಿ ಡಿಜಿಟಲ್ ವಹಿವಾಟಿನ ಬಗ್ಗೆ ಚರ್ಚಿಸಿದೆ.
ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಮತ್ತು ಟ್ರಾಯ್ ಅಧಿಕಾರಿಗಳು ಡಿಜಿಟಲ್ ಪಾವತಿ ಮತ್ತು ಮಾಹಿತಿಗಳ ಆನ್‌ಲೈನ್ ಸುರಕ್ಷತೆ ವಿಷಯಗಳ ಬಗ್ಗೆ ಸಭೆಗೆ ಮಾಹಿತಿ ನೀಡಿದರು. ಡಿಜಿಟಲ್ ವಹಿವಾಟುಗಳಿಗಾಗಿ ಸೈಬರ್ ಭದ್ರತೆ ಮೂಲಸೌಕರ್ಯವನ್ನು ಬಲಗೊಳಿಸುವ ನಿಟ್ಟಿನಲ್ಲಿ ಸರಕಾರವು ಕಾರ್ಯಪ್ರವೃತ್ತವಾಗಿದೆ ಎಂದು ಅವರು ತಿಳಿಸಿದರು ಎಂದು ಮೂಲಗಳು ಸುದ್ದಿಸಂಸ್ಥೆಗೆ ಹೇಳಿದವು.
ಡಿಜಿಟಲ್ ಆರ್ಥಿಕತೆಯನ್ನು ಇದೇ ಮೊದಲ ಬಾರಿಗೆ ಪ್ರವೇಶಿಸುವ ಭಾರೀ ಸಂಖ್ಯೆಯ ಗ್ರಾಹಕರು ಮತ್ತು ವ್ಯಾಪಾರಿಗಳಿಗೆ ಹ್ಯಾಕರ್‌ಗಳಿಂದ ರಕ್ಷಣೆ ನೀಡುವ ಬಗ್ಗೆ ಮುಖ್ಯವಾಗಿ ಚರ್ಚೆ ನಡೆಯಿತು ಎಂದು ಅವು ತಿಳಿಸಿದವು.







