ನೋಟು ಬದಲಾಯಿಸಿ ಸಿಗದ್ದಕ್ಕೆ ಹತಾಶೆ : ಆರ್ ಬಿ ಐ ಕಚೇರಿ ಎದುರು ಅರೆನಗ್ನಳಾದ ಎರಡು ಮಕ್ಕಳ ತಾಯಿ

ಹೊಸದಿಲ್ಲಿ, ಜ.5: ನೋಟು ಬದಲಾಯಿಸಿಕೊಳ್ಳಲು ಅವಕಾಶ ದೊರೆಯದ ಕಾರಣ ಎರಡು ಮಕ್ಕಳ ತಾಯಿಯೋರ್ವಳು ರಿಸರ್ವ್ ಬ್ಯಾಂಕ್ ಕಚೇರಿ ಎದುರು ಅರೆನಗ್ನಳಾದ ಘಟನೆ ಪಶ್ಚಿಮ ದಿಲ್ಲಿಯ ನಂಗ್ಲೋಯಿ ಎಂಬಲ್ಲಿ ನಡೆದಿದೆ.
ನಂಗ್ಲೋಯಿ ಜಿಲ್ಲೆಯ ನಿವಾಸಿಯಾಗಿರುವ ಈಕೆ ಮಂಗಳವಾರ ತನ್ನಲ್ಲಿರುವ ಹಳೆಯ ಒಂದು ಸಾವಿರ ರೂ. ಮುಖಬೆಲೆಯ ನೋಟು ಮತ್ತು 500 ರೂ. ಮುಖಬೆಲೆಯ ನಾಲ್ಕು ಹಳೆಯ ನೋಟುಗಳನ್ನು ಬದಲಾಯಿಸಿಕೊಳ್ಳಲು ಬ್ಯಾಂಕಿನೆದುರು ಕ್ಯೂ ನಿಂತಿದ್ದಳು.
ಹಲವು ಗಂಟೆಗಳ ಕಾಲ ಸರದಿ ಸಾಲಿನಲ್ಲಿ ನಿಂತು ಬಸವಳಿದ ಬಳಿಕ ಈಕೆ ಬ್ಯಾಂಕಿನ ಕೌಂಟರ್ ಎದುರು ಬರುವಂತಾಯಿತು. ಆದರೆ ಈಕೆಯ ಬಳಿ ಯಾವುದೇ ಗುರುತು ಚೀಟಿ ಇಲ್ಲದ ಕಾರಣ ಹಳೆಯ ನೋಟುಗಳ ಬದಲಾವಣೆಗೆ ಬ್ಯಾಂಕಿನವರು ಒಪ್ಪಲಿಲ್ಲ.
ಅಸಲಿಗೆ ಆ ಮಹಿಳೆ ಈ ನೋಟುಗಳನ್ನು ತನ್ನ ಎರಡು ವರ್ಷದ ಮಗನ ಪ್ಯಾಂಟಿನ ಜೇಬಿನಲ್ಲಿಟ್ಟಿದ್ದಳು. ಅಲ್ಲಿ ಅದರ ಸ್ವಲ್ಪ ಭಾಗವನ್ನು ಇಲಿಗಳು ತಿಂದುಬಿಟ್ಟಿದ್ದವು.
ಗುರುತು ಪತ್ರದ ಪ್ರತಿ ತರುವಂತೆ ಆಕೆಗೆ ಹೇಳಿದಾಗ ಆಕೆ ಸ್ಥಳ ಬಿಟ್ಟು ಕದಲಲು ಒಪ್ಪಲಿಲ್ಲ. ಕೊನೆಗೆ ಪೊಲೀಸರು ಬಲವಂತ ಪಡಿಸಿ ಹೊರಗೆ ಕರೆದೊಯ್ದರು. ಆದರೆ ಪಟ್ಟು ಬಿಡದ ಆಕೆ ಮರುದಿನವೂ ಬಂದಳು. ಮತ್ತೆ ಬ್ಯಾಂಕಿನವರು ಗುರುತು ಪತ್ರ ಕೇಳಿದಾಗ ಆಕೆ ಅಲ್ಲೇ ಕುಳಿತು ತನ್ನ ದುಮ್ಮಾನ ಕೇಳುವವರಿಲ್ಲ ಎಂಬ ಹತಾಶೆಯಲ್ಲಿ ಬ್ಯಾಂಕ್‌ನ ಕಚೇರಿಯಲ್ಲೇ ಅರೆನಗ್ನಳಾಗಿ ಪ್ರತಿಭಟನೆಗೆ ಮುಂದಾದಳು . ಜೊತೆಗೆ ಆಕೆಯ ಹತ್ತು ವರ್ಷದ ಮಗನಿದ್ದ.







