Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಕಂಬಾಲಪಲ್ಲಿ-ದಿಡ್ಡಳ್ಳಿಯ ಸೇತುವೆ...

ಕಂಬಾಲಪಲ್ಲಿ-ದಿಡ್ಡಳ್ಳಿಯ ಸೇತುವೆ ಶಿಥಿಲವಾಗಿಯೇ ಇದೆ

ನಾ. ದಿವಾಕರನಾ. ದಿವಾಕರ5 Jan 2017 11:46 PM IST
share
ಕಂಬಾಲಪಲ್ಲಿ-ದಿಡ್ಡಳ್ಳಿಯ ಸೇತುವೆ ಶಿಥಿಲವಾಗಿಯೇ ಇದೆ

‘‘ಭವ್ಯ ಭಾರತದ ಪರಂಪರೆ’’ ಈ ಪದಗಳ ಬಳಕೆ ಎಷ್ಟೇ ಆಕರ್ಷಣೀಯವಾಗಿ ಕಂಡರೂ ಎಲ್ಲೋ ಒಂದು ಕಡೆ ಅಭಾಸವನ್ನೂ ಮೂಡಿಸುತ್ತದೆ. ಯಾವ ಭಾರತ, ಎತ್ತಣ ಭವ್ಯ, ಎಂತಹ ಪರಂಪರೆ ಎಂಬ ಮರುಪ್ರಶ್ನೆ ಹುಟ್ಟುತ್ತದೆ. ಇತಿಹಾಸ ಚಕ್ರ ಉರುಳಿದ ಮಾರ್ಗಗಳನ್ನು ಕ್ರಮಿಸುತ್ತಾ ಬರುವಾಗ ರಾಮರಾಜ್ಯ, ಕುರುಕ್ಷೇತ್ರ ಮಗಧ ಸಾಮ್ರಾಜ್ಯದ ಹೆಜ್ಜೆಗುರುತುಗಳನ್ನು ಮಾತ್ರವೇ ಗಮನಿಸುವ ಸಾಂಪ್ರದಾಯಿಕ ಮನಸ್ಸುಗಳಿಗೆ ನಿಷಾದರ ಆಕ್ರಂದನ, ಶಂಭೂಕನ ಮೌನ ಮತ್ತು ಬಲಿ ಚಕ್ರವರ್ತಿಯ ದಮನ ಗೋಚರಿಸುವುದೇ ಇಲ್ಲ. 21ನೆಯ ಶತಮಾನದ ಎರಡನೆಯ ದಶಮಾನದಲ್ಲಿ ಭಾರತ ಒಂದು ಪ್ರಬುದ್ಧ ರಾಷ್ಟ್ರವಾಗಿ ಹೊರಹೊಮ್ಮಿದೆಯೇ ಎಂಬ ಪ್ರಶ್ನೆ ಎದುರಾದಾಗ ಕೂಡಲೇ ಹೌದು ಎಂಬ ಸಿದ್ಧ ಉತ್ತರ ವ್ಯಕ್ತವಾಗುತ್ತದೆ. ಆದರೆ ಸಾಮಾಜಿಕ ಮೌಲ್ಯಗಳು, ಸಾಂಸ್ಕೃತಿಕ ಕಾಳಜಿ ಹಾಗೂ ಮಾನವೀಯ ಸ್ಪಂದನೆಯ ವಿಚಾರಗಳಿಗೆ ಮುಖಾಮುಖಿಯಾದಾಗ ಹೌದು ಎನ್ನಲು ಸಂಕೋಚವಾಗುತ್ತದೆ. ರಾಷ್ಟ್ರೀಯತೆ, ಪರಂಪರೆಯ ಸೋಗು ಮತ್ತು ದೇಶಭಕ್ತಿಯ ಉನ್ಮಾದದ ಪ್ರಭಾವಳಿಯಿಂದ ಹೊರಬಂದರೆ ಈ ಸಂಕೋಚವನ್ನು ವಾಸ್ತವದ ನೆಲೆಯಲ್ಲಿ ಪರಿಶೀಲಿಸಿ ಈ ದೇಶದ ಜನಸಮುದಾಯಗಳು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳನ್ನು ಪರಿಶೀಲಿಸಲು ಸಾಧ್ಯ.

ಭವ್ಯ ಪರಂಪರೆಯ ಅಮಲು ದೇಶಭಕ್ತಿಯ ಪ್ರಭಾವಳಿಯಲ್ಲಿ ಸಿಲುಕಿದಾಗ ಶಂಭೂಕ, ನಿಷಾದ ಮುಂತಾದ ವ್ಯಕ್ತಿತ್ವಗಳು ಚಾರಿತ್ರಿಕ ಅಪಭ್ರಂಶಗಳಾಗಿ ಪರಿಣಮಿಸುತ್ತವೆ. ಸ್ಥಾಪಿತ ವ್ಯವಸ್ಥೆಯ ಸಂರಕ್ಷಣೆಯ ದೃಷ್ಟಿಯಿಂದ ಅನಿವಾರ್ಯವಾಗಿ ತ್ಯಾಗ ಮಾಡಬೇಕಾದ ಭೂಮಿಕೆಗಳಾಗಿ ಪರಿಣಮಿಸುತ್ತವೆ. ಗಡಿ ಕಾಯುವ ಯೋಧರು, ಸಾಲದ ಹೊರೆಯಿಂದ ತತ್ತರಿಸಿ ಆತ್ಮಹತ್ಯೆಗೆ ಶರಣಾಗುತ್ತಿರುವ ರೈತರು, ತಮ್ಮ ಅಲ್ಪಆದಾಯ ಮತ್ತು ಉಳಿತಾಯವನ್ನು ರಕ್ಷಿಸಿಕೊಳ್ಳಲು ಹೆಣಗಾಡುವ ಅಮಾನ್ಯೀಕರಣದ ಫಲಾನುಭವಿಗಳು (?) ಆಧುನಿಕ ಭಾರತದ ನಿಷಾದರಾಗುತ್ತಾರೆ, ಶಂಭೂಕರಾಗುತ್ತಾರೆ. ಭಾರತದ ಸಂಸ್ಕೃತಿಯಲ್ಲಿ ಮತ್ತು ಪರಂಪರೆಯಲ್ಲಿ ಜೀವಕ್ಕೆ ಮೌಲ್ಯವಿದೆ. ಹಾಗೆಯೇ ಸಾವಿಗೂ ಮೌಲ್ಯವಿದೆ. ಈ ಹುಟ್ಟು ಸಾವುಗಳ ಮೌಲ್ಯಗಳ ತಾಕಲಾಟದ ನಡುವೆ ಬದುಕುವ ಅರ್ಹತೆ ಮತ್ತು ಯೋಗ್ಯತೆಗಳನ್ನು ನಿರ್ಧರಿಸುವ ಒಂದು ಸಾಂಸ್ಕೃತಿಕ ಪರಂಪರೆಯೂ ಇಲ್ಲಿ ಜೀವಂತವಾಗಿದೆ. ಬದುಕುವ ಅರ್ಹತೆಯನ್ನು ಪ್ರಮಾಣೀಕರಿಸುವ ಒಂದು ಅಗೋಚರ ಸಾಂಸ್ಥಿಕ ಶಕ್ತಿ ಈ ದೇಶದಲ್ಲಿ ಶತಮಾನಗಳಿಂದ ಕಾರ್ಯ ನಿರ್ವಹಿಸುತ್ತಿದ್ದು ತನ್ನ ಅಧಿಪತ್ಯವನ್ನು ಯಥಾಸ್ಥಿತಿಯಲ್ಲಿ ಉಳಿಸಿಕೊಂಡಿದೆ. ಏಕಲವ್ಯನ ಹೆಬ್ಬೆರಳನ್ನು ಗುರುದಕ್ಷಿಣೆಯನ್ನಾಗಿ ಪಡೆದು ಒಂದು ಜನಸಮುದಾಯವನ್ನೇ ನಿರ್ವೀಯರನ್ನಾಗಿ ಮಾಡುವ ಪರಂಪರೆಯೂ ಸಹ ಇಲ್ಲಿ ಜೀವಂತವಾಗಿದೆ.

ಕಟು ಸತ್ಯವನ್ನು ಸ್ವೀಕರಿಸುವ ಮನೋಭಾವ ಮತ್ತು ಮನೋಧಾರ್ಡ್ಯತೆ ನಮ್ಮ ಸಮಾಜದಲ್ಲಿ ಇಲ್ಲದಿರುವುದರಿಂದಲೇ ಇಲ್ಲಿ ಕಂಬಾಲಪಲ್ಲಿ ಸಂಭವಿಸುತ್ತದೆ, ಖೈರ್ಲಾಂಜಿ ಸಂಭವಿಸುತ್ತದೆ, ಸವಣೂರು ವಿಜೃಂಭಿಸುತ್ತದೆ, ದಿಡ್ಡಳ್ಳಿ ಉದ್ಭವಿಸುತ್ತದೆ. ಪಾರಂಪರಿಕ ಸಮಾಜದ ಹಲವಾರು ಅಮಾನವೀಯ ಮೌಲ್ಯಗಳನ್ನು ಅತ್ಯಾಧುನಿಕ ತಂತ್ರಜ್ಞಾನ ಯುಗದಲ್ಲೂ ವ್ಯವಸ್ಥಿತವಾಗಿ ಅಳವಡಿಸಿಕೊಂಡು ಬಂದಿರುವ ಭಾರತೀಯ ಸಮಾಜ ಪ್ರಜಾತಂತ್ರದ ನೆಲೆಯಲ್ಲೇ ಊಳಿಗಮಾನ್ಯ ಧೋರಣೆಯನ್ನೂ ಪೋಷಿಸುತ್ತಿದೆ, ಅಸ್ಪಶ್ಯತೆಯನ್ನೂ ಪ್ರಚೋದಿಸುತ್ತದೆ, ಜಾತಿ ಮತ್ತು ಕುಲದ ತಾರತಮ್ಯಗಳನ್ನೂ ಮೈದಳೆಯುತ್ತದೆ. ಈ ಮೂರೂ ವಿದ್ಯಮಾನಗಳು ಏಕಕಾಲಕ್ಕೆ ಕಾರ್ಯ ನಿರ್ವಹಿಸುವುದನ್ನು ಕಂಬಾಲಪಲ್ಲಿಯಲ್ಲಿ ಕಾಣುವಂತೆಯೇ ದಿಡ್ಡಳ್ಳಿಯಲ್ಲೂ ಕಾಣಬಹುದು. ನಗರವಾಸಿಗಳ ಅಕ್ರಮಗಳನ್ನು ಶಾಸನಬದ್ಧವಾಗಿ ಸಕ್ರಮಗೊಳಿಸುವ ಪ್ರಭುತ್ವ ಆದಿವಾಸಿಗಳ ಸಕ್ರಮಗಳನ್ನು ಅಕ್ರಮ ಎಂದು ಘೋಷಿಸಲು ಸದಾ ಉತ್ಸುಕವಾಗಿರುತ್ತದೆ. ಹಾಗಾಗಿಯೇ ಭೂಮಿಯ ಪ್ರಶ್ನೆ ಎದುರಾದಾಗ ಸಾಮಾಜಿಕ ವ್ಯವಸ್ಥೆಯ ವಾರಸುದಾರರು ಮತ್ತು ಸಾಂಸ್ಕೃತಿಕ ನೆಲೆಯ ಹರಿಕಾರರು ಒಂದಾಗುತ್ತಾರೆ. ಸಾಂಸ್ಥಿಕ ನೆಲೆಯಲ್ಲೇ ಭೂಮಿಯ ಪ್ರಶ್ನೆಯನ್ನು ‘ಅನ್ಯ’ರ ಪರಿಭಾಷೆಗೆ ಒಳಪಡಿಸುತ್ತಾರೆ.

ಪರಿಣಾಮ ಭೂಮಿಯನ್ನೇ ನಂಬಿ ಬದುಕುವ ಜನಸಮುದಾಯಗಳು, ನಿಸರ್ಗದ ಒಡಲನ್ನೇ ನಂಬಿ ಬದುಕುವ ಬುಡಕಟ್ಟುಗಳ ಅಸ್ತಿತ್ವ ಮತ್ತು ಅಸ್ಮಿತೆ ಸದಾ ಪ್ರಶ್ನಾರ್ಹವೇ ಆಗುತ್ತದೆ. ‘ಭೂಮಿ ನಮ್ಮದು, ಅರಣ್ಯ ನಮ್ಮದು, ಅರಣ್ಯದ ಹಕ್ಕು ನಮ್ಮದು, ಅರಣ್ಯದ ಉತ್ಪನ್ನಗಳು ನಮ್ಮದು’ ಎನ್ನುವ ಊಳಿಗಮಾನ್ಯ ವ್ಯವಸ್ಥೆಯ ವಾರಸುದಾರರಿಗೆ ಈ ಸಂಪನ್ಮೂಲಗಳು ಮಾರುಕಟ್ಟೆಯ ಸರಕುಗಳಾಗಿ ಕಾಣುತ್ತವೆ. ಪ್ರಗತಿಯ, ಅಂದರೆ ಸಂಪತ್ತಿನ ಕ್ರೋಡೀಕರಣ ಮತ್ತು ಶ್ರೀಮಂತಿಕೆಯ, ವೇದಿಕೆಗಳಾಗುತ್ತವೆ. ಇದೇ ಘೋಷಣೆಗಳನ್ನು ಉಚ್ಛರಿಸುವ ಬುಡಕಟ್ಟು ಸಮುದಾಯಗಳಿಗೆ, ಆದಿವಾಸಿಗಳಿಗೆ ಮತ್ತು ಭೂಮಿಪುತ್ರರಿಗೆ ಈ ಸಂಪನ್ಮೂಲಗಳು ಸಂರಕ್ಷಿಸಬೇಕಾದ ಅಮೂಲ್ಯ ಆಕರಗಳಾಗುತ್ತವೆ, ತಮ್ಮ ಮತ್ತು ಸಮಾಜದ ಉನ್ನತಿಗೆ ಕಾಪಿಟ್ಟುಕೊಳ್ಳುವ ಸಂಪತ್ತು ಆಗುತ್ತದೆ. ಬಂಡವಾಳಗಾರರಿಗೆ ಭೂಮಿ ಮಾರುಕಟ್ಟೆಯ ಭೂಮಿಕೆಯಾದರೆ ಉಳುವವರಿಗೆ, ಬುಡಕಟ್ಟುಗಳಿಗೆ ಶತಮಾನಗಳ ಆವಾಸ ನೆಲೆಯಾಗುತ್ತದೆ. ತುಂಡು ಭೂಮಿಗಾಗಿ ಬಂಡವಾಳಿಗರು ನೆತ್ತರು ಹರಿಸಿದರೆ ತುಣುಕು ಭೂಮಿ ಉಳಿಸಿಕೊಳ್ಳಲು ರೈತನೊಬ್ಬ ಬೆವರು ಸುರಿಸುತ್ತಾನೆ. ವಿಪರ್ಯಾಸವೆಂದರೆ ಭೂಮಿ ಮತ್ತು ಮಾನವ ಸಮಾಜದ ನಡುವಿನ ಈ ಸೂಕ್ಷ್ಮ್ಮ ಸಂಬಂಧಗಳನ್ನು ಗ್ರಹಿಸುವಲ್ಲಿ ನಾಗರಿಕ ಸಮಾಜ ವಿಫಲವಾಗಿದೆ. ಪ್ರಭುತ್ವದ ಶಕ್ತಿಗಳು ಈ ವೈಫಲ್ಯದ ಲಾಭ ಪಡೆಯುತ್ತವೆ.

ತಮ್ಮ ನೆಲೆಗಾಗಿ ಹೋರಾಡುವ ಆದಿವಾಸಿಗಳ ಆಕ್ರಂದನ ನಾಗರಿಕ ಸಮಾಜದ ದೃಷ್ಟಿಯಲ್ಲಿ ಅತಿಕ್ರಮಣ ಎನಿಸಿದರೆ ಅದಕ್ಕೆ ಕಾರಣ ಜಾತಿ ಪ್ರಣೀತ ಸಮಾಜದಲ್ಲಿ ನೆಲದೊಡಲಿನ ಕಂದಮ್ಮಗಳನ್ನೂ ಸಹ ಜಾತಿಕುಲಗಳ ತೊಟ್ಟಿಲಿನಲ್ಲೇ ತೂಗಲಾಗುತ್ತದೆ. ಸಂವೇದನೆಯೇ ಇಲ್ಲದ ಶ್ರೇಣೀಕೃತ ಜಾತಿ ವ್ಯವಸ್ಥೆಯಲ್ಲಿ ಸಾಮಾಜಿಕ ಮುನ್ನಡೆ ಮತ್ತು ಆರ್ಥಿಕ ಪ್ರಗತಿ ಕೆಲವೇ ನಿರ್ದಿಷ್ಟ ವರ್ಗಗಳ ಜನ್ಮ ಸಿದ್ಧ ಹಕ್ಕು ಆಗುತ್ತದೆ. ಹಾಗಾಗಿ ಉನ್ನತಿಯ ಮಾರ್ಗದಲ್ಲಿ ತಮ್ಮ ಸ್ಥಾಪಿತ ವ್ಯವಸ್ಥೆಗೆ ಕಂಟಕವಾಗುವ ಎಲ್ಲ ಅಡ್ಡಿ ಆತಂಕಗಳನ್ನೂ ನಿವಾರಿಸಲು ಸಮಾಜ ತನ್ನದೇ ಆದ ವ್ಯೆಹ ರಚಿಸಿಕೊಂಡಿರುತ್ತದೆ. ಸಾಂಸ್ಕೃತಿಕ ನೆಲೆಯಲ್ಲಿ ಈ ವ್ಯೆಹಕ್ಕೆ ಒಂದು ನಿರ್ದಿಷ್ಟ ಸ್ವರೂಪ ನೀಡಲಾಗುತ್ತದೆ. ಸ್ಥಾಪಿತ ವ್ಯವಸ್ಥೆಯನ್ನು ಸಂರಕ್ಷಿಸಲು ಪ್ರಭುತ್ವ ಪ್ರಜಾತಂತ್ರದ ಚೌಕಟ್ಟಿನಲ್ಲೇ ಶ್ರಮಿಸುತ್ತದೆ. ಇಲ್ಲಿ ಪ್ರತಿರೋಧದ ದನಿಗಳನ್ನು ಅಡಗಿಸುವ ಷಡ್ಯಂತ್ರ ರಚಿಸಲು ಪ್ರಾದೇಶಿಕತೆ, ಭಾಷೆ, ಜಾತಿ ಮತ್ತು ಮತೀಯ ಅಸ್ಮಿತೆಗಳು ಮೇಲುಗೈ ಸಾಧಿಸುತ್ತವೆ. ಹಾಗಾಗಿಯೇ ದಿಡ್ಡಳ್ಳಿಯಲ್ಲಿ ಒಕ್ಕಲೆಬ್ಬಿಸಲಾಗಿರುವ ಆದಿವಾಸಿಗಳನ್ನು ಬೆಂಬಲಿಸುವವರು ಹೊರಗಿನವರಾಗಿಬಿಡುತ್ತಾರೆ. ಅನ್ಯರಾಗಿಬಿಡುತ್ತಾರೆ. ಪ್ರಭುತ್ವದ ದೃಷ್ಟಿಯಲ್ಲಿ ಮಾವೋವಾದಿಗಳೂ ಆಗಿಬಿಡುತ್ತಾರೆ.

ಇಲ್ಲಿ ಪ್ರಶ್ನೆ ಉದ್ಭವಿಸುವುದು ಕೇವಲ ಅಸ್ಮಿತೆಯದ್ದಲ್ಲ. ಜೀವಿಸುವ ಹಕ್ಕಿನ ಪ್ರಶ್ನೆ ಇಲ್ಲಿ ಪ್ರಧಾನವಾಗುತ್ತದೆ. ಸುಪ್ತ ಸಾಮಾಜಿಕ ಪ್ರಜ್ಞೆಯನ್ನು ಸಂರಕ್ಷಿಸುವ ಸ್ಥಾಪಿತ ವ್ಯವಸ್ಥೆಯನ್ನು ಧಿಕ್ಕರಿಸುವ ಪ್ರತಿಯೊಂದು ದನಿಯೂ ಸಾವಿಗೆ ಅರ್ಹತೆ ಪಡೆಯುತ್ತದೆ. ಬಂಡವಾಳವನ್ನು ಪೋಷಿಸುವ ಅರಣ್ಯ ನಾಶಕ ಔದ್ಯಮಿಕ ಹಿತಾಸಕ್ತಿಗಳನ್ನು ಧಿಕ್ಕರಿಸುವ ದನಿಯೂ ಸಾವಿಗೆ ಸನಿಹವಾಗುತ್ತದೆ. ಹಾಗೆಯೇ ಸಾಮಾಜಿಕ ಪರಿಸರದಲ್ಲಿ ಜಾತಿ ವ್ಯವಸ್ಥೆಯನ್ನು ಧಿಕ್ಕರಿಸುವ ದನಿಗಳೂ ಸಾವನ್ನು ಆಹ್ವಾನಿಸುತ್ತವೆ. ಕಂಬಾಲಪಲ್ಲಿ, ಖೈರ್ಲಾಂಜಿ, ಸವಣೂರು, ಉನಾದಲ್ಲಿ ಸಂಭವಿಸಿರುವುದು ಅಪಭ್ರಂಶಗಳಲ್ಲ. ದಿಡ್ಡಳ್ಳಿಯ ಒಕ್ಕಲೆಬ್ಬಿಸುವ ಪ್ರಕ್ರಿಯೆ ಅಪವಾದವೂ ಅಲ್ಲ. ಊಳಿಗಮಾನ್ಯ ವ್ಯವಸ್ಥೆ ಒಂದು ಶೋಷಕ ಸಾಮಾಜಿಕ ವ್ಯವಸ್ಥೆಯಲ್ಲಿ ಹಾಸು ಹೊಕ್ಕಾಗಿರುವಾಗ ಇದು ಸ್ವಾಭಾವಿಕವಾಗಿ ಕಾಣುತ್ತದೆ. ಈ ಶೋಷಣೆಯ ವಿರುದ್ಧ ಹೋರಾಡುವವರು ಅನ್ಯರ ಪಟ್ಟಿಗೆ ಸೇರುತ್ತಾರೆ. ಹೊರಗಿನವರಂತೆ ಕಾಣುತ್ತಾರೆ.

ಕೃಪೆ: aniketana.org

share
ನಾ. ದಿವಾಕರ
ನಾ. ದಿವಾಕರ
Next Story
X