ಸೊರಕೆ ಹುಟ್ಟುಹಬ್ಬ ಪ್ರಯುಕ್ತ ಆರೋಗ್ಯ ತಪಾಸಣೆ ಶಿಬಿರ

ಕಾಪು, ಜ.5: ಶಾಸಕ ವಿನಯಕುಮಾರ್ ಸೊರಕೆ ಅವರ ಹುಟ್ಟುಹಬ್ಬವನ್ನು ಕ್ಷೇತ್ರದಲ್ಲಿ ಗುರುವಾರ ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು. ಅವರ ಅಭಿಮಾನಿ ಬಳಗ, ಮಂಗಳೂರು ಕೆಎಂಸಿ ಆಸ್ಪತ್ರೆಯ ಸಹಯೋಗದಲ್ಲಿ ಕಾಪು ಬಿಲ್ಲವರ ಸಭಾಭವನದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು. ಈ ಸಂದಭರ್ದಲ್ಲಿ ಮಾತನಾಡಿದ ಸೊರಕೆ, ಶಾಂತಿ ಸೌಹಾರ್ದತೆ ಇದ್ದಲ್ಲಿ ಅಭಿವೃದ್ಧಿ ಸಾಧ್ಯ. ಕಾಪು ಕ್ಷೇತ್ರದ ಇನ್ನಷ್ಟು ಅಭಿವೃದ್ಧಿಗಾಗಿ ಜನತೆ ಸಹಕಾರ ನೀಡಬೇಕು. ಕಾಪು ತಾಲೂಕು ರಚನೆಗಾಗಿ ಜ.7 ಮತ್ತು 8ರಂದು ನಡೆಯುವ ಪಾದಯಾತ್ರೆಯಲ್ಲಿ ಎಲ್ಲ ಸಂಘ ಸಂಸ್ಥೆಗಳು ಹಾಗೂ ಜನರು ಪಾಲ್ಗೊಳ್ಳಬೇಕು. ನಾನು ಎಂದೂ ಕನಸು ಕಂಡವನಲ್ಲ. ಶಾಸಕನಾಗಿ, ಸಂಸದನಾಗಿ, ಸಚಿವನಾಗಿ ಜನರ ಸೇವೆ ಸಲ್ಲಿಸುವ ಭಾಗ್ಯ ದೊರಕಿರುವುದು ಜನಸಾಮಾನ್ಯರಿಂದ. ಜನರ ಪ್ರೀತಿ ವಿಶ್ವಾಸವೇ ನನ್ನ ಆಸ್ತಿ ಎಂದರು.
ನನ್ನ ಅನುಮತಿ ಕೇಳದೆ ಕಳೆದ ಎರಡು ವರ್ಷಗಳಿಂದ ಅಭಿಮಾನಿ ಬಳಗ ಹುಟ್ಟುಹಬ್ಬದ ಆಚರಣೆ ಮಾಡುತ್ತಿದೆ. ಕಳೆದ ಬಾರಿ ಪಾಂಬೂರಿನ ಮಾನಸ ವಿಶೇಷ ಮಕ್ಕಳ ಶಾಲೆಯಲ್ಲಿ ಹುಟ್ಟುಹಬ್ಬ ಆಚರಿಸಲಾಯಿತು. ಈ ಬಾರಿ ಉಚಿತ ಆರೋಗ್ಯ ತಪಾಸಣಾ ಶಿಬಿರದ ಮೂಲಕ ಆಚರಿಸಲಾಗುತ್ತಿದೆ. ಕಷ್ಟದಲ್ಲಿ ನೋವಿನಲ್ಲಿರುವವರ ಜೊತೆ ಹುಟ್ಟುಹಬ್ಬ ಆಚರಣೆ ಸಂತೋಷ ತಂದಿದೆ ಎಂದರು.
ಮೂಳೂರು ಸುನ್ನೀ ಸೆಂಟರ್‌ನ ಧರ್ಮಗುರು ಮುಸ್ತಫಾ ಸಅದಿ ಮಾತನಾಡಿ, ಶುಭ ಹಾರೈಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನಚಂದ್ರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಚ್ಚಿಲ ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕ ರಾಘವೇಂದ್ರ ಉಪಾಧ್ಯಾಯ, ಮೂಳೂರು ಸಿಎಸ್‌ಇ ಚರ್ಚ್‌ನ ಧರ್ಮಗುರು ಜಾನ್ ಕುಂದರ್, ಪುರಸಭಾ ಅಧ್ಯಕ್ಷೆ ಸೌಮ್ಯಾ, ಬಿಲ್ಲವ ಸಂಘದ ಅಧ್ಯಕ್ಷ ಮಾಧವ ಪಾಲನ್, ಕಾಪು ಅಭಿವೃದ್ಧಿ ಸಮಿತಿ ಅಧ್ಯಕ್ಷ ವಾಸುದೇವ ಶೆಟ್ಟಿ, ಉದ್ಯಮಿ ಮನೋಹರ ಶೆಟ್ಟಿ, ಬೆಳಪು ಗ್ರಾಪಂ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಸಮಾಜ ಸೇವಕ ಲೀಲಾಧರ ಶೆಟ್ಟಿ, ದಿವಾಕರ ಶೆಟ್ಟಿ, ದೀಪಕ್ ಎರ್ಮಾಳು ಮತ್ತಿತರರು ಉಪಸ್ಥಿತರಿದ್ದರು.







