ಈ ಏತ ನೀರಾವರಿ ಯೋಜನೆ ಮೂಲೆ ಸೇರಲಿದೆಯೇ?
ಮಾನ್ಯರೆ,
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೃಷಿ ಭೂಮಿಗೆ ನೀರು ಒದಗಿಸುವ ಸಲುವಾಗಿ ಪ್ರಥಮ ಹಂತದ ಏತನೀರಾವರಿ ಯೋಜನೆಯನ್ನು ಬಂಟ್ವಾಳ ತಾಲೂಕಿನ ಸಜೀಪಮುನ್ನೂರು ಗ್ರಾಮದ ಮಡಿವಾಳಪಡ್ಪುವಿನಲ್ಲಿ ನೇತ್ರಾವತಿ ನದಿಗೆ 100 ಅಶ್ವ ಶಕ್ತಿಯ ಪಂಪ್ ಅಳವಡಿಸಿ ನೀರೆತ್ತುವ ಯೋಜನೆಯನ್ನು ನಿರ್ಮಿಸಲಾಗಿದೆ. 800 ಎಕರೆ ಕೃಷಿಭೂಮಿಗೆ ನೇತ್ರಾವತಿಯಿಂದ ನೀರು ಪೂರೈಕೆ ಮಾಡುವುದು ಈ ಯೋಜನೆಯ ಉದ್ದೇಶವಾಗಿತ್ತು. ಅದರಂತೆ ಎರಡು ಗ್ರಾಮಗಳ 180 ಎಕರೆ ಜಮೀನಿನಲ್ಲಿ ಯೋಜನೆಯನ್ನು ಕಾರ್ಯರೂಪಕ್ಕೆ ತಂದಿದ್ದಾರೆ. ಈ ಯೋಜನೆಗೆ ಬಳಸಿದ ಜಮೀನು ಸರಕಾರದ್ದಾಗಿರದೆ ಸ್ಥಳೀಯರದ್ದೇ ಆಗಿತ್ತು. ಜನರ ಬಳಿ ಕೃಷಿಗೆ ಪ್ರತಿದಿನ ನೀರು ಸಿಗುತ್ತದೆಂದು ನಂಬಿಸಿ ಅವರ ಜಮೀನಿನಲ್ಲಿ ಯೋಜನೆಯ ಪೈಪನ್ನು ಅಳವಡಿಸಿದ್ದಾರೆ. ಆದರೆ ಯಾವುದೇ ರೀತಿಯ ಪರಿಹಾರವನ್ನು ಜನರಿಗೆ ನೀಡಿಲ್ಲ. ರೈತರು ತಮಗೆ ನೀರು ಬರುತ್ತದೆ ಎಂಬ ಆಸೆಯಿಂದ ಇದಕ್ಕೆ ಒಪ್ಪಿಕೊಂಡು ಜಮೀನನ್ನು ನೀಡಿದ್ದರು. ಈ ಯೋಜನೆಯಾದ ಎರಡು ದಿನ ಕೃಷಿಗೆ ನೀರನ್ನು ಬಳಸಿದ್ದಾರೆ. ನಂತರ ಈ ಏತ ನೀರಾವರಿಯಿಂದ ಯಾವ ಪ್ರಯೋಜನವೂ ರೈತರಿಗೆ ಆಗಿಲ್ಲ. ಅಷ್ಟೇ ಅಲ್ಲದೆ ಈ ಯೋಜನೆಯನ್ನು ಮುಂದಿನ ತಿಂಗಳಿನಲ್ಲಿ ನಿಲ್ಲಿಸಬೇಕೆಂದು ಅಧಿಕಾರಿಗಳು ಸೂಚಿಸಿದ್ದು, ಅಷ್ಟೆಲ್ಲಾ ಭೂಮಿಯನ್ನು ನಾಶ ಮಾಡಿದ ಈ ಯೋಜನೆ ಮೂಲೆ ಸೇರುತ್ತಿದೆ. ಭೂಮಿ ಕೊಟ್ಟ ರೈತರ ಪಾಲಿಗೆ ಇತ್ತ ಭೂಮಿಯೂ ಇಲ್ಲ, ಅತ್ತ ಕೃಷಿಗೆ ನೀರೂ ಇಲ್ಲದಂತಾಗಿದೆ. ಈ ಯೋಜನೆಗೆ ಚಾಲನೆ ಕೊಟ್ಟು ಹೋದ ಜನಪ್ರತಿನಿಧಿಗಳು ಈ ಯೋಜನೆಯಿಂದಾದ ಸಮಸ್ಯೆಗಳ ಬಗ್ಗೆ ಗಮನಹರಿಸಿ ಸಜೀಪಮುನ್ನೂರು ಮತ್ತು ಮೂಡದ ಜನತೆಗೆ ನ್ಯಾಯ ಒದಗಿಸಬೇಕು.





