ಮದ್ಯ ಮಾರಿದ ಹಣದಿಂದ ಅಭಿವೃದ್ಧಿ ಹೇಗೆ ಸಾಧ್ಯ?
ಈ ದೇಶದಲ್ಲಿ ಪ್ರತಿ 90 ನಿಮಿಷಕ್ಕೊಬ್ಬ ವ್ಯಕ್ತಿ ಮದ್ಯಪಾನ ಚಟದಿಂದ ಸಾವನ್ನಪ್ಪುತ್ತಿದ್ದಾನೆ. ಪ್ರತಿ ವರ್ಷ 25 ಲಕ್ಷಕ್ಕೂ ಅಧಿಕ ಮಂದಿ ಮದ್ಯ ಸೇವನೆಯಿಂದ ದೇಶದಲ್ಲಿ ಸಾಯುತ್ತಾರೆ. ಮದ್ಯ ಕೇವಲ ಸೇವಿಸಿದವನನ್ನಷ್ಟೇ ಆಹುತಿ ತೆಗೆದುಕೊಳ್ಳುವುದಿಲ್ಲ. ಸಮಾಜವೂ ಅದರ ಪರಿಣಾಮವನ್ನು ಬೇರೆ ಬೇರೆ ರೀತಿಗಳಲ್ಲಿ ಉಣ್ಣಬೇಕಾಗುತ್ತದೆ. ದೇಶದ ಬಡತನದ ಹಿಂದೆ ಮದ್ಯಪಾನ ತನ್ನದೇ ರೀತಿಯಲ್ಲಿ ಕೆಲಸ ಮಾಡಿದೆ. ಇಡೀ ಕುಟುಂಬವೇ ಆತ್ಮಹತ್ಯೆ ಮಾಡಿಕೊಳ್ಳುವಂತಹ ಸನ್ನಿವೇಶವನ್ನು ಮದ್ಯಪಾನ ನಿರ್ಮಾಣ ಮಾಡುತ್ತಿದೆ. ಮದ್ಯಪಾನ ತಳಸ್ತರ ಸಮಾಜ ಅಭಿವೃದ್ಧಿಯ ಕಡೆಗೆ ಸಾಗದಂತೆ ತಡೆಯುವ ಬಲಾಢ್ಯ ಗೋಡೆಯಾಗಿದೆ. ಶ್ರೀಮಂತರು ಮದ್ಯಪಾನದ ಚಟವನ್ನೇನೋ ಹೊಂದಿರುತ್ತಾರೆ, ಆದರೆ ಅದು ಅವರ ಸಾಮಾಜಿಕ ಮತ್ತು ಆರ್ಥಿಕ ಬದುಕಿನ ಮೇಲೆ ನೇರ ಪರಿಣಾಮವನ್ನು ಬೀರುವುದಿಲ್ಲ. ಆದರೆ ತಳಸ್ತರದ ಜನರಲ್ಲಿ ಅದು ಹಾಗಿಲ್ಲ.
ಮದ್ಯ ಸೇವಿಸಿದವನ ಸಾಮಾಜಿಕ, ಆರ್ಥಿಕ ಸ್ಥಾನಮಾನವನ್ನೇ ಕಿತ್ತುಕೊಳ್ಳುತ್ತದೆ. ನಿಧಾನಕ್ಕೆ ಅದು ಇತರರಿಗೂ ಸಮಸ್ಯೆಯಾಗಿ ಸುತ್ತಿಕೊಳ್ಳುತ್ತದೆ. ಮನೆಮಂದಿ ಬೀದಿ ಪಾಲಾಗುವಂತಹ ಸನ್ನಿವೇಶ ನಿರ್ಮಾಣವಾಗುತ್ತದೆ. ವಿಪರ್ಯಾಸವೆಂದರೆ ಸರಕಾರ ಮನಸ್ಸು ಮಾಡಿದರೆ ತಳಸ್ತರವರನ್ನು ಇಂತಹದೊಂದು ಮೃತ್ಯು ಕೂಪದಿಂದ ಎಂದೋ ಮೇಲೆತ್ತಬಹುದಾಗಿತ್ತು. ಆದರೆ ಅದು ಸರಕಾರಕ್ಕೇ ಇಷ್ಟವಿಲ್ಲ. ಯಾಕೆಂದರೆ, ಇಂದು ಸರಕಾರದ ಬೊಕ್ಕಸಕ್ಕೆ ಬಂದು ಬೀಳುವ ಬಹುದೊಡ್ಡ ಮೊತ್ತದ ಮೂಲ ಅಬಕಾರಿ ಇಲಾಖೆಯಾಗಿದೆ. ಬಿಹಾರದಂತಹ ರಾಜ್ಯದಲ್ಲಿ ಮದ್ಯಪಾನ ನಿಷೇಧ ಮಾಡುವುದಕ್ಕೆ ಅಲ್ಲಿನ ಮುಖ್ಯಮಂತ್ರಿ ದಿಟ್ಟ ನಿರ್ಧಾರವನ್ನು ತೆಗೆದುಕೊಂಡರು. ಕೇರಳದಲ್ಲೂ ಈ ಪ್ರಯೋಗ ನಡೆಯಿತು. ಆದರೆ ಸಮಾಜವಾದಿ ಹಿನ್ನೆಲೆಯಿಂದ ಬಂದಿರುವ, ಪ್ರಗತಿಪರ, ಬಡವರಪರ ಎಂದು ಕರೆದುಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾತ್ರ ಮದ್ಯಪಾನ ನಿಷೇಧ ಬೇಕಾಗಿಲ್ಲ. ಸರಕಾರದ ಬೊಕ್ಕಸಕ್ಕೆ ಅತ್ಯಧಿಕ ಹಣ ಅಬಕಾರಿ ಮೂಲದಿಂದ ಬರುವುದರಿಂದ, ಮದ್ಯಪಾನಕ್ಕೆ ಪರೋಕ್ಷವಾಗಿ ಪ್ರೋತ್ಸಾಹ ನೀಡುವ ಕೆಲಸವನ್ನು ಮಾಡಲು ಹೊರಟಿದ್ದಾರೆ. ನಾಡನ್ನು ಅಭಿವೃದ್ಧಿಗೊಳಿಸಲು ಹಣ ಬೇಕು, ಆದ್ದರಿಂದ ಮದ್ಯಮಾರಾಟದಲ್ಲಿ ಹೆಚ್ಚಳವಾಗಬೇಕು ಎಂದು ಸರಕಾರ ಹೇಳುತ್ತಿದೆ. ಈ ಹಣದಿಂದ ಸರಕಾರ ಯಾರ ಅಭಿವೃದ್ಧಿ ಮಾಡಲು ಹೊರಟಿದೆ?
ಮದ್ಯಪಾನದ ನೇರ ಬಲಿಪಶುಗಳು ಈ ನಾಡಿನ ಬಡವರು. ಸರಕಾರವು ಮದ್ಯದ ಆಮಿಷವೊಡ್ಡಿ ಅವರ ಜೇಬಿನಿಂದಲೇ ಹಣವನ್ನು ಕಸಿದು ತನ್ನ ಬೊಕ್ಕಸ ತುಂಬಿಕೊಳ್ಳಲು ಹೊರಟಿದೆ. ಬಡವರನ್ನು ಸರ್ವನಾಶ ಮಾಡಿ, ಅದರಿಂದ ದಕ್ಕಿದ ಹಣವನ್ನು ಯಾರ ಅಭಿವೃದ್ಧಿಗೆ ಬಳಸುವುದಕ್ಕೆ ಹೊರಟಿದೆ? ಸಿದ್ದರಾಮಯ್ಯ ಇದಕ್ಕೆ ಉತ್ತರಿಸಲೇಬೇಕಾಗುತ್ತದೆ. ಅಭಿವೃದ್ಧಿಯೆನ್ನುವುದು ಬಡವರ ಉದ್ಧಾರ ಎಂದಾಗಿದ್ದರೆ ಸರಕಾರ ಮಾಡಬೇಕಾಗಿರುವ ಮೊದಲ ಕೆಲಸವೇ ಮದ್ಯಪಾನ ನಿಷೇಧ ಮಾಡುವುದು. ಇದು ಕೃಷಿಕರು, ಕಾರ್ಮಿಕರನ್ನು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಮೇಲೆತ್ತಿ ನಿಲ್ಲಿಸುತ್ತದೆ. ಕೃಷಿಕರು ಮದ್ಯದ ಚಟದಿಂದ ಮನೆಮಠ ಮಾರುವುದು ಉಳಿಯುತ್ತದೆ. ಅವರ ಆರೋಗ್ಯದ ಮೇಲೆ, ಮಕ್ಕಳ ಶಿಕ್ಷಣದ ಮೇಲೂ ಸಕಾರಾತ್ಮಕ ಪರಿಣಾಮವಾಗುತ್ತದೆ. ಮದ್ಯಪಾನದಿಂದ ಸರಕಾರದ ಬೊಕ್ಕಸಕ್ಕೆ ದುಡ್ಡೇನೋ ಬಂದು ಬೀಳಬಹುದು. ಆದರೆ ಅದಕ್ಕೆ ತೆರುವ ಬೆಲೆಯಾದರೂ ಎಂತಹದು? ಬರುವ ದುಡ್ಡಿಗಿಂತ ದುಪ್ಪಟ್ಟು ಹಣವನ್ನು ಸರಕಾರ ವ್ಯಯ ಮಾಡಬೇಕಾಗುತ್ತದೆ.
ಅನಾರೋಗ್ಯ, ಅಪರಾಧ, ಅಪೌಷ್ಟಿಕತೆ, ಬಡತನ, ಅನಕ್ಷರತೆ ಇವೆಲ್ಲಕ್ಕೂ ಸರಕಾರ ಹೂಡುವ ಹಣವನ್ನು ಮದ್ಯಪಾನ ವ್ಯರ್ಥಗೊಳಿಸುತ್ತದೆ. ತಳಸ್ತರದ ಜನರ ಹಣ ಮತ್ತು ಆರೋಗ್ಯವನ್ನು ಬಲಿತೆಗೆದುಕೊಳ್ಳುವ ಮದ್ಯಪಾನವನ್ನು ನಿಷೇಧಿಸಿದ ಬಳಿಕವೇ ಸರಕಾರ ಅವರಿಗಾಗಿ ಯೋಜನೆಗಳನ್ನು ಘೋಷಿಸಬೇಕು. ಆಗ ಮಾತ್ರ ಅದು ಫಲಿತಾಂಶವನ್ನು ನೀಡಬಹುದು. ವಿಪರ್ಯಾಸವೆಂದರೆ, ಉದ್ಯಮಿಗಳು ಇಂದು ಕೃಷಿಕರ ಭೂಮಿಯನ್ನು ಬೃಹತ್ ಕೈಗಾರಿಕೆಯ ಹೆಸರಲ್ಲಿ ಕಿತ್ತುಕೊಂಡು ಅವರ ಕೈತುಂಬ ದುಡ್ಡನ್ನು ನೀಡುತ್ತಾರೆ. ಮಗದೊಂದೆಡೆ ಸರಕಾರ ಮದ್ಯದ ಆಸೆ ತೋರಿಸಿ ಆ ಹಣವನ್ನು ಕಿತ್ತುಕೊಳ್ಳುತ್ತದೆ. ಕೈಗೆ ಸಿಕ್ಕಿದ ಪರಿಹಾರದ ದುಡ್ಡನ್ನು ತನ್ನ ಚಟಕ್ಕೆ ವ್ಯಯ ಮಾಡಿ ಇತ್ತ ಭೂಮಿಯೂ ಇಲ್ಲದೆ, ಅತ್ತ ಹಣವೂ ಇಲ್ಲದೆ ರೈತರು ಬೀದಿಪಾಲಾಗಿ ನಗರದ ಕೊಳೆಗೇರಿ ಸೇರಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಸದ್ಯದ ಸ್ಥಿತಿಯಲ್ಲಿ ಹೇಗಾದರೂ ಸರಿ, ಸರಕಾರಕ್ಕೆ ದುಡ್ಡು ಬೇಕು. ಅಭಿವೃದ್ಧಿಗೂ ಬಡವರಿಗೂ ಯಾವುದೇ ಸಂಬಂಧವಿಲ್ಲ ಎನ್ನುವಂತಹ ಮನಸ್ಥಿತಿಗೆ ಸರಕಾರದ ನಿರ್ಧಾರ ಪೂರಕವಾಗಿದೆ. ಅಂದರೆ ಬೃಹತ್ ಸೇತುವೆ, ಮೆಟ್ರೋ, ಹೆದ್ದಾರಿ, ಐಟಿ, ಬಿಟಿ, ಸ್ಮಾರ್ಟ್‌ಸಿಟಿ...ಇವೇ ಸರಕಾರದ ದೃಷ್ಟಿಯಲ್ಲಿ ಅಭಿವೃದ್ಧಿ. ಆದರೆ ಇದರ ಫಲಾನುಭವಿಗಳು ಯಾರು? ಅಂದರೆ ತಳಸ್ತರದ ಜನರ ಬದುಕುವ ಹಕ್ಕನ್ನೇ ಕಿತ್ತುಕೊಂಡು ತನ್ನ ಅಭಿವೃದ್ಧಿಯನ್ನು ಜಾರಿಗೊಳಿಸಲು ಸರಕಾರ ಉದ್ದೇಶಿಸಿದೆಯೇ?
ಇತ್ತೀಚೆಗೆ ಬೆಂಗಳೂರು ಕ್ರೈಂ ನಗರವಾಗಿ ಗುರುತಿಸಿಕೊಳ್ಳುತ್ತಿದೆ. ಇದಕ್ಕೆ ಪರೋಕ್ಷವಾಗಿ ಮದ್ಯಪಾನದ ಕೊಡುಗೆಯೆಷ್ಟು ಎನ್ನುವುದು ಸರಕಾರಕ್ಕೆ ಗೊತ್ತಿಲ್ಲದ ಸಂಗತಿಯೇನಲ್ಲ. ಒಂದು ವೇಳೆ ಸಂಪೂರ್ಣ ಮದ್ಯಪಾನ ನಿಷೇಧವನ್ನು ಮಾಡಿದ್ದೇ ಆದಲ್ಲಿ ಬೆಂಗಳೂರಿನಂತಹ ನಗರಗಳಲ್ಲಿ ಅರ್ಧಕ್ಕರ್ಧ ಅಪರಾಧ ಪ್ರಕರಣಗಳಿಗೆ ಕಡಿವಾಣ ಬೀಳುತ್ತದೆ. ಪೊಲೀಸರ ಒತ್ತಡ ತನ್ನಷ್ಟಕ್ಕೆ ಕಡಿಮೆಯಾಗುತ್ತದೆ. ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಯುವಕರ ವಿವೇಕ ವಿವೇಚನೆಗಳನ್ನು ಕಸಿದುಕೊಂಡು ಅವರಿಂದ ಅನರ್ಥಗಳನ್ನು ಮಾಡಿಸಿರುವುದು ಮದ್ಯವೇ ಆಗಿದೆ. ಅಂದು ಎಂದಿಗಿಂತ ಹೆಚ್ಚು ಹೊತ್ತು ಬಾರ್‌ಗಳನ್ನು ತೆರೆದಿಡಲು ಹೇಳಿ, ಬಳಿಕ ಅಕ್ರಮಗಳ ಕುರಿತಂತೆ ಗೃಹ ಸಚಿವರು ಪತ್ರಿಕಾಗೋಷ್ಠಿ ನಡೆಸಿದರೆ ಪರಿಸ್ಥಿತಿ ಸುಧಾರಣೆಯಾಗುತ್ತದೆಯೇ? ಸಂಪೂರ್ಣ ಮದ್ಯಪಾನ ನಿಷೇಧ ನಗರವನ್ನು, ಗ್ರಾಮೀಣ ಪ್ರದೇಶವನ್ನು ವಿವೇಕದ ಕಡೆಗೆ ಮುನ್ನಡೆಸುವುದರಲ್ಲಿ ಯಾವುದೇ ಸಂಶಯ ಇಲ್ಲ.
ಬೆಂಗಳೂರು ಸೇರಿದಂತೆ ನಾಡಿನಾದ್ಯಂತ ಹೆಣ್ಣಿನ ಮೇಲೆ ನಡೆಯುವ ದೌರ್ಜನ್ಯಗಳು ಮತ್ತು ಇನ್ನಿತರ ಅಕ್ರಮಗಳನ್ನು ತಡೆಯುವ ಪ್ರಾಮಾಣಿಕ ಉದ್ದೇಶವನ್ನು ಸರಕಾರ ಹೊಂದಿದ್ದರೆ, ‘ಮದ್ಯಪಾನ ನಿಷೇಧ’ದೊಂದಿಗೇ ಅದು ಶುರುವಾಗಲಿ. ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್. ಎಸ್. ದೊರೆಸ್ವಾಮಿಯವರ ನೇತೃತ್ವದಲ್ಲಿ ಮದ್ಯಪಾನ ನಿಷೇಧಕ್ಕೆ ಒತ್ತಾಯಿಸಿ ಪಾದಯಾತ್ರೆಯೊಂದು ನಡೆಯಿತು. ಮದ್ಯದಿಂದ ಸಂಗ್ರಹಿಸಿದ ಪಾಪದ ಹಣದಿಂದ ಯಾವ ಅಭಿವೃದ್ಧಿ ಕೆಲಸವನ್ನೂ ಮಾಡುವ ಅಗತ್ಯವಿಲ್ಲ ಎನ್ನುವುದನ್ನು ಸರಕಾರಕ್ಕೆ ದೊರೆಸ್ವಾಮಿ ಕೂಗಿ ಹೇಳಿದ್ದಾರೆ. ಆ ಕೂಗಿನ ಒಳಗಿರುವ ಕಳಕಳಿಯನ್ನು ಸರಕಾರ ಇನ್ನಾದರೂ ಅರ್ಥಮಾಡಿಕೊಳ್ಳಬೇಕು. ಪಾಪದ ಹಣದಿಂದ, ಬಡವರ ಕಣ್ಣೀರಿನ ಹಣದಿಂದ ಮಾಡುವ ರಸ್ತೆ, ಸೇತುವೆಗಳು ಈ ನಾಡನ್ನು ಪ್ರಗತಿಯೆಡೆಗೆ ಕೊಂಡೊಯ್ಯಲಾರದು. ಅದು ಈ ನಾಡನ್ನು ಪತನದೆಡೆಗಷ್ಟೇ ಕೊಂಡೊಯ್ಯಬಹುದು. ಇದನ್ನು ಸಿದ್ಧರಾಮಯ್ಯ ಅರ್ಥ ಮಾಡಿಕೊಂಡರೆ ಈ ನಾಡಿನ ಭವಿಷ್ಯವನ್ನು ಉಳಿಸಿದ ಹೆಗ್ಗಳಿಕೆ ಅವರದಾಗುತ್ತದೆ.







