ಆಲಪ್ಪುಝದಲ್ಲಿ ಹಾಡಹಗಲೇ ವಿದೇಶಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ

ಆಲಪ್ಪುಝ,ಜ.6: ಕೇರಳದ ಆಲಪ್ಪುಝದಲ್ಲಿ ವಿದೇಶಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ ಘಟನೆ ಗುರುವಾರ ನಡೆದಿದೆ. ಪರಿಸರ ಸಂಘಟನೆ ಐಟ್ರಿಯಲ್ಲಿ ಇಂಟರ್ನ್‌ಶಿಪ್‌ಗೆ ಬಂದ ಭೂತಾನ್‌ನ ನೇಹಾ ರಾಯ್(22) ಲೈಂಗಿಕ ಅವಮಾನಕ್ಕೊಳಗಾದ ವಿದ್ಯಾರ್ಥಿನಿಯಾಗಿದ್ದಾರೆ. ಗುರುವಾರ ಬೆಳಗ್ಗೆ ಹತ್ತುಗಂಟೆಗೆ ಮುಲ್ಲಕ್ಕಲ್ ಅಮ್ಮನ್‌ಕೋವಿಲ್ ರಸ್ತೆಯಲ್ಲಿ ಬೈಕ್‌ನಲ್ಲಿ ಬಂದ ಯುವಕ ವಿದ್ಯಾರ್ಥಿನಿಗೆ ಕಿರುಕುಳ ನೀಡಲು ಯತ್ನಿಸಿದ್ದಾನೆ.
ಮೆಕಾನಿಕಲ್ ಇಂಜಿನಿಯರ್ ಆಗಿರುವ ನೇಹಾ ಐಟ್ರಿಯಲ್ಲಿ ಇಂಟರ್ನ್‌ಶಿಪ್‌ಗಾಗಿ ಎರಡು ತಿಂಗಳ ಹಿಂದೆ ಬಂದಿದ್ದರು. ಅವರ ದೂರಿನ ಪ್ರಕಾರ ಅಪರಿಚಿತ ಯುವಕ ವಿರುದ್ಧ ಕೇಸು ದಾಖಲಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
711 ಕೊನೆ ನಂಬರ್ ಇರುವ ಬೈಕ್‌ನಲ್ಲಿ ಬಿಳಿ ಶರ್ಟು ಧರಿಸಿದ್ದ ಯುವಕ ನೇಹಾರಿಗೆ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ್ದು, ಆತನಿಗೆ ಸುಮಾರು 40ವರ್ಷ ವಯಸ್ಸಿರಬಹುದು ಎಂದು ದೂರಿನಲ್ಲಿ ವಿವರಿಸಲಾಗಿದೆ. ಸಮೀಪದ ಬ್ಯಾಕೊಂದರ ಸಿಸಿಟಿವಿ ಕ್ಯಾಮರಾದಲ್ಲಿ ದುಷ್ಕರ್ಮಿಯ ಚಿತ್ರ ದಾಖಲಾಗಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆಂದು ವರದಿಯಾಗಿದೆ.





