ಕ್ಯಾಶ್ ಲೆಸ್ ಆರ್ಥಿಕತೆ ದೇಶಕ್ಕೆ ವರ : ನೊಬೆಲ್ ಪುರಸ್ಕೃತ ಮೊಹಮ್ಮದ್ ಯೂನುಸ್

ಹೈದರಾಬಾದ್, ಜ. 6 : ಕ್ಯಾಶ್ ಲೆಸ್ ಆರ್ಥಿಕತೆ ದೇಶದ ಪಾಲಿಗೆ ವರದಾನವಾಗಿದೆ’’ ಎಂದು ಗ್ರಾಮೀಣ್ ಬ್ಯಾಂಕ್ ಸ್ಥಾಪಕ ಹಾಗೂ 2006ರ ನೊಬೆಲ್ ಪ್ರಶಸ್ತಿ ಪುರಸ್ಕೃತ ಮೊಹಮ್ಮದ್ ಯೂನುಸ್ ಹೇಳಿದ್ದಾರೆ.
ಆಂಧ್ರ ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ವಿಚಾರ ಸಂಕಿರಣವೊಂದರಲ್ಲಿ ಭಾಗವಹಿಸಲು ಬಂದಿದ್ದಾಗ 'ದಿ ಹಿಂದೂ' ಪತ್ರಿಕೆಯೊಂದಿಗೆ ಮಾತನಾಡಿದ ಅವರು‘‘ನೋಟು ಅಮಾನ್ಯೀಕರಣ ಒಂದಲ್ಲ ಒಂದು ದಿನ ಆಗಲೇಬೇಕಾಗಿತ್ತು’’ ಎಂದಿದ್ದಾರೆ. ‘‘ಕ್ಯಾಶ್ ಲೆಸ್ ಮಾದರಿಗೆ ಹಲವು ಉತ್ತೇಜನಾಕಾರಿ ಯೋಜನೆಗಳನ್ನು ಸೇರಿಸಿದಾಗ ಅದು ಯಶಸ್ವಿಯಾಗುತ್ತದೆ. ಅಮಾನ್ಯೀಕರಣವು ಗ್ರಾಮೀಣ ಜನತೆ ಮತ್ತು ಅಸಂಘಟಿತ ವಲಯಗಳನ್ನು ಬ್ಯಾಂಕಿಂಗ್ ಸೇವೆಗೆ ಶಾಮೀಲುಗೊಳಿಸಿದೆ,’’ ಎಂದರು.
‘‘ನೋಟು ರದ್ದತಿಯು ಕಾಳಧನವನ್ನು ಕೊಲ್ಲುವುದಲ್ಲದೆ ಲಿಕ್ವಿಡಿಟಿಯನ್ನೂ ಹೆಚ್ಚಿಸಿದೆ,’’ ಎಂದು ಅವರು ಹೇಳಿದ್ದಾರೆ. ‘‘ಸಣ್ಣ ಮೊತ್ತದ ಸಾಲ ನೀಡಿಕೆ ಒಂದು ಸಾಮಾಜಿಕ ಉದ್ಯಮವಾಗಿದೆ. ಇದು ಬ್ಯಾಂಕರ್ ಹಾಗೂ ಗ್ರಾಹಕರ ನಡುವಿನ ವಿಶ್ವಾಸದ ವಿಚಾರವಾಗಿದೆ,’’ ಎಂದು ಯೂನುಸ್ ನುಡಿದರು.
ತಾವು 1976ರಲ್ಲಿ ಸ್ಥಾಪಿಸಿದ ಗ್ರಾಮೀಣ್ ಬ್ಯಾಂಕುಗಳು ಬ್ಯಾಂಕಿಂಗನ್ನು ಗ್ರಾಮೀಣ ಮಹಿಳೆಯರ ಮನೆಬಾಗಿಲುಗಳಿಗೆ ಕೊಂಡು ಹೋಗಿದೆಯಲ್ಲದೆ ಹಾಲಿ 90 ಕ್ಷಕ್ಕೂ ಅಧಿಕ ಗ್ರಾಹಕರನ್ನು ಹೊಂದಿದೆ, ಎಂದವರು ಮಾಹಿತಿ ನೀಡಿದರು.







