80ರ ವೃದ್ಧೆಗೆ ಅಮಾನುಷ ಲೈಂಗಿಕ ಕಿರುಕುಳ, ಬರ್ಬರ ಹತ್ಯೆ
ಇನ್ನೊಂದು ನಿರ್ಭಯ!

ಚಂಡೀಗಢ, ಜ.6: ಅಮಾನುಷ ಲೈಂಗಿಕ ದೌರ್ಜನ್ಯ ನಡೆಸಿ 80 ವರ್ಷದ ವಯೋವೃದ್ಧೆಯೊಬ್ಬರನ್ನು ಬರ್ಬರವಾಗಿ ಹತ್ಯೆಗೈದ ಘಟನೆ ಹರ್ಯಾಣದ ಸೋನಿಪತ್ ಜಿಲ್ಲೆಯ ಬಾತ್ ಗಾಂವ್ ಹಳ್ಳಿಯಿಂದ ಬುಧವಾರ ವರದಿಯಾಗಿದೆ.
ಅಪರಿಚಿತ ದುಷ್ಕರ್ಮಿಗಳು ಸಂತ್ರಸ್ತೆಯ ಗುದದ್ವಾರದೊಳಗೆ ಟಾಯ್ಲೆಟ್ ಶುಚಿಗೊಳಿಸುವ ದ್ರವ ಹಾರ್ಪಿಕ್ ಇದರ ಪ್ಲಾಸ್ಟಿಕ್ ಬಾಟಲಿಯೊಂದನ್ನು ತುರುಕಿಸಿ ಆಕೆ ತೀವ್ರ ರಕ್ತಸ್ರಾವದಿದ ಸಾವಿಗೀಡಾಗುವಂತೆ ಮಾಡಿದ್ದಾರೆ. ಅತ್ಯಾಚಾರ ನಡೆಸಿದ ಕುರುಹುಗಳು ಸದ್ಯಕ್ಕೆ ಪತ್ತೆಯಾಗಿಲ್ಲವಾದರೂ ಲೈಂಗಿಕ ಹಲ್ಲೆ ನಡೆದಿರಬಹುದಾದ ಸಾಧ್ಯತೆಗಳನ್ನು ಪೊಲೀಸರು ಅಲ್ಲಗಳೆದಿಲ್ಲ.
ವೃದ್ಧೆಯ ಮೃತದೇಹದ ಪೋಸ್ಟ್ ಮಾರ್ಟಂ ನಡೆಸಿದ ವೈದ್ಯರು ತಾವು ಇಂತಹ ಅಮಾನುಷ ಲೈಂಗಿಕ ಕಿರುಕುಳ ಪ್ರಕರಣ ನೋಡಿಲ್ಲ ಹಾಗೂ ಇದು ತಮಗೆ ಡಿಸೆಂಬರ್ 2012ರ ನಿರ್ಭಯಾ ಪ್ರಕರಣವನ್ನು ನೆನಪಿಸುತ್ತದೆ ಎಂದಿದ್ದಾರೆ.
ವೃದ್ಧೆಯ ರಕ್ತಸಿಕ್ತ ಮೃತದೇಹ ಬುಧವಾರ ಬೆಳಗ್ಗೆ ಆಕೆಯ ಮನೆಯ ನೆಲ ಅಂತಸ್ತಿನಲ್ಲಿರುವ ಮಂಚದ ಮೇಲೆ ಪತ್ತೆಯಾಗಿತ್ತು. ಆಕೆಯನ್ನು ಸೋನಿಪತ್ ಸಿವಿಲ್ ಆಸ್ಪತ್ರೆಗೆ ಸಾಗಿಸಿದ ನಂತರವಷ್ಟೇ ಆಕೆಯ ಗುದದ್ವಾರದೊಳಗೆ ಪ್ಲಾಸಿಕ್ ಬಾಟಲಿ ತುರುಕಿಸಿರುವುದು ಪತ್ತೆಯಾಗಿತ್ತು. ಬಾಟಲಿಯನ್ನು ತುರುಕಿಸಿದ ರಭಸಕ್ಕೆ ವೃದ್ಧೆಯ ಸಣ್ಣ ಮತ್ತು ದೊಡ್ಡ ಕರುಳು ಕೂಡ ಹಾನಿಗೀಡಾಗಿತ್ತು. ಆಂತರಿಕ ರಕ್ತಸ್ರಾವದಿಂದ ಆಕೆಯ ಶ್ವಾಸಕೋಶದೊಳಗೂ ರಕ್ತ ಹರಿದು ಆಕೆ ಉಸಿರುಗಟ್ಟಿ ಸಾವಿಗೀಡಾಗಿರಬೇಕೆಂದು ಶಂಕಿಸಲಾಗಿದೆ.
ಕೊಲೆಗೀಡಾದ ವೃದ್ಧೆ ನೆಲ ಅಂತಸ್ತಿನಲ್ಲಿ ವಾಸವಾಗಿದ್ದರೆ, ಆಕೆಯ ಇಬ್ಬರು ಪುತ್ರರಲ್ಲಿ ಒಬ್ಬರು ತಮ್ಮ ಕುಟುಂಬದೊಂದಿಗೆ ಮೊದಲನೆ ಅಂತಸ್ತಿನಲ್ಲಿ ವಾಸವಾಗಿದ್ದಾರೆ. ಆಕೆಯ ಪುತ್ರ ಜೈ ಭಗವಾನ್ ಸಣ್ಣ ರೈತನಾಗಿದ್ದು, 10 ಎಕರೆ ಭೂಮಿಯನ್ನು ಲೀಸ್ ಮೇಲೆ ಪಡೆದು ಅಲ್ಲಿ ಸಾಗುವಳಿ ನಡೆಸುತ್ತಿದ್ದಾರೆ. ಈ ಕುಟುಂಬ ಹಿಂದುಳಿದ ವರ್ಗಕ್ಕೆ ಸೇರಿದೆ.
ಕೊಲೆಗಾರ ಮನೆಯೊಳಗೆ ಹೇಗೆ ಪ್ರವೇಶಿಸಿದನೆಂದು ಇನ್ನಷ್ಟೇ ತಿಳಿಯಬೇಕಿದ್ದು, ಜೈ ಭಗವಾನ್ ಅವರೇ ತಮ್ಮ ತಾಯಿ ಕೊಲೆಯಾಗಿ ಬಿದ್ದಿರುವುದನ್ನು ನೋಡಿದವರಲ್ಲಿ ಮೊದಲಿಗರಾಗಿದ್ದರು.
ಹರ್ಯಾಣದಿಂದ ಇತ್ತೀಚಿಗಿನ ವರ್ಷಗಳಲ್ಲಿ ವರದಿಯಾದ ಅಮಾನುಷ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಇದು ಎರಡನೆಯದಾಗಿದೆ. ಫೆಬ್ರವರಿ 1 2015ರಂದು ರೋಹ್ಟಕ್ ನಿಂದ ನಾಪತ್ತೆಯಾಗಿದ್ದ 28 ವರ್ಷದ ನೇಪಾಳಿ ಯುವತಿಯೊಬ್ಬಳ ಮೃತದೇಹ ಫೆಬ್ರವರಿ 4ರಂದು ಪತ್ತೆಯಾದಾಗ ಆಕೆಯ ಮೇಲಿನ ದೌರ್ಜನ್ಯ ಬೆಳಕಿಗೆ ಬಂದಿತ್ತು. ಆಕೆಯ ಖಾಸಗಿ ಭಾಗಗಳೊಳಗೆ ಕಾಂಡೋಂ ಮತ್ತು ಬೆತ್ತವೊಂದನ್ನುದುಷ್ಕರ್ಮಿಗಳು ತುರುಕಿಸಿ ಕೊಲೆಗೈದಿದ್ದರು.







