ಬಾಕ್ಸ್ ಆಫೀಸ್ ಚಿಂದಿ ಉಡಾಯಿಸಿದ ದಂಗಲ್
ಸಾರ್ವಕಾಲಿಕ ಪ್ರಥಮ, ದ್ವಿತೀಯ ಸ್ಥಾನಿ ಆಗುವ ಹಾದಿಯಲ್ಲಿ ಆಮಿರ್ !

ಹೊಸದಿಲ್ಲಿ,ಜ.6 : ಆಮಿರ್ ಖಾನ್ ಅಭಿನಯದ ದಂಗಲ್ ಚಿತ್ರ ಪ್ರೇಕ್ಷಕರನ್ನು ಅದೆಷ್ಟು ಸೆಳೆದಿದೆಯೆಂದರೆ ಅದು ದಾಖಲೆಗಳನ್ನೇ ಸೃಷ್ಟಿಸುವತ್ತ ಹಜ್ಜೆ ಹಾಕುತ್ತಿದೆ ಹಾಗೂ ಬಾಕ್ಸ್ ಆಫೀಸನ್ನು ಚಿಂದಿ ಉಡಾಯಿಸಿದೆ. ಕಳೆದ ವರ್ಷ ಬಾಕ್ಸ್ ಆಫೀಸ್ ನಲ್ಲಿ ಅತ್ಯಂತ ಹೆಚ್ಚು ಬಾಚಿದ ಚಿತ್ರವೆಂಬ ಹೆಗ್ಗಳಿಕೆಗೆ ಪಾತ್ರವಾದ ದಂಗಲ್, ಸಲ್ಮಾನ್ ಖಾನ್ ಅವರ ಸುಲ್ತಾನನ್ನು ಹಿಂದಿಕ್ಕಿದೆ.
ದಂಗಲ್ ಚಿತ್ರ ತನ್ನ ಮೂರನೇ ವಾರದ ಪ್ರದರ್ಶನದಲ್ಲಿಯೇ ಆಮಿರ್ ಅವರ ಹಿಂದಿನ ಚಿತ್ರ ಪೀಕೆ ಬಾಚಿದ್ದ ದಾಖಲೆ ಗಳಿಕೆಯನ್ನೂ ಮೀರಿಸುವತ್ತ ಹಜ್ಜೆ ಹಾಕಿದೆಯೆಂದು ಚಿತ್ರರಂಗದ ಖ್ಯಾತ ವಿಶ್ಲೇಷಕ ತರಣ್ ಆದರ್ಶ್ ಟ್ವೀಟ್ ಮಾಡಿದ್ದಾರೆ. ಹಿಂದಿ ಚಿತ್ರವೊಂದು ಸಾರ್ವಕಾಲಿಕವಾಗಿ ಅತ್ಯಧಿಕ ಬಾಕ್ಸ್ ಆಫೀಸ್ ಗಳಿಕೆ ಮಾಡಿದ ಪ್ರಥಮ ಚಿತ್ರವೆಂಬ ಹೆಗ್ಗಳಿಕೆಗೆ ಪಾತ್ರವಾಗುವತ್ತಲೂ ದಂಗಲ್ ದಾಪುಗಾಲಿಡುತ್ತಿದೆ.
ಖ್ಯಾತ ಕುಸ್ತಿಪಟು ಮಹಾವೀರ್ ಸಿಂಗ್ ಪೋಗಟ್ ಮತ್ತವರ ಇಬ್ಬರು ಪುತ್ರಿಯರ ಧೀಮಂತ ಹೋರಾಟದ ಕಥೆಯಿರುವ ದಂಗಲ್ ಚಿತ್ರ ಜನವರಿ 4ರ ತನಕ ರೂ. 340.8 ಕೋಟಿ ಗಳಿಸಿದ್ದು ತಮ್ಮದೇ ಪೀಕೆ ಚಿತ್ರದ ದಾಖಲೆ ಸರಿಗಟ್ಟಲು ದಂಗಲ್ ಗೆ ಇನ್ನು ರೂ 36.42 ಕೋಟಿ ಗಳಿಕೆ ಅಗತ್ಯವಿದೆ,’’ ಎಂದು ತರುಣ್ ಆದರ್ಶ್ ಹೇಳಿದ್ದಾರೆ.
ಭಾರತದ ಬಾಕ್ಸ್ ಆಫೀಸ್ ನಲ್ಲಿ ಅತ್ಯಂತ ಹೆಚ್ಚು ಗಳಿಕೆಯ ಚಿತ್ರಗಳಲ್ಲಿ ಪೀಕೆ (ರೂ. 340.8 ಕೋಟಿ) ಪ್ರಥಮ ಸ್ಥಾನದಲ್ಲಿದ್ದರೆ, ನಂತರದ ಸ್ಥಾನಗಳು- ಬಜರಂಗಿ ಭಾಯಿಜಾನ್ (ರೂ. 320.34 ಕೋಟಿ), ದಂಗಲ್ (ರೂ 304.38 ಕೋಟಿ), ಸುಲ್ತಾನ್ ( ರೂ. 300.45 ಕೋಟಿ), ಧೂಮ್ 3 ( ರೂ. 284.27 ಕೋಟಿ).







